
ಕಟಕ್: ಒಡಿಶಾದ ಕಟಕ್ ಜಿಲ್ಲೆಯಲ್ಲಿ ಭಾನುವಾರ ಬೆಂಗಳೂರು-ಕಾಮಾಕ್ಯ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿದ್ದು, ಏಳು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗುಲಿ ಬಳಿಯ ನೆರ್ಗುಂಡಿ ರೈಲು ನಿಲ್ದಾಣದ ಬಳಿ ಬೆಳಿಗ್ಗೆ 11.54ಕ್ಕೆ ಎಸ್‌ಎಂವಿಟಿ ಬೆಂಗಳೂರು-ಕಾಮಾಕ್ಯ ಎಸಿ ಎಕ್ಸ್‌ಪ್ರೆಸ್‌ನ ಹನ್ನೊಂದು ಬೋಗಿಗಳು ಹಳಿತಪ್ಪಿವೆ. ಈ ಹಿನ್ನೆಲೆಯಲ್ಲಿ ರೈಲು ಸಂಚಾರದ ಮೇಲೆ ಪರಿಣಾಮ ಬೀರಿದೆ ಎಂದು ಪೂರ್ವ ಕರಾವಳಿ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (ಸಿಪಿಆರ್‌ಒ) ಅಶೋಕ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ.
ಗಾಯಗೊಂಡ ಏಳು ಜನರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಗಾಯಗೊಂಡವರ ಸಂಖ್ಯೆ 10ಕ್ಕಿಂತ ಹೆಚ್ಚಿಲ್ಲ. ರಕ್ಷಣಾ ಕಾರ್ಯಾಚರಣೆಯಲ್ಲಿ ಎನ್‌ಡಿಆರ್‌ಎಫ್ ಮತ್ತು ಒಡಿಶಾ ಅಗ್ನಿಶಾಮಕ ದಳದ ಸಿಬ್ಬಂದಿ ರೈಲ್ವೆಗೆ ಸಹಾಯ ಮಾಡುತ್ತಿದ್ದಾರೆ ಎಂದು ಒಡಿಶಾ ಅಗ್ನಿಶಾಮಕ ಸೇವೆಯ ಮಹಾನಿರ್ದೇಶಕ ಸುಧಾಂಶು ಸಾರಂಗಿ ತಿಳಿಸಿದ್ದಾರೆ.
ರೈಲು ಬೆಂಗಳೂರಿನಿಂದ ಅಸ್ಸಾಂನ ಗುವಾಹಟಿಯಲ್ಲಿರುವ ಕಾಮಾಕ್ಯ ನಿಲ್ದಾಣಕ್ಕೆ ಹೋಗುತ್ತಿತ್ತು.
ಸ್ಥಳಕ್ಕೆ ಬೇರೆ ರೈಲಿನ ವ್ಯವಸ್ಥೆ ಮಾಡಲಾಗಿದೆ. ಸಂಕಷ್ಟದಲ್ಲಿರುವ ಪ್ರಯಾಣಿಕರು ತಮ್ಮ ಸ್ಥಳಗಳನ್ನು ತಲುಪಲು ಸಹಾಯ ಮಾಡಲು ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಸಾಧ್ಯವಾದಷ್ಟು ಬೇಗ ಈ ಮಾರ್ಗದಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ನಮ್ಮ ಆದ್ಯತೆಯಾಗಿದೆ. ಅದಕ್ಕೆ ಅನುಗುಣವಾಗಿ, ಇತರ ರೈಲುಗಳನ್ನು ಬೇರೆ ಮಾರ್ಗಗಳಿಗೆ ತಿರುಗಿಸಲಾಗುವುದು' ಎಂದು ಅವರು ಹೇಳಿದರು.
ಹಳಿತಪ್ಪಿದ ಕಾರಣ ಮೂರು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಈ ರೈಲುಗಳು ಧೌಲಿ ಎಕ್ಸ್‌ಪ್ರೆಸ್, ನೀಲಾಚಲ್ ಎಕ್ಸ್‌ಪ್ರೆಸ್ ಮತ್ತು ಪುರುಲಿಯಾ ಎಕ್ಸ್‌ಪ್ರೆಸ್ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಯಾಣಿಕರ ನೆರವಿಗಾಗಿ ಸಹಾಯವಾಣಿ ಆರಂಭಿಸಲಾಗಿದೆ. 8455885999 ಮತ್ತು 8991124238 ಸಂಖ್ಯೆಗೆ ಕರೆ ಮಾಡುವಂತೆ ಅಧಿಕಾರಿಗಳು ತಿಳಿಸಿದ್ದಾರೆ.
Advertisement