
ಕೊಲ್ಕೋತಾ: ಖಾಸಗಿ ಕಂಪನಿಯೊಂದರ ಇಬ್ಬರು ಉದ್ಯೋಗಿಗಳು ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ಧಾಗ, ಅವರನ್ನು ಅಡ್ಡಗಟ್ಟಿ 2.66 ಕೋಟಿ ರೂ. ದರೋಡೆ ಮಾಡಿರುವ ಘಟನೆ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆದಿದೆ. ಪ್ರಕರಣದಲ್ಲಿ ಪೊಲೀಸ್ ಸಹಾಯಕ ಸಬ್-ಇನ್ಸ್‌ಪೆಕ್ಟರ್ ಒಬ್ಬರನ್ನು ಬುಧವಾರ ಬಂಧಿಸಲಾಗಿದೆ.
ಕೋಲ್ಕತ್ತಾದ ಎಂಟಲ್ಲಿ ಪ್ರದೇಶದಲ್ಲಿ ಮೇ 5ರಂದು ದರೋಡೆ ನಡೆದಿದೆ. ಅಂದು ಬೆಳಿಗ್ಗೆ 11.45ರ ಸುಮಾರಿಗೆ ಖಾಸಗಿ ವಿದೇಶಿ ವಿನಿಮಯ ಕಂಪನಿಯ ಇಬ್ಬರು ಉದ್ಯೋಗಿಗಳು ಎಸ್.ಎನ್ ಬ್ಯಾನರ್ಜಿ ರಸ್ತೆಯಿಂದ ಟ್ಯಾಕ್ಸಿಯಲ್ಲಿ ಪಾರ್ಕ್ ಸರ್ಕಸ್ ಪ್ರದೇಶದಲ್ಲಿರುವ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗೆ ಹಣವನ್ನು ಠೇವಣಿ ಇಡಲು ಹೊಗುತ್ತಿದ್ದರು ಎಂದು ತಿಳಿದುಬಂದಿದೆ.
ಮಾರ್ಗ ಮಧ್ಯೆ ಕಮರ್ದಂಗ ಬಳಿ ದುಷ್ಕರ್ಮಿಗಳು ಕಾರನ್ನು ಅಡ್ಡಗಡ್ಡಿ ಬಲವಂತವಾಗಿ ನಿಲ್ಲಿಸಿದ್ದಾರೆ. ಬಳಿಕ, ಇಬ್ಬರು ಅಪರಿಚಿತ ವ್ಯಕ್ತಿಗಳು ಟ್ಯಾಕ್ಸಿ ಒಳಗೆ ನುಗ್ಗಿ, ಉದ್ಯೋಗಿಗಳಿಂದ ಹಣವನ್ನು ದರೋಡೆ ಮಾಡಿ, ಪರಾರಿಯಾಗಿದ್ದಾರೆ.
ಈ ದರೋಡೆಗೆ ಪಿತೂರಿ ರೂಪಿಸಿದ್ದೇ ಪೊಲೀಸ್ ಅಧಿಕಾರಿ (ಎಎಸ್‌ಐ) ಎಂದು ಹೇಳಲಾಗಿದೆ. ಅವರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆರೋಪಿ ಎಎಸ್‌ಐ ಸೇರಿ ನಾಲ್ವರನ್ನು ಬಂಧಿಸಲಾಗಿದೆ.
Advertisement