
ನವದೆಹಲಿ: ಪಹಲ್ಗಾಮ್ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆ ಕುರಿತು ಕಾಂಗ್ರೆಸ್ ಪಕ್ಷದ ನಾಯಕರು ಎತ್ತುತ್ತಿರುವ ಪ್ರಶ್ನೆಗಳ ವಿಚಾರಕ್ಕೆ ಸಂಬಂಧಿಸಿದಂತೆ ಪತ್ರಕರ್ತೆ ಬರ್ಖಾದತ್ ಕೈ ನಾಯಕರ ಕಾಲೆಳೆದಿದ್ದಾರೆ.
ಆಪರೇಷನ್ ಸಿಂಧೂರ ವಿಚಾರವಾಗಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿದೇಶಾಂಗ ಸಚಿವ ಜೈ ಶಂಕರ್ ವಿರುದ್ಧ ಎತ್ತುತ್ತಿರುವ ಪ್ರಶ್ನೆಗಳು ಇದೀಗ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದ್ದು, 'ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ ಮಿಲಿಟರಿ ದಾಳಿ ನಡೆಸುವ ಮೊದಲು ವಿದೇಶಾಂಗ ಸಚಿವರು ಪಾಕಿಸ್ತಾನಕ್ಕೆ ಮಾಹಿತಿ ನೀಡುವ ಮೂಲಕ ಭದ್ರತೆಯೊಂದಿಗೆ ರಾಜಿ ಮಾಡಿಕೊಂಡಿದ್ದಾರೆ' ಎಂದು ರಾಹುಲ್ ಗಾಂಧಿ ಈ ಹಿಂದೆ ಆರೋಪಿಸಿದ್ದರು.
ಈ ಕುರಿತು ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, 'ವಿದೇಶಾಂಗ ಸಚಿವ ಜೈಶಂಕರ್ ಅವರ ಮೌನವೇ ಹೇಳುವಂತೆ, ಅದು ಶಾಪಗ್ರಸ್ತ. ಹಾಗಾಗಿ ನಾನು ಮತ್ತೊಮ್ಮೆ ಕೇಳುತ್ತೇನೆ: ಆಪರೇಷನ್ ಸಿಂಧೂರ ಅಡಿಯಲ್ಲಿ ಮಿಲಿಟರಿ ಕಾರ್ಯಾಚರಣೆ ನಡೆಸುವ ಬಗ್ಗೆ ಪಾಕಿಸ್ತಾನಕ್ಕೆ ತಿಳಿದಿದ್ದರಿಂದ ನಾವು ಎಷ್ಟು ಭಾರತೀಯ ವಿಮಾನಗಳನ್ನು ಕಳೆದುಕೊಂಡಿದ್ದೇವೆ?' ಎಂದು ಅವರು ಎಕ್ಸ್‌ನಲ್ಲಿ ಪ್ರಶ್ವಿಸಿದ್ದರು.
ಅಲ್ಲದೆ ಇದೊಂದು ಲೋಪವಲ್ಲ. ಬದಲಿಗೆ ಇದು ಅಪರಾಧ ಮತ್ತು ರಾಷ್ಟ್ರವು ಸತ್ಯವನ್ನು ತಿಳಿದುಕೊಳ್ಳಬೇಕಿದೆ ಎಂದು ಜೈಶಂಕರ್ ಅವರಿಗೆ ನೇರವಾಗಿ ಪ್ರಶ್ನಿಸಿದ್ದರು.
ಕಾಲೆಳೆದ ಪತ್ರಕರ್ತೆ Barkha dutt
ಇದೇ ವಿಚಾರವಾಗಿ ಇದೀಗ ಪತ್ರಕರ್ತೆ ಬರ್ಖಾದತ್ ಕೂಡ ಕಾಂಗ್ರೆಸ್ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಭಾರತೀಯ ಸೇನೆಯ ಕುರಿತು ಅನುಮಾನ ವ್ಯಕ್ತಪಡಿಸುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.
'ವಿದೇಶಾಂಗ ಸಚಿವ S ಜೈಶಂಕರ್ ಭಾರತದ ಯುದ್ಧ ಯೋಜನೆಗಳನ್ನು ಲೀಕ್ ಮಾಡಿದ್ದಾರೆ ಎಂದು ದೂರುತ್ತಿರುವ ಕಾಂಗ್ರೆಸ್ ತನ್ನ ಆರೋಪಗಳನ್ನು ಇಮ್ಮಡಿಗೊಳಿಸುತ್ತಿದೆ ಎಂದು ನಂಬಲೂ ಸಾಧ್ಯವಾಗುತ್ತಿಲ್ಲ.
ದೇಶದ ಮಿಲಿಟರಿ ಕಾರ್ಯಾಚರಣೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಅವರು ಅರ್ಥಮಾಡಿಕೊಳ್ಳುತ್ತಾರೆಯೇ? ಇದಕ್ಕೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ, ಆದರೆ ಯುದ್ಧಕಾಲದಲ್ಲಿ ಮೂಲಭೂತ ಪ್ರಬುದ್ಧತೆ ಮತ್ತು ಏಕತೆ ಅಗತ್ಯ. ಕಾಂಗ್ರೆಸ್ ನಡೆ ಆಘಾತಕಾರಿ' ಎಂದು ಬರ್ಖಾದತ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
Advertisement