
ನವದೆಹಲಿ: ಭಾರತ-ಪಾಕಿಸ್ತಾನ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ಪಂಜಾಬ್‌ನ ಆದಮ್‌ಪುರ ವಾಯುನೆಲೆಗೆ ಭೇಟಿ ನೀಡಿದ್ದು, ಯೋಧರೊಂದಿಗೆ ಮಾತುಕತೆ ನಡೆಸಿದ್ದಾರೆ.
ಮೋದಿಯವರು ವಾಯುನೆಲೆಗೆ ಭೇಟಿ ನೀಡುತ್ತಿದ್ದಂತೆಯೇ ಸೈನಿಕರು ಸಂತಸದಿಂದ ಪ್ರಧಾನಮಂತ್ರಿಗಳನ್ನು ಸ್ವಾಗತಿಸಿದರು. ಮೋದಿಯವರನ್ನು ಸುತ್ತುವರೆದ ಅವರು ಮಾತುಕತೆ ನಡೆಸಿದರು. ಈ ವೇಳೆ ಭಾರತ್ ಮಾತಾ ಕೀ ಜೈ ಘೋಷವಾಕ್ಯ ಮುಗಿಲು ಮುಟ್ಟಿತ್ತು. ಈ ಕುರಿತ ಫೋಟೋಗಳನ್ನು ಪ್ರಧಾನಮಂತ್ರಿಗಳ ಕಚೇರಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ಇಂದು ಬೆಳಿಗ್ಗೆ, ಎಎಫ್‌ಎಸ್ ಆದಮ್‌ಪುರ ಹೋಗಿ ನಮ್ಮ ವೀರ ಯೋಧರು ಮತ್ತು ಸೈನಿಕರನ್ನು ಭೇಟಿಯಾದೆ. ಧೈರ್ಯ, ದೃಢನಿಶ್ಚಯ ಮತ್ತು ನಿರ್ಭಯತೆಯನ್ನು ಸಾರುವವರೊಂದಿಗೆ ಇರುವುದು ಬಹಳ ವಿಶೇಷ ಅನುಭವವಾಗಿತ್ತು. ನಮ್ಮ ಸಶಸ್ತ್ರ ಪಡೆಗಳು ನಮ್ಮ ರಾಷ್ಟ್ರಕ್ಕಾಗಿ ಮಾಡುತ್ತಿರುವ ಸೇವೆಗೆ ಇಡೀ ದೇಶ ಅವರಿಗೆ ಶಾಶ್ವತವಾಗಿ ಕೃತಜ್ಞವಾಗಿದೆ ಎಂದು ಮೋದಿಯವರು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏಪ್ರಿಲ್ 22ರಂದು ಪ್ರವಾಸಿಗರನ್ನು ಗುರಿಯಾಗಿಸಿ ಉಗ್ರರು ನಡೆಸಿದ ದಾಳಿಯಲ್ಲಿ 26 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು. ಉಗ್ರರ ದಾಳಿಯ ಬೆನ್ನಲ್ಲೇ ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ನಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಬಳಿಕ ಮೇ 7 ರಂದು ಭಾರತ ಉಗ್ರರ ವಿರುದ್ಧ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ಆರಂಭಿಸಿತ್ತು. ಬಳಿಕ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿತ್ತು. ಬಳಿಕ ಪಾಕಿಸ್ತಾನ ಮೇ 9 ಮತ್ತು 10ರ ಮಧ್ಯರಾತ್ರಿ ಭಾರತದ ಮೇಲೆ ದಾಳಿ ಮಾಡಿತ್ತು. ಪಾಕಿಸ್ತಾನ ದಾಳಿ ಮಾಡಲು ಯತ್ನಿಸಿದ ವಾಯುಪಡೆಯ ಕೇಂದ್ರಗಳಲ್ಲಿ ಅದಮ್‌ಪುರ ಕೂಡ ಒಂದಾಗಿತ್ತು.
ಭಾರತ ಮತ್ತು ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿಕೊಂಡ ಕೆಲವು ದಿನಗಳ ನಂತರ ಪ್ರಧಾನಿ ಮೋದಿ ಇಂದು ಪಂಜಾಬ್‌ನ ಅದಮ್‌ಪುರ ವಾಯುನೆಲೆಗೆ ಭೇಟಿ ನೀಡಿ ಸೈನಿಕರೊಂದಿಗೆ ಸಂವಾದ ನಡೆಸಿದ್ದಾರೆ.
Advertisement