
ಬಿಲಾಸ್ ಪುರ: ಛತ್ತೀಸ್‌ಗಢದ ಬಿಲಾಸ್‌ಪುರದಲ್ಲಿ ಆಯೋಜಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೆ ಜನರನ್ನು ಕರೆದೊಯ್ಯುತ್ತಿದ್ದ ಎಸ್‌ಯುವಿ ಕಾರೊಂದು ಸೇತುವೆಯಿಂದ ನದಿಗೆ ಬಿದ್ದ ಪರಿಣಾಮ ಇಬ್ಬರು ಮೃತಪಟ್ಟಿದ್ದು ಏಳು ಮಂದಿ ಗಾಯಗೊಂಡಿರುವ ಘಟನೆ ಗೌರೆಲಾ-ಪೇಂದ್ರ-ಮಾರ್ವಾಹಿ ಜಿಲ್ಲೆಯಲ್ಲಿ ನಡೆದಿದೆ.
ಪೆಂಡ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಕೊಟ್ಮಿ ಗ್ರಾಮದ ಬಳಿ ಬೆಳಗ್ಗೆ 9 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಎಂಟು ಜನರೊಂದಿಗೆ ಎಸ್‌ಯುವಿ ಮನೇಂದ್ರಗಢ-ಚಿರ್ಮಿರಿ-ಭಾರತ್‌ಪುರ (ಎಂಸಿಬಿ) ಜಿಲ್ಲೆಯಿಂದ ಬಿಲಾಸ್‌ಪುರಕ್ಕೆ ತೆರಳುತ್ತಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸೋನ್ ನದಿಯ ಸೇತುವೆ ತಲುಪುವಷ್ಟರಲ್ಲಿ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡಿದ್ದು, ಮಹಿಳಾ ಪಾದಚಾರಿಗೆ ಡಿಕ್ಕಿ ಹೊಡೆದು, ನದಿಗೆ ಬಿದ್ದಿದೆ. ಅಪಘಾತದಲ್ಲಿ ಮಹಿಳಾ ಪಾದಚಾರಿ ಮತ್ತು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಎಸ್‌ಯುವಿಯಲ್ಲಿದ್ದ ಇತರ ಏಳು ಪ್ರಯಾಣಿಕರಿಗೆ ಗಾಯಗಳಾಗಿವೆ ಎಂದು ಅವರು ಹೇಳಿದರು.
ಗಾಯಾಳುಗಳನ್ನು ಗೌರೇಲಾ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಐವರ ಸ್ಥಿತಿ ಚಿಂತಾಜನಕವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಧ್ಯಾಹ್ನ ಬಿಲಾಸ್‌ಪುರ ಜಿಲ್ಲೆಯ ಮೊಹಭಟ್ಟಾ ಗ್ರಾಮದಲ್ಲಿ ರೂ. 33,700 ಕೋಟಿಗೂ ಹೆಚ್ಚು ಮೊತ್ತದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಮಾಡಲಿದ್ದಾರೆ.
Advertisement