
ನವದೆಹಲಿ: ದೆಹಲಿಯ ಚಾಣಕ್ಯಪುರಿ ಪ್ರದೇಶದಲ್ಲಿರುವ 'ಕಾವೇರಿ' ಎಂಬ ಹೆಸರಿನ ಹೊಸ ಕರ್ನಾಟಕ ಭವನ ಕಟ್ಟಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ (ಏ.2) ಉದ್ಘಾಟಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
51 ವರ್ಷ ಹಳೆಯದಾದ ಮೂರು ಅಂತಸ್ತಿನ ಕಟ್ಟಡವನ್ನು ಕೆಡವಿ ಅದೇ ಜಾಗದಲ್ಲಿ ಅಂದಾಜು 82 ಕೋಟಿ ರೂ. ವೆಚ್ಚದಲ್ಲಿ ಐದು ಅಂತಸ್ತಿನ ನೂತನ ಕಟ್ಟಡ ಕಟ್ಟುವುದಕ್ಕೆ ಕರ್ನಾಟಕ ಸರ್ಕಾರ 2019ರಲ್ಲಿ ಅನುಮೋದನೆ ನೀಡಿತ್ತು. ಆಗ ಎಚ್‌ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಇದೀಗ ಕಟ್ಟಡ ನಿರ್ಮಾಣದ ವೆಚ್ಚ 140 ಕೋಟಿ ರೂ.ಗೆ ಏರಿದೆ.
50 ವರ್ಷಕ್ಕೂ ಹಳೆಯದಾದ ಕರ್ನಾಟಕ ಭವನ ಕಟ್ಟಡವನ್ನು ನವದೆಹಲಿ ಮುನ್ಸಿಪಲ್ ಕೌನ್ಸಿಲ್ ಅಸುರಕ್ಷಿತ ಎಂದು ಘೋಷಿಸಿತ್ತು.
ಉದ್ಘಾಟನಾ ಸಮಾರಂಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಪ್ರಹ್ಲಾದ್ ಜೋಶಿ, ಎಚ್‌ಡಿ ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ ಮತ್ತು ವಿ ಸೋಮಣ್ಣ ಭಾಗವಹಿಸಲಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಕರ್ನಾಟಕದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ರಾಜ್ಯ ಸಚಿವರಾದ ಎಚ್‌ಸಿ ಮಹದೇವಪ್ಪ ಮತ್ತು ಸತೀಶ್ ಜಾರಕಿಹೊಳಿ ಕೂಡ ಉಪಸ್ಥಿತರಿರುತ್ತಾರೆ.
'ಕಾವೇರಿ' ಕರ್ನಾಟಕ ಭವನ ಕಟ್ಟಡವು ರಾಜ್ಯದ ರಾಜ್ಯಪಾಲರು, ಮುಖ್ಯಮಂತ್ರಿಗಳು, ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಮತ್ತು ಇತರ ವಿವಿಐಪಿಗಳಿಗೆ ವಿಶೇಷ ಸೂಟ್‌ಗಳನ್ನು (suites) ಒಳಗೊಂಡಿದೆ.
Advertisement