
ಬೆಂಗಳೂರು: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ 'ಒನ್ ಬಿಗ್ ಬ್ಯೂಟಿಫುಲ್ ಬಿಲ್'ನಲ್ಲಿ ವಿದೇಶಿ ಹಣ ರವಾನೆಯ ಮೇಲೆ ಶೇ.5 ರಷ್ಟು ತೆರಿಗೆ ವಿಧಿಸುವ ಪ್ರಸ್ತಾಪ ಮಾಡಿದ್ದು, ಇದು ಭಾರತದ ಮೇಲೆ ಗಮನಾರ್ಹ ಪರಿಣಾಮ ಬೀರಬಹುದು ಎಂದು ತೆರಿಗೆ ತಜ್ಞರು ಹೇಳಿದ್ದಾರೆ. ಏಕೆಂದರೆ ಭಾರತ ಅಮೆರಿಕದಿಂದ ಬರುವ ಹಣದ ಅತಿದೊಡ್ಡ ಫಲಾನುಭವಿಗಳಲ್ಲಿ ಒಂದಾಗಿದೆ.
ಭಾರತಕ್ಕೆ ಹಣ ಕಳುಹಿಸುವ ವಲಸೆ ರಹಿತ ವೀಸಾ ಹೊಂದಿರುವವರು(H-1B ವೀಸಾಗಳಂತೆ) ಸೇರಿದಂತೆ ನಾಗರಿಕರಲ್ಲದವರು ಮಾಡುವ ಅಂತರರಾಷ್ಟ್ರೀಯ ಹಣ ವರ್ಗಾವಣೆಯ ಮೇಲೆ ಶೇ.5 ರಷ್ಟು ತೆರಿಗೆ ವಿಧಿಸಲು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಾರ, ವಿದೇಶಗಳಿಂದ ಭಾರತಕ್ಕೆ ಒಳಬರುವ ಒಟ್ಟು ಹಣ ರವಾನೆಯಲ್ಲಿ ಅಮೆರಿಕದಿಂದ ಬರುವ ಹಣವು 2023-24ರಲ್ಲಿ ಶೇ.27.7 ರಷ್ಟು ಇದ್ದು, ಇದು ಅತಿ ದೊಡ್ಡ ಹಣ ರವಾನೆಯಾಗಿದೆ. ಇದು 2020-21ರಲ್ಲಿ ಶೇ.23.4 ರಷ್ಟಿತ್ತು.
ಅಮೆರಿಕ ಕಾರ್ಮಿಕ ಬಲದಲ್ಲಿ, 2019 ರ ಸಾಂಕ್ರಾಮಿಕ ಪೂರ್ವ ವರ್ಷದಲ್ಲಿ ವಿದೇಶಿ ಮೂಲದ ಕಾರ್ಮಿಕರ ಸಂಖ್ಯೆ ಶೇ. 0.7 ರಿಂದ 2022 ರಲ್ಲಿ ಶೇಕಡಾ 6.3ಕ್ಕೆ ಏರಿಕೆಯಾಗಿದೆ.
ಅಮೆರಿಕದಲ್ಲಿ ಸುಮಾರು ಶೇ. 78 ರಷ್ಟು ಭಾರತೀಯ ವಲಸಿಗರು ನಿರ್ವಹಣೆ, ವ್ಯವಹಾರ ಮತ್ತು ವಿಜ್ಞಾನದಂತಹ ಹೆಚ್ಚಿನ ಆದಾಯ ಗಳಿಸುವ ಕ್ಷೇತ್ರಗಳಲ್ಲಿ ಉದ್ಯೋಗದಲ್ಲಿದ್ದಾರೆ. ಆರ್‌ಬಿಐ ದತ್ತಾಂಶದ ಪ್ರಕಾರ, ಭಾರತದ ಹಣ ರವಾನೆ 2010-11 ರಲ್ಲಿ 55.6 ಬಿಲಿಯನ್ ಡಾಲರ್ ನಿಂದ 2023-24 ರಲ್ಲಿ 118.7 ಬಿಲಿಯನ್ ಡಾಲರ್ ಗೆ ದ್ವಿಗುಣಗೊಂಡಿದೆ. ಅಂದರೆ ಸುಮಾರು 33 ಬಿಲಿಯನ್ ಡಾಲರ್ ಅಮೆರಿಕದಿಂದ ಬಂದಿದೆ. ಈ ಮಸೂದೆ ಜಾರಿಗೆ ಬಂದರೆ, ಭಾರತ 1.65 ಬಿಲಿಯನ್ ಡಾಲರ್ ಹಣ ರವಾನೆಯನ್ನು ತ್ಯಜಿಸಬೇಕಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಸ್ಟ್ಯಾಟಿಸ್ಟಾ ಪ್ರಕಾರ, 54 ಲಕ್ಷಕ್ಕೂ ಹೆಚ್ಚು ಭಾರತೀಯರು ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ. ಅದರಲ್ಲಿ 33 ಲಕ್ಷಕ್ಕೂ ಹೆಚ್ಚು ಜನ ಭಾರತೀಯ ಮೂಲದ ವ್ಯಕ್ತಿಗಳು(PIO) ವರ್ಗದಲ್ಲಿದ್ದಾರೆ.
ಅಮೆರಿಕ ನಾಗರಿಕರಲ್ಲದ NRIಗಳು ತಮ್ಮ ತಾಯ್ನಾಡಿಗೆ ಹಣ ಕಳುಹಿಸುವಾಗ ಶೇ. 5 ರಷ್ಟು ವಿದೇಶಿ ರವಾನೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ ಎಂದು SW ಇಂಡಿಯಾದ ಅಂತರರಾಷ್ಟ್ರೀಯ ತೆರಿಗೆ ಮತ್ತು ವರ್ಗಾವಣೆ ಬೆಲೆ ನಿಗದಿ ಸಂಸ್ಥೆಯ ಸೌರವ್ ಸೂದ್ ಹೇಳಿದ್ದಾರೆ.
Advertisement