
ನವದೆಹಲಿ: ಪಾಕಿಸ್ತಾನದೊಂದಿಗಿನ ಉದ್ವಿಗ್ನತೆಯ ಸಂದರ್ಭದಲ್ಲಿ ಭಾರತ ಮತ್ತು ಅಮೆರಿಕ ನಡುವಿನ ಚರ್ಚೆಯಲ್ಲಿ ವ್ಯಾಪಾರ ಒಪ್ಪಂದ ವಿಚಾರ ಬಂದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಂಗಳವಾರ ಹೇಳಿದೆ.
ಮೇ 7 ರಂದು ಪ್ರಾರಂಭವಾದ ಆಪರೇಷನ್ ಸಿಂಧೂರ್ ಸಮಯದಿಂದ ಮೇ 10 ರಂದು ನಡೆದ ಕದನ ವಿರಾಮ ಒಪ್ಪಂದ ಘೋಷಣೆಯವರೆಗೆ ಮಿಲಿಟರಿ ಪರಿಸ್ಥಿತಿಯ ಕುರಿತು ಭಾರತ ಮತ್ತು ಯುಎಸ್ ನಾಯಕರ ನಡುವೆ ಮಾತುಕತೆಗಳು ನಡೆದಿವೆ. ಈ ಯಾವುದೇ ಚರ್ಚೆಗಳಲ್ಲಿ ವ್ಯಾಪಾರದ ವಿಚಾರ ಬಂದಿಲ್ಲ ಎಂದು ಎಂಇಎ ವಕ್ತಾರ ರಣಧೀರ್ ಜೈಸ್ವಾಲ್ ಮಾಧ್ಯಮ ಸಂವಾದದಲ್ಲಿ ತಿಳಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಶಾಂತಿಗಾಗಿ ಅಮೆರಿಕ ವ್ಯಾಪಾರ ಒಪ್ಪಂದವನ್ನು ಬಳಸಿಕೊಂಡಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ ಮಾರನೇ ದಿನವೇ MEA ಈ ರೀತಿಯ ಪ್ರತಿಕ್ರಿಯೆ ನೀಡಿದೆ. ಯುದ್ಧವನ್ನು ನಿಲ್ಲಿಸಿದರೆ ವ್ಯಾಪಾರ ಮುಂದುವರಿಸುವುದಾಗಿ, ಇಲ್ಲದಿದ್ದರೆ ವ್ಯಾಪಾರವನ್ನು ಸ್ಥಗಿತಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದರಿಂದ ಉಭಯ ದೇಶಗಳು ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದವು ಎಂದು ಟ್ರಂಪ್ ಹೇಳಿದ್ದರು.
ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಮೂರನೇ ವ್ಯಕ್ತಿ ಹಸ್ತಕ್ಷೇಪ ಮಾಡದಿರುವ ದೀರ್ಘಕಾಲದ ರಾಷ್ಟ್ರೀಯ ನೀತಿ ಬದಲಾಗಿಲ್ಲ ಎಂದು ಪ್ರತಿಪಾದಿಸಿದ ಜೈಸ್ವಾಲ್, ಇದನ್ನು ಭಾರತ ಮತ್ತು ಪಾಕಿಸ್ತಾನವು ದ್ವಿಪಕ್ಷೀಯವಾಗಿ ಪರಿಹರಿಸಬೇಕಾಗಿದೆ ಎಂದು ಒತ್ತಿ ಹೇಳಿದರು.
ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳನ್ನು ಭಾರತ ಮತ್ತು ಪಾಕಿಸ್ತಾನವು ದ್ವಿಪಕ್ಷೀಯವಾಗಿ ಪರಿಹರಿಸಬೇಕು ಎಂಬ ದೀರ್ಘಕಾಲದ ರಾಷ್ಟ್ರೀಯ ನಿಲುವನ್ನು ನಾವು ಹೊಂದಿದ್ದೇವೆ. ಆ ನೀತಿಯು ಬದಲಾಗಿಲ್ಲ. ಪಾಕಿಸ್ತಾನವು ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಭಾರತೀಯ ಪ್ರದೇಶವನ್ನು ಬಿಡಿಸುವುದು ಬಾಕಿ ಉಳಿದಿರುವ ವಿಷಯವಾಗಿದೆ ಎಂದರು.
ಏಪ್ರಿಲ್ 22 ರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಸಿಂಧೂ ಜಲ ಒಪ್ಪಂದವನ್ನು ಎರಡು ದೇಶಗಳ ನಡುವಿನ ಸ್ನೇಹ ಮತ್ತು ಸೌಹಾರ್ದತೆ ಹಿನ್ನೆಲೆಯಲ್ಲಿಯೇ ರದ್ದುಗೊಳಿಸಲಾಗಿದೆ. ಪಾಕಿಸ್ತಾನವು ಹಲವಾರು ದಶಕಗಳಿಂದ ಗಡಿಯಾಚೆಗಿನ ಭಯೋತ್ಪಾದನೆಯನ್ನು ಉತ್ತೇಜಿಸುವ ಮೂಲಕ ಈ ತತ್ವಗಳನ್ನು ತಡೆಹಿಡಿದಿದೆ. ಈಗ CCS ನಿರ್ಧಾರದ ಪ್ರಕಾರ, ಪಾಕಿಸ್ತಾನವು ವಿಶ್ವಾಸಾರ್ಹವಾಗಿ ಮತ್ತು ಗಡಿಯಾಚೆಗಿನ ಭಯೋತ್ಪಾದನೆಗೆ ನೀಡುತ್ತಿರುವ ಬೆಂಬಲವನ್ನು ಹಿಂತೆಗೆದುಕೊಳ್ಳುವವರೆಗೆ ಭಾರತವು ಒಪ್ಪಂದವನ್ನು ರದ್ದುಗೊಳಿಸುತ್ತದೆ ಎಂದು ತಿಳಿಸಿದರು.
ಹವಾಮಾನ ಬದಲಾವಣೆ, ಜನಸಂಖ್ಯಾ ಬದಲಾವಣೆಗಳು ಮತ್ತು ತಾಂತ್ರಿಕ ಬದಲಾವಣೆಗಳು ಹೊಸ ವಾಸ್ತವಗಳನ್ನು ಸೃಷ್ಟಿಸಿವೆ ಎಂಬುದನ್ನು ದಯವಿಟ್ಟು ಗಮನಿಸಿ ಎಂದು ಅವರು ಹೇಳಿದರು.
Advertisement