
ನವದೆಹಲಿ: ಇತ್ತೀಚಿನ ಸೇನಾ ಸಂಘರ್ಷದ ಸಂದರ್ಭದಲ್ಲಿ ನಿಯೋಜಿಸಲಾಗಿದ್ದ ಸೇನಾ ಪಡೆಯನ್ನು ಮೇ ಅಂತ್ಯದೊಳಗೆ ಹಿಂಪಡೆಯಲು ಪಾಕಿಸ್ತಾನ ಮತ್ತು ಭಾರತ ಒಪ್ಪಿಕೊಂಡಿವೆ ಎಂದು ಪಾಕಿಸ್ತಾನದ ಹಿರಿಯ ಭದ್ರತಾ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆ ಹಿನ್ನೆಲೆಯಲ್ಲಿ ನಾಲ್ಕು ದಿನ ಭಾರತ ಮತ್ತು ಪಾಕಿಸ್ತಾನ ನಡುವೆ ಸೇನಾ ಸಂಘರ್ಷ ನಡೆದಿತ್ತು. ಇದರಲ್ಲಿ 70 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಉಗ್ರರಿಗೆ ಪಾಕಿಸ್ತಾನ ಬೆಂಬಲ ನೀಡುತ್ತಿದೆ ಎಂದು ಭಾರತ ಆರೋಪಿಸಿತ್ತು. ಆದರೆ, ಈ ಆರೋಪವನ್ನು ಪಾಕಿಸ್ತಾನ ನಿರಾಕರಿಸುತ್ತಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನಿರೀಕ್ಷಿತವಾಗಿ ಕದನ ವಿರಾಮವನ್ನು ಘೋಷಿಸಿದ ನಂತರ ಉಭಯ ರಾಷ್ಟ್ರಗಳ ಸೇನಾ ಕಾರ್ಯಾಚರಣೆ ದಿಢೀರನೆ ರದ್ದಾಗಿತ್ತು. ಮೇ ಅಂತ್ಯದೊಳಗೆ ಸಂಘರ್ಷದ ಸ್ಥಳಗಳಲ್ಲಿ ನಿಯೋಜಿಸಲಾಗಿದ್ದ ಸೇನಾಪಡೆಯನ್ನು ಹಿಂಪಡೆಯಲಾಗುವುದು ಎಂದು ಹಿರಿಯ ಭದ್ರತಾ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆ AFPಗೆ ತಿಳಿಸಿದ್ದಾರೆ.
ಕಾಶ್ಮೀರದ ಗಡಿ ನಿಯಂತ್ರಣ ರೇಖೆ (LoC)ಯಲ್ಲಿ ನಿಯೋಜಿಸಲಾದ ಹೆಚ್ಚುವರಿ ಪಡೆಗಳು ಮತ್ತು ಶಸ್ತ್ರಾಸ್ತ್ರಗಳನ್ನು ಹಂತಹಂತವಾಗಿ ಹಿಂಪಡೆಯಲು ಎರಡೂ ದೇಶಗಳು ಒಪ್ಪಿಕೊಂಡಿವೆ ಎಂದು ಅವರು ಹೇಳಿದ್ದಾರೆ.
ಗಡಿ ಸುತ್ತಮುತ್ತಲಿನ ಪ್ರದೇಶಗಳಿಂದ ಸೇನೆ ನಿಯೋಜನೆ ಕಡಿತಕ್ಕೆ ಕೂಡಲೇ ಕ್ರಮ ಕೈಗೊಳ್ಳಲು ಉಭಯ ರಾಷ್ಟ್ರಗಳು ಒಪ್ಪಿಕೊಂಡಿರುವುದಾಗಿ ಕಳೆದ ವಾರ ಭಾರತೀಯ ಸೇನೆ ಹೇಳಿದ ಬೆನ್ನಲ್ಲೇ ಇದೀಗ ಪಾಕಿಸ್ತಾನವೂ ಇದೇ ರೀತಿ ಹೇಳಿದೆ.
ಈ ಎಲ್ಲಾ ಕ್ರಮಗಳನ್ನು ಆರಂಭದಲ್ಲಿ 10 ದಿನಗಳಲ್ಲಿ ಪೂರ್ಣಗೊಳಿಸಲು ಯೋಜಿಸಲಾಗಿತ್ತು. ಆದರೆ ಕೆಲವೊಂದು ಸಣ್ಣ ಸಮಸ್ಯೆಗಳು ವಿಳಂಬಕ್ಕೆ ಕಾರಣವಾಗಿದೆ ಎಂದು ಪಾಕ್ ಅಧಿಕಾರಿ ತಿಳಿಸಿದ್ದಾರೆ.
Advertisement