
ನವದೆಹಲಿ: ಪಾಕಿಸ್ತಾನ ಏನಾದರೂ ಮಾಡಿದರೆ ಭಾರತದ ಪ್ರತಿಕ್ರಿಯೆ ಹೆಚ್ಚು ವಿನಾಶಕಾರಿ ಮತ್ತು ಬಲವಾಗಿರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್‌ಗೆ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಜೆಡಿ ವ್ಯಾನ್ಸ್ ಜೊತೆ ದೂರವಾಣಿ ಮೂಲಕ ಮಾತನಾಡಿರುವ ನರೇಂದ್ರ ಮೋದಿ "ಕಾಶ್ಮೀರದ ವಿಷಯದಲ್ಲಿ ಮೂರನೇಯವರ ಮಧ್ಯಸ್ಥಿಕೆ ಬೇಕಾಗಿಲ್ಲ. ಪಾಕಿಸ್ತಾನ ತನ್ನಲ್ಲಿರುವ ಉಗ್ರರನ್ನು ನಮಗೆ ಹಸ್ತಾಂತರಿಸಬೇಕು ಈ ಷರತ್ತಿಗೆ ಒಪ್ಪಿದರೆ ಮಾತ್ರ ಮಾತುಕತೆಗೆ ಸಿದ್ಧರಿದ್ದೇವೆ, ಅದರ ಹೊರತಾಗಿ ಮಾತನಾಡಲು ಬೇರೇನೂ ಇಲ್ಲ. ಪಾಕ್ ಆಕ್ರಮಿತ ಕಾಶ್ಮೀರ ನಮಗೆ ಮರಳಬೇಕು. ಕಾಶ್ಮೀರದ ಬಗ್ಗೆ ಭಾರತದ ನಿಲುವು ಸ್ಪಷ್ಟವಾಗಿದೆ" ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.
ಇದೇ ವೇಳೆ ಆಪರೇಷನ್ ಸಿಂಧೂರ್ ಮುಗಿದಿಲ್ಲ, ಮತ್ತು ನಾವು ಈ ಹಿಂದಿಗಿಂತಲೂ ಭಿನ್ನವಾಗಿದ್ದೇವೆ ಹೊಸ ಸ್ಥಿತಿಯಲ್ಲಿದ್ದೇವೆ; ಜಗತ್ತು ಇದನ್ನು ಒಪ್ಪಿಕೊಳ್ಳಬೇಕು, ಪಾಕಿಸ್ತಾನ ಇದನ್ನು ಒಪ್ಪಿಕೊಳ್ಳಬೇಕು, ಇದು ಎಂದಿನಂತೆ ನಡೆಯಲು ಸಾಧ್ಯವಿಲ್ಲ ಎಂದು ಮೋದಿ ದೃಢವಾಗಿ ಅಮೇರಿಕಾಗೆ ಮನವರಿಗೆ ಮಾಡಿಕೊಟ್ಟಿದ್ದಾರೆ.
ಶನಿವಾರ, ಪಾಕಿಸ್ತಾನದ ಡಿಜಿಎಂಒ ಅವರಿಂದ ಮಧ್ಯಾಹ್ನ 1 ಗಂಟೆಗೆ ಮಾತುಕತೆಗಾಗಿ ವಿನಂತಿ ಬಂದಿತ್ತು. ಭಾರತೀಯ ಡಿಜಿಎಂಒ ಸಭೆಯಲ್ಲಿ ನಿರತರಾಗಿದ್ದರಿಂದ, ಅವರು ಆಗ ಮಾತನಾಡಲು ಸಾಧ್ಯವಾಗಲಿಲ್ಲ. ಮಾತುಕತೆ ಮಧ್ಯಾಹ್ನ 3:35 ಕ್ಕೆ ನಡೆಯಿತು. ಗುಂಡಿನ ದಾಳಿಯನ್ನು ನಿಲ್ಲಿಸುವ ನಿಯಮಗಳ ಕುರಿತು ಏನೇ ನಡೆದರೂ ಅದು ಡಿಜಿಎಂಒಗಳ ನಡುವೆ ನಡೆಯುತ್ತದೆ ಎಂದು ಮೂಲಗಳು ತಿಳಿಸಿವೆ.
ಪ್ರಧಾನಿ ಮೋದಿ ಉನ್ನತ ಮಟ್ಟದ ಸಭೆ
ಭಾರತ ಮತ್ತು ಪಾಕಿಸ್ತಾನ ಮಿಲಿಟರಿ ಕ್ರಮಗಳನ್ನು ನಿಲ್ಲಿಸಲು ಒಪ್ಪಂದ ಮಾಡಿಕೊಂಡ ಒಂದು ದಿನದ ನಂತರ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಸೇರಿದಂತೆ ಉನ್ನತ ಸರ್ಕಾರಿ ಅಧಿಕಾರಿಗಳ ಜೊತೆ ಪ್ರಧಾನಿ ಮೋದಿ ಭಾನುವಾರ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಎನ್‌ಎಸ್‌ಎ ಅಜಿತ್ ದೋವಲ್, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಮತ್ತು ಮೂರೂ ಸೇನಾಪಡೆಗಳ ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಿದ್ದರು.
ಶನಿವಾರ ರಾತ್ರಿ ಭಾರತ ಪಾಕಿಸ್ತಾನವು ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿತ್ತು ಮತ್ತು ಈ ಉಲ್ಲಂಘನೆಗಳನ್ನು ಪರಿಹರಿಸಲು ಮತ್ತು ಪರಿಸ್ಥಿತಿಯನ್ನು "ಗಂಭೀರತೆ ಮತ್ತು ಜವಾಬ್ದಾರಿಯಿಂದ" ನಿಭಾಯಿಸಲು "ಸೂಕ್ತ ಕ್ರಮಗಳನ್ನು" ತೆಗೆದುಕೊಳ್ಳುವಂತೆ ಕೇಳಿತ್ತು.
ಶೆಲ್ ದಾಳಿ ಮತ್ತು ಡ್ರೋನ್ ಘಟನೆಗಳ ನಂತರ ಹಲವಾರು ಗಡಿ ಪ್ರದೇಶಗಳಲ್ಲಿನ ನಿವಾಸಿಗಳು ಭಯದ ಸ್ಥಿತಿಯಲ್ಲಿ ವಾಸಿಸುತ್ತಿದ್ದರೂ ಸಹ, ಪರಿಸ್ಥಿತಿ ಸದ್ಯಕ್ಕೆ ತಣ್ಣಗಾಗಿದೆ.
Advertisement