
ನವದೆಹಲಿ: 26 ಮಂದಿ ಭಾರತೀಯರ ಧಾರುಣ ಸಾವಿಗೆ ಕಾರಣವಾದ ಜಮ್ಮು ಮತ್ತು ಕಾಶ್ಮೀರದ ಅನಂತ್ನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತವು ಪಾಕಿಸ್ತಾನ ಉಗ್ರ ತಾಣಗಳ ವಿರುದ್ಧ ಆಪರೇಷನ್ ಸಿಂಧೂರ್ (Operation Sindoor) ಸೇನಾ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದೆ.
ಭಾರತೀಯ ಸೇನೆ ಬುಧವಾರ ಮುಂಜಾನೆ ಪಾಕಿಸ್ತಾನ ಅತಿಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದ 9 ಉಗ್ರರ ನೆಲೆಗಳ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ಸುಮಾರು 100ಕ್ಕೂ ಹೆಚ್ಚು ಉಗ್ರರು ಹತರಾಗಿದ್ದಾರೆ ಎಂದು ತಿಳಿದುಬಂದಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಲಿಪಶುಗಳು ಮತ್ತು ಅವರ ಕುಟುಂಬಗಳಿಗೆ ನ್ಯಾಯ ಒದಗಿಸಲು ಭಾರತೀಯ ಸಶಸ್ತ್ರ ಪಡೆಗಳು ಆಪರೇಷನ್ ಸಿಂಧೂರವನ್ನು ಇಂದು ನಸುಕಿನ ಜಾವ 1.05ರಿಂದ 1.30ರ ನಡುವೆ ಪ್ರಾರಂಭಿಸಿದವು. ಒಂಬತ್ತು ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ಅದನ್ನು ಯಶಸ್ವಿಯಾಗಿ ನಾಶಪಡಿಸಲಾಯಿತು.
ಉಗ್ರ ಸಂಘಟನೆಗಳ 9 ಕೇಂದ್ರ ಗಳ ಮೇಲೆ ದಾಳಿ
ಭಾರತೀಯ ಸೇನೆಯು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿ 9 ಭಯೋತ್ಪಾದಕ ಅಡಗುತಾಣಗಳನ್ನು ನಾಶಪಡಿಸಿದೆ. ಈ ಪೈಕಿ ನಾಲ್ಕು ಪಾಕಿಸ್ತಾನದ ಮುಖ್ಯ ಭೂಭಾಗದಲ್ಲಿ ಮತ್ತು ಐದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿವೆ. ಈ ನಿರ್ದಿಷ್ಛ ದಾಳಿಯಲ್ಲಿ ಭಾರತೀಯ ಸೇನೆ ಯಾವುದೇ ಪಾಕಿಸ್ತಾನಿ ಮಿಲಿಟರಿ ಸ್ಥಾಪನೆಗಳನ್ನು ಗುರಿಯಾಗಿಸಿಕೊಂಡಿಲ್ಲ ಎಂದು ರಕ್ಷಣಾ ಸಚಿವಾಲಯ ಸ್ಪಷ್ಟಪಡಿಸಿದೆ. ಬದಲಾಗಿ, ನಿಷೇಧಿತ ಭಯೋತ್ಪಾದಕ ಗುಂಪುಗಳು ಕಾರ್ಯಾಚರಣೆ ಕೇಂದ್ರಗಳಾಗಿ ಬಳಸಿದ ಪರಿಶೀಲಿಸಿದ ಆಧಾರದ ಮೇಲೆ ಎಲ್ಲಾ ತಾಣಗಳನ್ನು ಆಯ್ಕೆ ಮಾಡಲಾಗಿತ್ತು ಎಂದು ಹೇಳಿದೆ.
ಉಗ್ರ ಸಂಘಟನೆಗಳ ತಾಣಗಳು
1. ಮರ್ಕಜ್ ಸುಭಾನ್ ಅಲ್ಲಾ, ಬಹಾವಲ್ಪುರ್ (ಜೆಇಎಂ) - ಜೈಶ್-ಎ-ಮೊಹಮ್ಮದ್‌ನ ಸೈದ್ಧಾಂತಿಕ ಮತ್ತು ಕಾರ್ಯಾಚರಣೆಯ ಪ್ರಧಾನ ಕಚೇರಿ ಎಂದು ಪರಿಗಣಿಸಲಾದ ಈ ಸ್ಥಳವು ಐತಿಹಾಸಿಕವಾಗಿ ಹಿರಿಯ ಕೇಡರ್ ತರಬೇತಿ ಅವಧಿಗಳನ್ನು ಆಯೋಜಿಸುತ್ತಿತ್ತು.
2. ಮರ್ಕಜ್ ತೈಬಾ, ಮುರಿಡ್ಕೆ (ಎಲ್‌ಇಟಿ) - ಲಷ್ಕರ್-ಎ-ತೈಬಾ ಉಗ್ರ ಸಂಘಟನೆಯ ಉಪ ಕಾರ್ಯಾಲಯ, ಲಾಜಿಸ್ಟಿಕ್ಸ್ ಮತ್ತು ಯೋಜನೆಗಾಗಿ ಬಳಸುತ್ತಿದ್ದ 200 ಎಕರೆ ವಿಸ್ತೀರ್ಣದ ಸಂಯುಕ್ತ ಕಾಂಪ್ಲೆಕ್ ಮತ್ತು ಮಸೀದಿ. ಕಾರ್ಯಾಚರಣೆಯಲ್ಲಿ ಹೊಡೆದುರುಳಿಸಿದ ಅತ್ಯಂತ ಬಲವಾದ ಗುರಿಗಳಲ್ಲಿ ಇದು ಒಂದಾಗಿತ್ತು.
3. ಮರ್ಕಜ್ ಅಬ್ಬಾಸ್, ಕೋಟ್ಲಿ (ಜೆಇಎಂ) - ಈ ಶಿಬಿರವು ಪಿಒಕೆ ಮೂಲದ ಭಯೋತ್ಪಾದಕರಿಗೆ ಆತ್ಮಹತ್ಯಾ ಬಾಂಬರ್ ತರಬೇತಿ ಮತ್ತು ಶಸ್ತ್ರಾಸ್ತ್ರ ವಿತರಣೆಯ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿತ್ತು.
4. ಮುಜಫರಾಬಾದ್‌ನ ಸೈಯದ್ನಾ ಬಿಲಾಲ್ ಮತ್ತು ಶವಾಯಿ ನಲ್ಲ ಶಿಬಿರಗಳು.. ಇವು ಉಗ್ರರ ಸ್ಲೀಪರ್ ಸೆಲ್‌ಗಳಿಗೆ ಒಳನುಸುಳುವಿಕೆ ಕೇಂದ್ರಗಳು ಮತ್ತು ತರಬೇತಿ ಸೌಲಭ್ಯಗಳಾಗಿ ಬಳಸಲಾಗುತ್ತಿತ್ತು.
5. ಮರ್ಕಜ್ ಅಹ್ಲೆ ಹದೀಸ್, ಬರ್ನಾಲಾ (ಎಲ್‌ಇಟಿ) - ಬೆಂಬಲ ಸೌಲಭ್ಯ ಮತ್ತು ಪ್ರಾದೇಶಿಕ ಲಾಜಿಸ್ಟಿಕ್ಸ್ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ.
6. ಸರ್ಜಲ್, ತೆಹ್ರಾ ಕಲಾನ್ (ಜೆಇಎಂ) - ಹೊಸದಾಗಿ ನೇಮಕಗೊಂಡ ಭಯೋತ್ಪಾದಕರಿಗೆ ಒಳನುಸುಳುವಿಕೆ ಪೂರ್ವ ಶಿಬಿರವಾಗಿ ಬಳಸಲಾಗುತ್ತದೆ.
7. ಮೆಹಮೂನಾ ಜೋಯಾ, ಸಿಯಾಲ್‌ಕೋಟ್ (ಎಚ್‌ಎಂ) - ಕಾಶ್ಮೀರ ಕಣಿವೆಯಲ್ಲಿ ಗುಂಪಿನ ಹೆಜ್ಜೆಗುರುತು ಕ್ಷೀಣಿಸುತ್ತಿದ್ದರೂ ಸಹ ಕಡಿಮೆ ಪ್ರಸಿದ್ಧ ಹಿಜ್ಬುಲ್ ಮುಜಾಹಿದ್ದೀನ್ ತರಬೇತಿ ಕೇಂದ್ರ ಇನ್ನೂ ಸಕ್ರಿಯವಾಗಿದೆ.
ಇವುಗಳ ಮಾತ್ರವಲ್ಲದೇ ಪಿಒಕೆಯಲ್ಲಿದ್ದ ಇನ್ನೂ 2 ಉಗ್ರತರಬೇತಿ ಕೇಂದ್ರಗಳ ಮೇಲೆ ಸೇನೆ ದಾಳಿನಡೆಸಿದೆ.
ಭಾರತೀ ಸೇನೆ ಬಳಿಸಿದ ಶಸ್ತ್ರಾಸ್ತ್ರಗಳು
ಆಪರೇಷನ್ ಸಿಂಧೂರ್‌ನಲ್ಲಿ ಭಾರತವು ಅನೇಕ ಆಧುನಿಕ ಶಸ್ತ್ರಾಸ್ತ್ರಗಳು ಮತ್ತು ಕ್ಷಿಪಣಿಗಳನ್ನು ಬಳಸಿದೆ. ಭಾರತೀಯ ಸೇನೆಯು ರಫೇಲ್ ಜೆಟ್‌ಗಳಲ್ಲಿ ಅಳವಡಿಸಲಾದ ಸ್ಕಾಲ್ಪ್ ಕ್ರೂಸ್ ಕ್ಷಿಪಣಿ, ಹ್ಯಾಮರ್ ಕ್ಷಿಪಣಿ ಹಾಗೂ ಆತ್ಮಾಹುತಿ ಡ್ರೋನ್ಗಳಂಥ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಲಾಗಿತ್ತು. ಈ ಪೈಕಿ ಸಾಲ್ಟ್ ಕ್ರೂಸ್ ಕ್ಷಿಪಣಿ, ಹ್ಯಾಮರ್ ಎಂಬ ಬಾಬರ್ ಮತ್ತು ಕಾಮಿಕೇಜ್ ಡ್ರೋನ್‌ಗಳನ್ನು ಬಳಸಲಾಗಿತ್ತು.
SALT ಕ್ಷಿಪಣಿ ವಿಶೇಷತೆ
ಆಪರೇಷನ್ ಸಿಂಧೂರ್‌ನಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಸ್ಕಾಲ್ಪ್ ಕ್ರೂಸ್ ಕ್ಷಿಪಣಿಯನ್ನು ಬಳಸಿವೆ. ಇದನ್ನು ಯುರೋಪಿಯನ್ ರಕ್ಷಣಾ ಕಂಪನಿ ಎಂಬಿಡಿಎ ತಯಾರಿಸಿದೆ. ಇದು ಸುಮಾರು 1,300 ಕಿಲೋಗ್ರಾಂಗಳಷ್ಟು (2,870 ಪೌಂಡ್‌ಗಳು) ತೂಕವಿದ್ದು, ಗಟ್ಟಿಯಾದ ಬಂಕರ್‌ಗಳು ಮತ್ತು ನಿರ್ಣಾಯಕ ಮೂಲಸೌಕರ್ಯಗಳಂತಹ ಗುರಿಗಳನ್ನು ನಾಶಮಾಡುವ ದೃಷ್ಟಿಯಿಂದ ವಿನ್ಯಾಸಗೊಳಿಸಲಾಗಿದೆ. ಇದರ ವ್ಯಾಪ್ತಿಯು 250 ರಿಂದ 560 ಕಿಲೋಮೀಟರ್ ಆಗಿದೆ.
ಇದರ ವೇಗ ಗಂಟೆಗೆ ಸುಮಾರು 1000 ಕಿಲೋಮೀಟರ್. ಸ್ಕಾಲ್ಪ್ ಕ್ಷಿಪಣಿಯು ಜಿಪಿಎಸ್ ಸೇರಿ ಅತ್ಯಾಧುನಿಕ ನ್ಯಾವಿಗೇಷನ್ ವ್ಯವಸ್ಥೆಗಳನ್ನು ಬಳಸಿಕೊಂಡು ಸರಿಯಾದ ಹಾದಿಯಲ್ಲಿ ಚಲಿಸುವಂತೆ ಮಾಡುತ್ತದೆ. ಈ ಕ್ಷಿಪಣಿಯು BROACH (ಬಾಂಬ್ ರಾಯಲ್ ಆರ್ಡನೆನ್ಸ್ ಆಗ್ಮೆಂಟೆಡ್ ಚಾರ್ಜ್) ನೊಂದಿಗೆ ಸಜ್ಜುಗೊಂಡಿದ್ದು, ಇದು ಬಂಕರ್‌ಗಳು ಮತ್ತು ಬಲವಾದ ಗುರಿಗಳನ್ನು ಸಹ ಭೇದಿಸಬಲ್ಲದು. 2020 ರಲ್ಲಿ ಲಡಾಖ್‌ನಲ್ಲಿನ ಉದ್ವಿಗ್ನತೆಯ ಸಮಯದಲ್ಲಿ, ಚೀನಾದ ಟಿಬೆಟ್ ಪ್ರದೇಶದ ಗುರಿಗಳ ಮೇಲೆ ದಾಳಿ ಮಾಡಲು ಸ್ಕಾಲ್ಪ್ ಹೊಂದಿದ ರಫೇಲ್ ಜೆಟ್‌ಗಳನ್ನು ಅಂಬಾಲಾದಲ್ಲಿ ನಿಯೋಜಿಸಲಾಗಿತ್ತು.
Hammer smart bomb
ಭಾರತೀಯ ಸೇನೆಯ ಇದೇ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದು, HAMMER smart bomb (ಹೈಲಿ ಅಗೈಲ್ ಮಾಡ್ಯುಲರ್ ಮ್ಯುನಿಷನ್ ಎಕ್ಸ್ಟೆಂಡೆಡ್ ರೇಂಜ್) ಎಂದು ಹೇಳಲಾಗಿದೆ. ಭಾರತ ಈ ಬಾಂಬ್ ಅನ್ನು ಫ್ರಾನ್ಸ್ನ ರಕ್ಷಣಾ ಕಂಪನಿ ಸಾಫ್ರಾನ್ ಮೂಲಕ ಖರೀದಿ ಮಾಡಿತ್ತು. ಎಲ್‌ಇಟಿ ಮತ್ತು ಜೈಶ್-ಎ-ಮೊಹಮ್ಮದ್ (ಜೆಇಎಂ) ತರಬೇತಿ ಮತ್ತು ಲಾಜಿಸ್ಟಿಕಲ್ ಕೇಂದ್ರಗಳಾಗಿ ಬಳಸುತ್ತಿದ್ದ ಬಲವರ್ಧಿತ ಬಂಕರ್‌ಗಳು ಮತ್ತು ಬಹುಮಹಡಿ ಕಟ್ಟಡಗಳಂತಹ ಗಟ್ಟಿಮುಟ್ಟಾದ ಮೂಲಸೌಕರ್ಯಗಳನ್ನು ಹೊಡೆಯಲು ಭಾರತೀಯ ಸೇನೆ ಈ ಹ್ಯಾಮರ್ ಸ್ಮಾರ್ಟ್ ಬಾಂಬ್ ಗಳನ್ನು ಬಳಸಿದೆ. ಹ್ಯಾಮರ್ ಒಂದು ನಿಖರ-ನಿರ್ದೇಶಿತ, ಸ್ಟ್ಯಾಂಡ್‌ಆಫ್ ಯುದ್ಧಸಾಮಗ್ರಿಯಾಗಿದ್ದು, ಉಡಾವಣಾ ಎತ್ತರವನ್ನು ಅವಲಂಬಿಸಿ 50-70 ಕಿಲೋಮೀಟರ್ ವ್ಯಾಪ್ತಿಯಲ್ಲಿ ಗುರಿಗಳನ್ನು ಹೊಡೆಯುವ ಸಾಮರ್ಥ್ಯವನ್ನು ಹೊಂದಿದೆ.
ಇದು ಮಧ್ಯಮ ವ್ಯಾಪ್ತಿಯ ಕ್ಷಿಪಣಿಯಾಗಿದ್ದು, ಈ ಕ್ಷಿಪಣಿಯನ್ನು ಆಕಾಶದಿಂದ ನೆಲದ ಗುರಿಯತ್ತ ಹಾರಿಸಬಹುದಾಗಿದೆ. 2020 ರಲ್ಲಿ ಚೀನಾದೊಂದಿಗಿನ ಗಡಿ ಉದ್ವಿಗ್ನತೆಯ ಸಮಯದಲ್ಲಿ ಭಾರತವು ರಫೇಲ್ ಜೆಟ್‌ಗಳಿಗಾಗಿ ಈ ಕ್ಷಿಪಣಿಗಳನ್ನು ಖರೀದಿಸಿತ್ತು. ಈ ಕ್ಷಿಪಣಿ 20 ರಿಂದ 70 ಕಿಲೋಮೀಟರ್‌ಗಳವರೆಗೆ ಪ್ರಯಾಣಿಸುವ ಸಾಮರ್ಥ್ಯಹೊಂದಿದೆ.
ಕ್ಷಿಪಣಿಯ ವ್ಯಾಪ್ತಿಯು ಹೆಚ್ಚಾಗಿ ಅದರ ಉಡಾವಣೆ ಮತ್ತು ಗುರಿಯನ್ನು ಅವಲಂಬಿಸಿರುತ್ತದೆ. ಈ ಕ್ಷಿಪಣಿ ವಿವಿಧ ಗಾತ್ರಗಳು ಮತ್ತು ತೂಕಗಳಲ್ಲಿ ಲಭ್ಯವಿದೆ. ಇದು 125 ಕೆಜಿಯಿಂದ 1000 ಕೆಜಿ ವರೆಗೆ ಇರಬಹುದು ಎಂದು ಹೇಳಲಾಗಿದೆ. ಹ್ಯಾಮರ್ ಕ್ಷಿಪಣಿಯು ಜಿಪಿಎಸ್ ಅನ್ನು ಹೊಂದಿದ್ದು ನಿಖರವಾಗಿ ದೂರದ ಗುರಿಯನ್ನು ತಲುಪಬಲ್ಲದು. ಈ ಕ್ಷಿಪಣಿಯು ಲೇಸರ್ ಗೈಡ್ಲೈನ್ ವ್ಯವಸ್ಥೆ ಸಹ ಹೊಂದಿದ್ದು, ನಿಖರವಾದ ಗುರಿಯನ್ನು ತಲುಪಲು ಸುಲಭವಾಗುತ್ತದೆ. ಈ ಕ್ಷಿಪಣಿಯು ಎಲೆಕ್ಟ್ರಾನಿಕ್ ಜಾಮರ್ ಅನ್ನು ಸುಲಭವಾಗಿ ತಡೆದು ಕಡಿಮೆ ಎತ್ತರದಲ್ಲಿ ಮತ್ತು ಪರ್ವತ ಪ್ರದೇಶಗಳಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ದಾಳಿ ನಡೆಸಬಲ್ಲದಾಗಿದೆ.
ಕಾಮಿಕೇಜ್ ಡ್ರೋನ್
ಅಡ್ಡಾಡುವ ಯುದ್ಧಸಾಮಗ್ರಿ ಎಂದೇ ಖ್ಯಾತಿಗಳಿಸಿರುವ 'kamikaze drone's ಭಾರತದ ಆಪರೇಷನ್ ಸಿಂಧೂರ್‌ನಲ್ಲಿ ಬಳಕೆಯಾಗಿದೆ. ಕಾಮಿಕೇಜ್ ಡ್ರೋನ್ ಗಳನ್ನು ಆತ್ಮಹತ್ಯಾ ಡ್ರೋನ್ ಗಳಾಗಿ ಬಳಕೆ ಮಾಡಲಾಗುತ್ತದೆ. ಇವು ಮಾನವರಹಿತ ವೈಮಾನಿಕ ಶಸ್ತ್ರಾಸ್ತ್ರಗಳಾಗಿವೆ. ಇವುಗಳ ವಿಶೇಷತೆಯೆಂದರೆ, ಗುರಿಗಿಂತ ಮೇಲಿರುವ ಆಕಾಶದಲ್ಲಿ ಸುಳಿದಾಡುತ್ತಲೇ ಇರುತ್ತದೆ. ನಿಯಂತ್ರಣ ಕೊಠಡಿಯಿಂದ ಆದೇಶ ಬಂದ ಕೂಡಲೇ ಶತ್ರುಗಳ ಅಡಗುತಾಣವನ್ನು ನಾಶಮಾಡುತ್ತವೆ.
ಈ ಕ್ಯಾಮಿಕೇಜ್ ಡ್ರೋನ್ ಗಳು ನಿಖರತೆಗೆ ಹೆಸರುವಾಸಿಯಾಗಿವೆ. ಈ ಆತ್ಮಹತ್ಯಾ ಡ್ರೋನ್‌ಗಳ ಗಾತ್ರ, ಪೇಲೋಡ್ ಮತ್ತು ಸಿಡಿತಲೆಗಳಲ್ಲಿ ವ್ಯತ್ಯಾಸಗಳಿವೆ. ಈ ಡ್ರೋನ್‌ಗಳು ಏಕ-ಬಳಕೆಯ ಯುದ್ಧಸಾಮಗ್ರಿಗಳಾಗಿದ್ದು, ಗುರಿಯ ಮೇಲೆ ಸ್ಫೋಟಗೊಂಡು ಅದನ್ನು ನಾಶಮಾಡುತ್ತವೆ. ಹೀಗಾಗಿ ಆತ್ಮಹತ್ಯಾ ಡ್ರೋನ್‌ಗಳು ಎಂದು ಕರೆಯಲಾಗುತ್ತದೆ. ಇವುಗಳನ್ನು ಮೊದಲು 1980 ರ ದಶಕದಲ್ಲಿ ಬಳಸಲಾಗಿತ್ತು. ಆದರೆ 1990 ಮತ್ತು 2000 ರ ದಶಕಗಳಲ್ಲಿ ಅವುಗಳ ಬಳಕೆ ಹೆಚ್ಚಾಯಿತು.
Advertisement