
ಗುವಾಹಟಿ: ಪಹಲ್ಗಾಮ್ ಭಯೋತ್ಪಾದನಾ ದಾಳಿಯ ನಂತರ ಅಸ್ಸಾಂನಲ್ಲಿ "ದೇಶ ವಿರೋಧಿ" ಚಟುವಟಿಕೆಗಳಲ್ಲಿ ತೊಡಗಿರುವ ಆರೋಪದ ಮೇಲೆ ಇನ್ನೂ ಮೂವರನ್ನು ಬಂಧಿಸಲಾಗಿದೆ.
ಇದರೊಂದಿಗೆ ಇಂತಹ ಆರೋಪದಲ್ಲಿ ಇಲ್ಲಿಯವರೆಗೂ 71 ಮಂದಿಯನ್ನು ಬಂಧಿಸಲಾಗಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸೋಮವಾರ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಮುಖ್ಯಮಂತ್ರಿ, ಕೊಕ್ರಜಾರ್, ಗೋಲ್‌ಪಾರಾ ಮತ್ತು ದಕ್ಷಿಣ ಸಲ್ಮಾರಾ-ಮಂಕಚಾರ್ ಜಿಲ್ಲೆಗಳಿಂದ ತಲಾ ಒಬ್ಬರನ್ನು ಬಂಧಿಸಲಾಗಿದೆ. 71 ದೇಶವಿರೋಧಿಗಳು ಈಗ ಕಂಬಿಗಳ ಹಿಂದೆ ಇದ್ದಾರೆ! ಅಸ್ಸಾಂ ಪೊಲೀಸರು ಡಿಜಿಟಲ್ ವಲಯದ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಹಿಂದೆ ಪಹಲ್ಗಾಮ್ ಭಯೋತ್ಪಾದಕರ ದಾಳಿ ವಿಚಾರದಲ್ಲಿ ಪಾಕಿಸ್ತಾನವನ್ನು ಸಮರ್ಥಿಸಿಕೊಂಡಿದ್ದ ಪ್ರತಿಪಕ್ಷ ಎಐಯುಡಿಎಫ್ ಶಾಸಕ ಅಮಿನುಲ್ ಇಸ್ಲಾಂ ಅವರನ್ನು ದೇಶದ್ರೋಹ ಆರೋಪದ ಮೇಲೆ ಬಂಧಿಸಲಾಗಿತ್ತು. ಪ್ರಕರಣದಲ್ಲಿ ಜಾಮೀನು ಪಡೆದ ನಂತರ, ಇಸ್ಲಾಂ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿಯಲ್ಲಿ ಬಂಧಿಸಲಾಯಿತು.
ಕಳೆದ ತಿಂಗಳು ಜಮ್ಮು ಮತ್ತು ಕಾಶ್ಮೀರ ಭಯೋತ್ಪಾದಕ ದಾಳಿಯ ನಂತರ 'ಪಾಕಿಸ್ತಾನ್ ಜಿಂದಾಬಾದ್' ಘೋಷಣೆ ಕೂಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮೇ 2 ರಂದು ಶರ್ಮಾ ಎಚ್ಚರಿಕೆ ನೀಡಿದ್ದರು.
Advertisement