
ಉತ್ತರ ಪ್ರದೇಶ: ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ISI) ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ವ್ಯಕ್ತಿಯೊರ್ವನನ್ನು ಬಂಧಿಸಿದೆ. ಆರೋಪಿಯನ್ನು ಶೆಹಜಾದ್ ಎಂದು ಗುರುತಿಸಲಾಗಿದೆ. ರಾಂಪುರ ಜಿಲ್ಲೆಯ ನಿವಾಸಿಯನ್ನು ಮೊರಾದಾಬಾದ್‌ನಿಂದ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನಿ ಗುಪ್ತಚರ ಸಂಸ್ಥೆಗಳಿಗೆ ಬೇಹುಗಾರಿಕೆ ನಡೆಸುತ್ತಿರುವ ವ್ಯಕ್ತಿಗಳ ಮೇಲೆ ರಾಷ್ಟ್ರವ್ಯಾಪಿ ಪತ್ತೆ ನಡೆಯುತ್ತಿರುವಂತೆಯೇ ಶೆಹಜಾದ್ ಅವರನ್ನು ಬಂಧಿಸಲಾಗಿದೆ. ಇದೇ ಕಾರಣದಿಂದ ಈಗಾಗಲೇ ಸಾಮಾಜಿಕ ಮಾಧ್ಯಮದ ಪ್ರಭಾವಿಗಳು ಮತ್ತು ಯೂಟ್ಯೂಬರ್‌ಗಳು ಸೇರಿದಂತೆ ಹಲವರನ್ನು ಬಂಧಿಸಲಾಗಿದೆ. ಶೆಹಜಾದ್ ಅವರು ಇಸ್ಲಾಮಾಬಾದ್‌ನ ಗುಪ್ತಚರ ಸಂಸ್ಥೆಯೊಂದಿಗೆ ಸಂಪರ್ಕದಲ್ಲಿದ್ದರು ಎಂಬುದು ತಿಳಿದುಬಂದಿದೆ ಎಂದು ಎಟಿಎಸ್ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಶೆಹಜಾದ್ ಪಾಕಿಸ್ತಾನಕ್ಕೆ ಹಲವು ಬಾರಿ ಪ್ರಯಾಣಿಸಿದ್ದರು. ಅವರು ಸೌಂದರ್ಯವರ್ಧಕಗಳು, ಬಟ್ಟೆಗಳು, ಮಸಾಲೆಗಳು ಮತ್ತು ಇತರ ಸರಕುಗಳ ಅಕ್ರಮ ಗಡಿಯಾಚೆಗಿನ ವ್ಯಾಪಾರದಲ್ಲಿ ತೊಡಗಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.
ಕಳ್ಳಸಾಗಣೆ ದಂಧೆಯು ಆತನ ಬೇಹುಗಾರಿಕೆ ಚಟುವಟಿಕೆಗಳಿಗೆ ಪ್ರಮುಖ ಕಾರಣವಾಗಿ ಕಾರ್ಯನಿರ್ವಹಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶೆಹಜಾದ್ ಅನೇಕ ISI ಕಾರ್ಯಕರ್ತರೊಂದಿಗೆ ನಿಕಟ ಸಂಪರ್ಕವನ್ನು ಹೊಂದುವ ಮೂಲಕ ಅವರಿಗೆ ಭಾರತದ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ಮತ್ತು ಗೌಪ್ಯ ಮಾಹಿತಿಯನ್ನು ಒದಗಿಸಿದ ಆರೋಪವಿದೆ. ಆರೋಪಿಯು ಗುಪ್ತಚರ ಮಾಹಿತಿಗಳನ್ನು ರವಾನಿಸುವುದಲ್ಲದೆ ಭಾರತದೊಳಗೆ ಐಎಸ್‌ಐಗೆ ಕಾರ್ಯಾಚರಣೆಯನ್ನು ಸುಗಮಗೊಳಿಸುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಐಎಸ್‌ಐ ಸೂಚನೆಯ ಮೇರೆಗೆ ಶೆಹಜಾದ್ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಪಾಕಿಸ್ತಾನಿ ಏಜೆಂಟ್‌ಗಳಿಗೆ ಹಣವನ್ನು ವರ್ಗಾವಣೆ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ. ಐಎಸ್‌ಐ-ಸಂಬಂಧಿತ ಚಟುವಟಿಕೆಗಳಿಗೆ ನೇಮಿಸಿಕೊಳ್ಳುವ ಉದ್ದೇಶದಿಂದ ರಾಂಪುರ ಮತ್ತಿತರ ಉತ್ತರ ಪ್ರದೇಶದ ಕಡೆಗಳಿಂದ ಜನರನ್ನು ಕಳ್ಳಸಾಗಾಣಿಕೆಯ ನೆಪದಲ್ಲಿ ಪಾಕಿಸ್ತಾನಕ್ಕೆ ಕಳುಹಿಸಲು ನೆರವಾಗಿದ್ದ ಎನ್ನಲಾಗಿದೆ.
ಇಂತಹ ವ್ಯಕ್ತಿಗಳಿಗೆ ವೀಸಾ ಮತ್ತು ಪ್ರಯಾಣದ ದಾಖಲೆಗಳನ್ನು ಐಎಸ್ಐ ಕಾರ್ಯಕರ್ತರ ಸಹಾಯದಿಂದ ಒದಗಿಸಲಾಗಿದೆ ಎಂದು ವರದಿಯಾಗಿದೆ. ಶೆಹಜಾದ್ ಅವರು ವಿಧ್ವಂಸಕ ಉದ್ದೇಶಗಳಿಗೆ ಸಂವಹನಕ್ಕಾಗಿ ನೆರವಾಗುವ ನಿಟ್ಟಿನಲ್ಲಿ ಭಾರತೀಯ ಸಿಮ್ ಕಾರ್ಡ್‌ಗಳನ್ನು ಶೆಹಜಾದ್ ಖರೀದಿಸಿ ಐಎಸ್‌ಐ ಏಜೆಂಟ್‌ಗಳಿಗೆ ತಲುಪಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಲಖನೌದ ಎಟಿಎಸ್ ಪೊಲೀಸ್ ಠಾಣೆಯಲ್ಲಿ ಶೆಹಜಾದ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 148 ಮತ್ತು 152 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದ್ದು, ಮುಂದಿನ ಕಾನೂನು ಪ್ರಕ್ರಿಯೆ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Advertisement