
ನೇಪಿಡಾವ್ (ಮ್ಯಾನ್ಮಾರ್):ಮ್ಯಾನ್ಮಾರ್ ಮತ್ತು ನೆರೆಯ ಥೈಲ್ಯಾಂಡ್‌ನಲ್ಲಿ ನಿನ್ನೆ ಶುಕ್ರವಾರ ಮಧ್ಯಾಹ್ನ ಹೊತ್ತಿಗೆ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಕಟ್ಟಡಗಳು, ಸೇತುವೆಗಳು, ರಸ್ತೆಗಳು, ಸಾರ್ವಜನಿಕ ಆಸ್ತಿಪಾಸ್ತಿಗಳು ನಾಶವಾಗಿದೆ. ಅನೇಕ ಸಾವು-ನೋವುಗಳು ವರದಿಯಾಗಿವೆ. ಭೂಕಂಪಕ್ಕೆ ಸಂಬಂಧಪಟ್ಟ ಫೋಟೋ-ವಿಡಿಯೊಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದು, ದೃಶ್ಯಗಳು ಭಯಾನಕವಾಗಿವೆ.
ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ ಸುಮಾರು 1000ಕ್ಕೆ ಏರಿಕೆಯಾಗಿದ್ದು, 2ಸಾವಿರಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ದೇಶದ ಆಡಳಿತಾರೂಢ ಜುಂಟಾ ಸರ್ಕಾರ ಇಂದು ಶನಿವಾರ ತಿಳಿಸಿದೆ.
ನಿನ್ನೆ ಶುಕ್ರವಾರ ಮಧ್ಯ ಮ್ಯಾನ್ಮಾರ್‌ನ ಸಾಗೈಂಗ್ ನಗರದ ವಾಯುವ್ಯಕ್ಕೆ 7.7 ತೀವ್ರತೆಯ ಭೂಕಂಪ ಸಂಭವಿಸಿದ್ದು, ದೇಶದ ದೊಡ್ಡ ಭಾಗಗಳಲ್ಲಿ ಭಾರೀ ಹಾನಿ ಸಂಭವಿಸಿದೆ. ದೇಶದ ಎರಡನೇ ಅತಿದೊಡ್ಡ ನಗರವಾದ ಮಂಡಲೇ ಸೇರಿದಂತೆ ಆರು ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ, ಇದು ಭೂಕಂಪದ ಕೇಂದ್ರಬಿಂದುವಿಗೆ ಹತ್ತಿರದಲ್ಲಿದ್ದು, ಪ್ರಕೃತಿ ವಿಕೋಪದಿಂದ ಭಾರೀ ವಿನಾಶ ಕಂಡಿದೆ.
ಮಂಡಲೇ ಪ್ರದೇಶದವೊಂದರಲ್ಲಿಯೇ ಭೂಕಂಪಕ್ಕೆ 694 ಮಂದಿ ಮೃತಪಟ್ಟಿದ್ದು, 1,670 ಜನರು ಗಾಯಗೊಂಡಿದ್ದಾರೆ ಎಂದು ಜುಂಟಾ ಮಾಹಿತಿ ತಂಡ ಹೇಳಿಕೆಯಲ್ಲಿ ತಿಳಿಸಿದೆ.
ಭೂಕಂಪದಿಂದ ಉಂಟಾದ ಸಾವು-ನೋವಿನ ಬಗ್ಗೆ ನಿಖರ ಮಾಹಿತಿ ಇನ್ನೂ ಸಿಕ್ಕಿಲ್ಲ. ಜನರ ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ.
ತುರ್ತು ಸಂಖ್ಯೆಗೆ ಕರೆ ಮಾಡಲು ಸೂಚನೆ
ಥೈಲ್ಯಾಂಡ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಬ್ಯಾಂಕಾಕ್ ಮತ್ತು ಥೈಲ್ಯಾಂಡ್‌ನ ಇತರ ಭಾಗಗಳಲ್ಲಿ ಪ್ರಬಲ ಭೂಕಂಪನಗಳು ದಾಖಲಾದ ನಂತರ, ಥಾಯ್ ಅಧಿಕಾರಿಗಳ ಸಮನ್ವಯದೊಂದಿಗೆ ರಾಯಭಾರ ಕಚೇರಿಯು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಇಲ್ಲಿಯವರೆಗೆ, ಯಾವುದೇ ಭಾರತೀಯ ನಾಗರಿಕರಿಗೆ ತೊಂದರೆಯಾದ ಬಗ್ಗೆ ವರದಿಯಾಗಿಲ್ಲ. ಯಾವುದೇ ತುರ್ತು ಸಂದರ್ಭದಲ್ಲಿ, ಥೈಲ್ಯಾಂಡ್‌ನಲ್ಲಿರುವ ಭಾರತೀಯ ಪ್ರಜೆಗಳು ತುರ್ತು ಸಂಖ್ಯೆ +66 618819218 ನ್ನು ಸಂಪರ್ಕಿಸಲು ಸೂಚಿಸಲಾಗಿದೆ. ಬ್ಯಾಂಕಾಕ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಚಿಯಾಂಗ್ ಮಾಯ್‌ನಲ್ಲಿರುವ ದೂತಾವಾಸದ ಎಲ್ಲಾ ಸದಸ್ಯರು ಸುರಕ್ಷಿತವಾಗಿದ್ದಾರೆ ಎಂದು ರಾಯಭಾರ ಕಚೇರಿ ಎಕ್ಸ್ ಖಾತೆಯಲ್ಲಿ ತಿಳಿಸಿದೆ.
ಮ್ಯಾನ್ಮಾರ್‌ಗೆ ಭಾರತ ನೆರವು, ಅಗತ್ಯ ಸಾಮಗ್ರಿಗಳ ರವಾನೆ
ಭೂಕಂಪದಿಂದ ಅಪಾರ ಸಾವು-ನೋವು ನಷ್ಟ ಉಂಟಾಗಿರುವ ಮ್ಯಾನ್ಮಾರ್ ಸಹಾಯಕ್ಕೆ ಭಾರತ ಮುಂದಾಗಿದೆ. ಮಾನವೀಯ ನೆರವು ನೀಡಲು ವಿಮಾನವನ್ನು ಕಳುಹಿಸಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ತಿಳಿಸಿದ್ದಾರೆ,
ಹಿಂಡನ್‌ನಿಂದ ಬಂದ ಭಾರತೀಯ ವಾಯುಪಡೆ ವಿಮಾನ IAF C-130J ವಿಮಾನದಲ್ಲಿ ಇಂದು ಎನ್ ಡಿಆರ್ ಎಫ್ ಸಿಬ್ಬಂದಿ ಟೆಂಟ್‌ಗಳು, ಮಲಗುವ ಚೀಲಗಳು, ಕಂಬಳಿಗಳು, ತಿನ್ನಲು ಸಿದ್ಧವಾದ ಆಹಾರ ಪದಾರ್ಥಗಳು, ನೀರಿನ ಬಾಟಲ್ ಗಳು, ನೈರ್ಮಲ್ಯ ಕಿಟ್‌ಗಳು, ಸೌರ ದೀಪಗಳು, ಜನರೇಟರ್ ಸೆಟ್‌ಗಳು,ಮಾತ್ರೆಗಳು, ಪ್ರತಿಜೀವಕ ಔಷಧಿಗಳು, ಸಿರಿಂಜ್‌ಗಳು, ಕೈಗವಸುಗಳು, ಹತ್ತಿ ಬ್ಯಾಂಡೇಜ್‌ಗಳು, ಮೂತ್ರ ಚೀಲಗಳಂತಹ ಅಗತ್ಯ ಔಷಧ ಸಾಮಗ್ರಿಗಳನ್ನು ಒಳಗೊಂಡಂತೆ 15 ಟನ್ ಪರಿಹಾರ ಸಾಮಗ್ರಿಗಳನ್ನು ಕಳುಹಿಸಲಾಗಿದೆ. ಅಗತ್ಯ ವಸ್ತುಗಳನ್ನು ಹೊತ್ತ ಸಿ -130 ಮಿಲಿಟರಿ ಸಾರಿಗೆ ವಿಮಾನವನ್ನು ರವಾನಿಸಲಾಗಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ತಿಳಿಸಿದ್ದಾರೆ.
ಈ ವಿಮಾನದ ಜೊತೆಗೆ ಶೋಧ ಮತ್ತು ರಕ್ಷಣಾ ತಂಡ ಮತ್ತು ವೈದ್ಯಕೀಯ ತಂಡವೂ ಇದೆ ಎಂದು ಅವರು ಹೇಳಿದರು. ನಾವು ಬೆಳವಣಿಗೆಗಳನ್ನು ಸೂಕ್ಷವಾಗಿ ಗಮನಿಸುತ್ತಿದ್ದು ಅಗತ್ಯಬಿದ್ದರೆ ಇನ್ನಷ್ಟು ನೆರವು ನೀಡುತ್ತೇವೆ ಎಂದು ವಿದೇಶಾಂಗ ಸಚಿವರು ತಿಳಿಸಿದ್ದಾರೆ.
Advertisement