
ನವದೆಹಲಿ: ಮೂರು ದಿನಗಳಿಂದ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷಕ್ಕೆ ತಾತ್ಕಾಲಿಕ ತೆರೆ ಬಿದ್ದಿದ್ದು ಉಭಯ ದೇಶಗಳು ಕದನ ವಿರಾಮಕ್ಕೆ ಒಪ್ಪಿಗೆ ನೀಡಿದೆ. ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ (DGMO) ಕರೆ ಮಾಡಿ ದಾಳಿ ನಿಲ್ಲಿಸುವಂತೆ ಒತ್ತಾಯಿಸಿದ್ದು, ಆ ನಂತರ ಕದನ ವಿರಾಮ ಪ್ರಕ್ರಿಯೆ ಪ್ರಾರಂಭಿಸಲಾಯಿತು ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ತಿಳಿಸಿದ್ದಾರೆ.
ಪಾಕಿಸ್ತಾನದ ಡಿಜಿಎಂಒ ಭಾರತಕ್ಕೆ ಮಧ್ಯಾಹ್ನ 3.35ರ ಸುಮಾರಿಗೆ ಕರೆ ಮಾಡಿದ್ದರು ಎಂದು ಮಿಶ್ರಿ ತಿಳಿಸಿದ್ದು ಸದ್ಯ ಕದನ ವಿರಾಮವು 5 ಗಂಟೆಯಿಂದ ಜಾರಿಗೆ ಬರಲಿದೆ ಎಂದು ಘೋಷಿಸಿದರು. ಮೇ 12ರಂದು ಮಧ್ಯಾಹ್ನ 12:00 ಗಂಟೆಗೆ ಉಭಯ ದೇಶಗಳ ಡಿಜಿಎಂಒಗಳು ಮಾತುಕತೆ ನಡೆಸಲಿದ್ದಾರೆ ಎಂದು ಮಿಶ್ರಿ ತಿಳಿಸಿದ್ದರು.
ಡೊನಾಲ್ಡ್ ಟ್ರಂಪ್ ಪೋಸ್ಟ್
ತಮ್ಮ ಮಧ್ಯಸ್ಥಿಕೆ ನಂತರ ಭಾರತ ಮತ್ತು ಪಾಕಿಸ್ತಾನ ಪೂರ್ಣ ಮತ್ತು ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಭಾರತ ಮತ್ತು ಪಾಕಿಸ್ತಾನ ಪೂರ್ಣ ಮತ್ತು ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ. ಸಾಮಾನ್ಯಜ್ಞಾನ ಮತ್ತು ಉತ್ತಮ ಬುದ್ಧಿವಂತಿಕೆಯನ್ನು ಬಳಸಿದ್ದಕ್ಕಾಗಿ ಎರಡೂ ದೇಶಗಳಿಗೆ ಅಭಿನಂದನೆಗಳು ಎಂದು ಡೊನಾಲ್ಡ್ ಟ್ರಂಪ್ ಬರೆದುಕೊಂಡಿದ್ದರು.
ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್, ಸರ್ಕಾರವು ಈ ಪ್ರದೇಶದಲ್ಲಿ 'ಶಾಂತಿ ಮತ್ತು ಭದ್ರತೆ'ಗಾಗಿ ಯಾವಾಗಲೂ ಶ್ರಮಿಸುತ್ತಿದೆ ಎಂದು ಹೇಳಿದ್ದಾರೆ. ಪಾಕಿಸ್ತಾನ ಮತ್ತು ಭಾರತ ತಕ್ಷಣದಿಂದ ಜಾರಿಗೆ ಬರುವಂತೆ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಪಾಕಿಸ್ತಾನವು ತನ್ನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಧಕ್ಕೆಯಾಗದಂತೆ, ಈ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಗಾಗಿ ಯಾವಾಗಲೂ ಶ್ರಮಿಸುತ್ತಿದೆ ಎಂದು ದಾರ್ ಟ್ವೀಟ್ ಮಾಡಿದ್ದರು.
Advertisement