
ಹೈದರಾಬಾದ್: ಹೈದರಾಬಾದ್ ವಿಶ್ವವಿದ್ಯಾಲಯದ (ಯುಒಎಚ್) ವಿದ್ಯಾರ್ಥಿಗಳ ಪ್ರತಿಭಟನೆಯ ಹೊರತಾಗಿಯೂ, ತೆಲಂಗಾಣ ಸರ್ಕಾರವು ಬಹು-ಮೂಲಸೌಕರ್ಯ ಮತ್ತು ಐಟಿ ಪಾರ್ಕ್‌ಗಳ ಅಭಿವೃದ್ಧಿಗಾಗಿ ಹರಾಜು ಹಾಕಲು ಯೋಜಿಸಿರುವ 400 ಎಕರೆ ಕಾಂಚ ಗಚಿಬೌಲಿ ಪ್ರದೇಶದ ಅರಣ್ಯ ಭೂಮಿ ಒತ್ತುವರಿ ತೆರವು ಕಾರ್ಯ ಮುಂದುವರಿದಿದೆ.
ಒತ್ತುವರಿ ತೆರವುಗೊಳಿಸುವಿಕೆ ವಿರುದ್ಧ ಪೂರ್ವ ಕ್ಯಾಂಪಸ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಹಲವಾರು ಯುಒಎಚ್ ವಿದ್ಯಾರ್ಥಿಗಳನ್ನು ಸೈಬರಾಬಾದ್ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಒತ್ತುವರಿ ಮಾಡಿಕೊಂಡಿರುವ ಭೂಮಿ ತೆರವುಗೊಳಿಸಲು ಎಂಟು ಮಣ್ಣು ತೆಗೆಯುವ ಯಂತ್ರಗಳನ್ನು ಬಳಸಲಾಗಿದ್ದು, ಆ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಈ ಸುದ್ದಿ ಕೇಳಿದ ಕೂಡಲೇ, ಸ್ಥಳಕ್ಕೆ ಧಾವಿಸಿದ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕ್ಯಾಂಪಸ್‌ನ ಪರಿಸರ ವ್ಯವಸ್ಥೆಯ ಮೇಲೆ ಉಂಟಾಗುವ ಪರಿಣಾಮದ ಬಗ್ಗೆ ಕಳವಳ ವ್ಯಕ್ತಪಡಿಸಿ, ಸರ್ಕಾರದ ಈ ಪ್ರಸ್ತಾವಿತ ಹರಾಜನ್ನು ವಿರೋಧಿಸಿದರು. ಒತ್ತುವರಿ ತೆರವನ್ನು ವೇಗಗೊಳಿಸಲು ರಾತ್ರಿಯಿಡೀ ಕೆಲಸ ಮಾಡಲು ಮಣ್ಣು ತೆಗೆಯುವ ಯಂತ್ರಗಳ ಸಂಖ್ಯೆಯನ್ನು 40ಕ್ಕೆ ಹೆಚ್ಚಿಸಲಾಗಿದೆ ಎಂದು ವರದಿಯಾಗಿದೆ.
ಈ ಗಂಭೀರ ಸಮಸ್ಯೆಯನ್ನು ಪರಿಹರಿಸುವಲ್ಲಿ ವಿಶ್ವವಿದ್ಯಾಲಯ ಆಡಳಿತದ ನಿಷ್ಕ್ರಿಯತೆ ಮತ್ತು ಮೌನವು ಆತಂಕಕಾರಿ ಎಂದು ವಿದ್ಯಾರ್ಥಿ ಸಂಘವು ಹೇಳಿಕೆಯಲ್ಲಿ ತಿಳಿಸಿದೆ.
'ವಿದ್ಯಾರ್ಥಿ ಸಂಘವು ಆಡಳಿತದಿಂದ ಪದೇ ಪದೆ ಪ್ರತಿಕ್ರಿಯೆಯನ್ನು ಕೋರಿದೆ. ಆದರೆ, ಇಲ್ಲಿಯವರೆಗೆ ಯಾವುದೇ ಅಧಿಕೃತ ಹೇಳಿಕೆ ಅಥವಾ ಕ್ರಮ ತೆಗೆದುಕೊಂಡಿಲ್ಲ' ಎಂದು ದೂರಿದೆ.
ಹರಾಜಿಗೆ ಇಡಲಾಗಿರುವ ಭೂಮಿ ವಿಶ್ವವಿದ್ಯಾನಿಲಯಕ್ಕೆ ಸೇರಿಲ್ಲ ಮತ್ತು ರಾಜ್ಯ ಸರ್ಕಾರವು ಆಸ್ತಿಯ ಏಕೈಕ ಮಾಲೀಕ. ತೆಲಂಗಾಣ ರಾಜ್ಯ ಕೈಗಾರಿಕಾ ಮೂಲಸೌಕರ್ಯ ನಿಗಮ (TSIIC) ಪ್ರಸ್ತಾಪಿಸಿದ ಅಭಿವೃದ್ಧಿ ಯೋಜನೆಗೆ ಪ್ರತಿಭಟನೆಗಳು ಅಡ್ಡಿಯಾಗುತ್ತಿವೆ ಎಂದು ಮುಖ್ಯಮಂತ್ರಿ ರೇವಂತ್ ರೆಡ್ಡಿ ಈ ಹಿಂದೆ ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದ್ದರು.
ಟಿಎಸ್‌ಐಐಸಿ ನಡೆಸಿದ ಹರಾಜು ಪರಿಸರ ಕಾನೂನುಗಳನ್ನು ಉಲ್ಲಂಘಿಸುತ್ತದೆ ಎಂದು ವಿದ್ಯಾರ್ಥಿ ಸಂಘ ಹೇಳಿಕೊಂಡಿದೆ. ಈ ಯೋಜನೆಗೆ ಯಾವುದೇ ಪೂರ್ವ ಪರಿಸರ ಪರಿಣಾಮದ ಮೌಲ್ಯಮಾಪನ ಅಥವಾ ಅನುಮತಿಯನ್ನು ಪಡೆದಿಲ್ಲ. ಕಾಂಚ ಗಚಿಬೌಲಿಯನ್ನು ರಾಷ್ಟ್ರೀಯ ಉದ್ಯಾನವನವೆಂದು ಘೋಷಿಸಲು ಕೋರಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ಮುಂದಿನ ವಿಚಾರಣೆ ಏಪ್ರಿಲ್ 7 ರಂದು ನಿಗದಿಯಾಗಿದ್ದು, ಅದಕ್ಕೆ ಕಾಯದೆ ಸರ್ಕಾರ ಹರಾಜನ್ನು ಮುಂದುವರಿಸಿದೆ ಎಂದು ದೂರಿದೆ.
Advertisement