
ಪಾಟ್ನಾ: ಈಗಾಗಲೇ ಎರಡು ಬಾರಿ ತಪ್ಪಾಗಿ ನಿರ್ಧಾರ ಕೈಗೊಂಡಿದ್ದೆ. ಮತ್ತೆಂದೂ ಬಿಜೆಪಿ ಜೊತೆಗಿನ ಸಂಬಂಧವನ್ನು ಕಡಿದುಕೊಳ್ಳುವ ನಿರ್ಧಾರವನ್ನು ಎಂದಿಗೂ ಮಾಡುವುದಿಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಭಾನುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಭರವಸೆ ನೀಡಿದ್ದಾರೆ.
ವಿಧಾನಸಭಾ ಚುನಾವಣೆಗಳು ಕೆಲವೇ ತಿಂಗಳು ಬಾಕಿ ಇರುವಾಗ, ಜೆಡಿಯು ಅಧ್ಯಕ್ಷರು ಪಾಟ್ನಾದಲ್ಲಿ ನಡೆದ ಸಮಾರಂಭದಲ್ಲಿ ಈ ಹೇಳಿಕೆ ನೀಡಿದ್ದಾರೆ. ಸಮಾರಂಭದಲ್ಲಿ ಅಮಿತ್ ಶಾ ಮತ್ತು ಅವರು ಕೇಂದ್ರ ಮತ್ತು ರಾಜ್ಯದ ಹಲವಾರು ಯೋಜನೆಗಳನ್ನು ಅನಾವರಣಗೊಳಿಸಿದರು.
ಶನಿವಾರ ತಡರಾತ್ರಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಶಾ, 'ಬಿಹಾರದಲ್ಲಿ ನಮ್ಮ ಗೆಲುವು ಎಲ್ಲೆಡೆ ಪ್ರತಿಧ್ವನಿಸುತ್ತದೆ' ಎಂದು ಹೇಳಿದ್ದರು.
ಬಿಜೆಪಿಯ ಚಾಣಕ್ಯ ಎಂದೇ ಖ್ಯಾತಿ ಪಡೆದಿರುವ ಅಮಿತ್ ಶಾ, ಬಿಹಾರಕ್ಕೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದು, ಚಿಂತನಶೀಲ ಅಧಿವೇಶನದೊಂದಿಗೆ ಮುಕ್ತಾಯಗೊಳಿಸುವ ಸಾಧ್ಯತೆಯಿದೆ. ಅಲ್ಲಿ ಇತರ ಎನ್‌ಡಿಎ ಘಟಕಗಳು ಸಹ ಭಾಗವಹಿಸುವ ನಿರೀಕ್ಷೆಯಿದೆ.
ರಾಜ್ಯ ರಾಜಧಾನಿಯಲ್ಲಿ ನಡೆದ ಸಮಾರಂಭದಲ್ಲಿ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿ, ಈ ದೊಡ್ಡ ಸಭಾಂಗಣವು ಮಿತಿ ಮೀರಿ ತುಂಬಿದೆ ಎಂದು ಹೇಳಿದರು. ಆಗ ಬಿಜೆಪಿ ಬೆಂಬಲಿಗರು "ಜೈ ಶ್ರೀ ರಾಮ್" ಘೋಷಣೆ ಕೂಗಿದರು.
'ಹಿಂದೆ ಅಧಿಕಾರದಲ್ಲಿದ್ದವರು (ಆರ್‌ಜೆಡಿ-ಕಾಂಗ್ರೆಸ್ ಮೈತ್ರಿಕೂಟ) ಏನು ಮಾಡುತ್ತಿದ್ದರು? ಅವರು ಮುಸ್ಲಿಮರ ಮತಗಳನ್ನು ಪಡೆಯುತ್ತಿದ್ದರು. ಆದರೆ, ಸಮುದಾಯಗಳ ನಡುವಿನ ಘರ್ಷಣೆಯನ್ನು ಎಂದಿಗೂ ನಿಲ್ಲಿಸಲು ಸಾಧ್ಯವಾಗಲಿಲ್ಲ. ಬಿಹಾರದಲ್ಲಿ ಹೆಸರಿಗೆ ತಕ್ಕ ಆರೋಗ್ಯ ಸೇವೆ ಇರಲಿಲ್ಲ. ಉತ್ತಮ ಶೈಕ್ಷಣಿಕ ಸೌಲಭ್ಯಗಳೂ ಇರಲಿಲ್ಲ. ನಾವು 2005ರ ನವೆಂಬರ್‌ನಲ್ಲಿ ಅಧಿಕಾರಕ್ಕೆ ಬಂದೆವು ಮತ್ತು ಪರಿಸ್ಥಿತಿ ಸುಧಾರಿಸಲು ಪ್ರಾರಂಭಿಸಿತು' ಎಂದು ಅವರು ಹೇಳಿದರು.
90ರ ದಶಕದ ಮಧ್ಯಭಾಗದಿಂದ ಬಿಜೆಪಿ ಮಿತ್ರರಾಗಿದ್ದ ನಿತೀಶ್ ಕುಮಾರ್ 2014 ರಲ್ಲಿ ಕೇಸರಿ ಪಕ್ಷದಿಂದ ಹೊರಬಂದರು. ಆದರೆ, ಮೂರು ವರ್ಷಗಳ ನಂತರ ಮತ್ತೆ ಪಕ್ಷ ಸೇರಿದರು. 2022ರಲ್ಲಿ, ಅವರು ಮತ್ತೆ ಬಿಜೆಪಿಯನ್ನು ತೊರೆದರು. ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯುವುದಾಗಿ ಮತ್ತು ದೇಶಾದ್ಯಂತ ಇರುವ ಇತರೆ ಪಕ್ಷಗಳನ್ನು ಒಟ್ಟುಗೂಡಿಸಿ ಇಂಡಿಯಾ ಒಕ್ಕೂಟವನ್ನು ರಚಿಸುವುದಾಗಿ ಪ್ರತಿಜ್ಞೆ ಮಾಡಿದರು. ಆದರೆ, ಕಳೆದ ವರ್ಷದ ಲೋಕಸಭಾ ಚುನಾವಣೆಗೆ ಮುನ್ನ, ಜೆಡಿಯು ಮುಖ್ಯಸ್ಥರು ಮತ್ತೊಮ್ಮೆ ಪಕ್ಷಾಂತರ ಮಾಡಿ ಎನ್‌ಡಿಎಗೆ ಮರಳಿದರು.
ತಮ್ಮ ಭಾಷಣದಲ್ಲಿ, ಬಿಜೆಪಿಯೊಂದಿಗಿನ ತಮ್ಮ ಒಡಕಿಗೆ 'ನಮ್ಮದೇ ಪಕ್ಷದ ಕೆಲವು ಜನರು' ಕಾರಣ ಎಂದು ದೂಷಿಸಿದರು. ನಾನು ಎರಡು ಬಾರಿ ತಪ್ಪು ಮಾಡಿದ್ದೇನೆ. ಆದರೆ, ಅದು ಮತ್ತೆ ಎಂದಿಗೂ ಆಗುವುದಿಲ್ಲ ಎಂದರು.
Advertisement