
ನವದೆಹಲಿ: ಬೇಹುಗಾರಿಕೆ ಆರೋಪದಲ್ಲಿ ಬಂಧಿಸಲಾಗಿರುವ ಹರಿಯಾಣ ಮೂಲದ ಯು ಟ್ಯೂಬರ್ ಜ್ಯೋತಿ ಮಲ್ಹೋತ್ರಾ ಅವರನ್ನು ಪಾಕ್ ನ ಪ್ರಮುಖ ಸಂಪನ್ಮೂಲವನ್ನಾಗಿ ಪರಿಗಣಿಸಲಾಗಿತ್ತು ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಭಾರತ-ಪಾಕ್ ಸೇನಾ ಸಂಘರ್ಷದ ಸಮಯದಲ್ಲಿ ಜ್ಯೋತಿ ಅವರು ಪಾಕ್ ಏಜೆಂಟ್‌ಗಳೊಂದಿಗೆ ಸಂಪರ್ಕದಲ್ಲಿದ್ದರು. ಆದರೆ ಸೇನೆಗೆ ಸಂಬಂಧಿಸಿದ ಯಾವುದೇ ಮಾಹಿತಿ ಅವರಿಗೆ ಸಿಕ್ಕಿರಲಿಲ್ಲ. ಜ್ಯೋತಿ ಅವರು ಪ್ರಾಯೋಜಿತ ಪ್ರವಾಸಗಳಲ್ಲಿ ಪಾಕಿಸ್ತಾನಕ್ಕೆ ಹಲವು ಬಾರಿ ಭೇಟಿ ನೀಡಿದ್ದರು ಮತ್ತು ಪಹಲ್ಗಾಮ್ ದಾಳಿಗೂ ಮುನ್ನ ಆ ದೇಶಕ್ಕೆ ಭೇಟಿ ನೀಡಿದ್ದರು ಎಂದು ಹಿಸಾರ್ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಶಶಾಂಕ್ ಕುಮಾರ್ ಸಾವನ್ ತಿಳಿಸಿದ್ದಾರೆ.
ಆಧುನಿಕ ಯುದ್ಧವು ಗಡಿಯಲ್ಲಿನ ಹೋರಾಟ ಮಾತ್ರವಲ್ಲ, ಪಾಕಿಸ್ತಾನದ ಏಜೆಂಟ್‌ಗಳು ಸಾಮಾಜಿಕ ಮಾಧ್ಯಮದ ಪ್ರಭಾವಿಗಳನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಜ್ಯೋತಿ ಮಲ್ಹೋತ್ರಾ ಒಮ್ಮೆ ಚೀನಾಕ್ಕೆ ಭೇಟಿ ನೀಡಿದ್ದರು. ಅವರ ಪ್ರಯಾಣದ ವೆಚ್ಚವು ಅವರ ಘೋಷಿತ ಆದಾಯಕ್ಕಿಂತ ಹೆಚ್ಚಾಗಿದೆ. ಆಕೆಯ ಹಣಕಾಸಿನ ವಿವರಗಳನ್ನು ವಿಶ್ಲೇಷಿಸುತ್ತಿದ್ದೇವೆ ಎಂದು ಅವರು ವಿವರಿಸಿದರು.
ನವದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್‌ನ ಉದ್ಯೋಗಿಯಾಗಿದ್ದ ಎಹ್ಸಾನ್-ಉರ್-ರಹೀಮ್ ಅಲಿಯಾಸ್ ಡ್ಯಾನಿಶ್ ಸೇರಿದಂತೆ ಪಾಕ್ ಪ್ರಮುಖ ಏಜೆಂಟರ್ ಜೊತೆಗೆ ಮಲ್ಹೋತ್ರಾ ನಿರಂತರ ಸಂಪರ್ಕದಲ್ಲಿದ್ದರು. ಕಳೆದ ವರ್ಷ ನವದೆಹಲಿಯ ಪಾಕಿಸ್ತಾನ ಹೈಕಮಿಷನ್‌ನಲ್ಲಿ ನಡೆದ ವಿಶೇಷ ಇಫ್ತಾರ್ ಔತಣಕೂಟದಲ್ಲಿ ಡ್ಯಾನಿಶ್ ಜೊತೆ ಭಾಗವಹಿಸಿದ್ದಳು ಎಂದು ವರದಿಯಾಗಿದೆ.
ಜ್ಯೋತಿ ಮಲ್ಹೋತ್ರಾ ವಿರುದ್ಧ ಅಧಿಕೃತ ರಹಸ್ಯ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಹೆಚ್ಚಿನ ವ್ಯಕ್ತಿಗಳು ಭಾಗಿಯಾಗಿರಬಹುದು ಎಂದು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಜ್ಯೋತಿ ಪ್ರಸ್ತುತ ಐದು ದಿನಗಳ ಪೊಲೀಸ್ ಕಸ್ಟಡಿಯಲ್ಲಿದ್ದು, ಆಕೆಯ ಸಂವಹನ ಮತ್ತು ಸಂಪರ್ಕಗಳನ್ನು ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. ವಿಶೇಷವಾಗಿ ಪಹಲ್ಗಾಮ್ ದಾಳಿಗೂ ಮುನ್ನಾ ಬಂದಿರುವ ಕರೆಗಳ ಕುರಿತು ವಿವರವಾದ ತನಿಖೆ ನಡೆಸಲಾಗುತ್ತಿದೆ.
Advertisement