
ನವದೆಹಲಿ: ಬಲೂಚಿಸ್ತಾನದಲ್ಲಿ ನಡೆದ ಆತ್ಮಹತ್ಯಾ ಬಾಂಬ್ ಸ್ಫೋಟದಲ್ಲಿ ಭಾರತದ ಕೈವಾಡವಿದೆ ಎಂಬ ಪಾಕಿಸ್ತಾನದ ಆರೋಪಕ್ಕೆ ಭಾರತ ಖಡಕ್ ತಿರುಗೇಟು ನೀಡಿದೆ.
ಬಲೂಚಿಸ್ತಾನದ ಖುಜ್ದಾರ್ ನಗರದಲ್ಲಿ ಶಾಲಾ ಬಸ್ ಅನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, ಈ ದಾಳಿಯಲ್ಲಿ ನಾಲ್ವರು ಮಕ್ಕಳು ಸಾವನ್ನಪ್ಪಿ, 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಈ ದಾಳಿ ವಿಚಾರವನ್ನೇ ಮುಂದಿಟ್ಟುಕೊಂಡು ಇದೀಗ ಪಾಕಿಸ್ತಾನ ಭಾರತದ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದು, ಈ ದಾಳಿಯಲ್ಲಿ ಭಾರತದ ಕೈವಾಡವಿದೆ ಎಂದು ಗಂಭೀರ ಆರೋಪ ಮಾಡಿದೆ.
ಪಾಕ್ ಪ್ರಧಾನಿ ಆರೋಪ
ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಬಾಂಬ್ ದಾಳಿಯನ್ನು ಖಂಡಿಸಿದರು. ಇದನ್ನು ಭಾರತದ ಬೆಂಬಲಿತ ಭಯೋತ್ಪಾದಕರು ಮಾಡಿರಬಹುದು ಎಂದು ಆರೋಪಿಸಿದರು. ಭಾರತೀಯ ಗುಪ್ತಚರ ಸಂಸ್ಥೆಗಳು ಬಲೂಚಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಾಕ್ಸಿ ಉಗ್ರಗಾಮಿ ಗುಂಪುಗಳ ಮೂಲಕ ದಾಳಿಯನ್ನು ಆಯೋಜಿಸಿವೆ ಎಂದು ಆರೋಪಿಸಿತು. ಆದರೆ ಈ ದಾಳಿಗೆ ಬೆಂಬಲಿಸಲು ಯಾವುದೇ ನಿರ್ದಿಷ್ಟ ಪುರಾವೆಗಳು ಇರುವರೆಗೂ ಲಭ್ಯವಾಗಿಲ್ಲ.
ಇನ್ನೂ ಈ ಘಟನೆಗೆ ಯಾವುದೇ ಗುಂಪು ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ, ಆದರೆ ಈ ಪ್ರದೇಶದಲ್ಲಿ ಭದ್ರತಾ ಪಡೆಗಳು ಹಾಗೂ ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಯುತ್ತಲೇ ಇರುತ್ತದೆ. ಹೀಗಾಗಿ ಅನುಮಾನವು ಬಲೂಚ್ ಪ್ರತ್ಯೇಕವಾದಿಗಳ ಕಡೆಗೆ ಮೂಡುವುದು ಸಹಜವಾಗಿದೆ. ಶತ್ರುಗಳು ಮುಗ್ಧ ಮಕ್ಕಳನ್ನು ಗುರಿಯಾಗಿಸಿಕೊಂಡು ಸಂಪೂರ್ಣ ಅನಾಗರಿಕತೆಯನ್ನು ಎಸಗಿದ್ದಾರೆ. ಅಂತಹ ಮೃಗಗಳು ಯಾವುದೇ ದಯೆಗೆ ಅರ್ಹರಲ್ಲ ಎಂದು ಆಂತರಿಕ ಸಚಿವ ಮೊಕ್ಸಿನ್ ನಖಿ ದಾಳಿಯನ್ನು ತೀವ್ರವಾಗಿ ಖಂಡಿಸಿದರು.
ಜಾಗತಿಕ ಭಯೋತ್ಪಾದನೆಯ ಕೇಂದ್ರಬಿಂದು: ಬಟ್ಟೆ ಸುತ್ತಿ ಹೊಡೆದ ಭಾರತ
ಇನ್ನು ಪಾಕ್ ಆರೋಪಕ್ಕೆ ಅದರದ್ದೇ ಧಾಟಿಯಲ್ಲಿ ಉತ್ತರ ನೀಡಿರುವ ಭಾರತ 'ಜಾಗತಿಕ ಭಯೋತ್ಪಾದನೆಯ ಕೇಂದ್ರಬಿಂದು ಎಂಬ ತನ್ನ ಖ್ಯಾತಿಯಿಂದ ಗಮನವನ್ನು ಬೇರೆಡೆ ಸೆಳೆಯಲು ಮತ್ತು ತನ್ನದೇ ಆದ ಘೋರ ವೈಫಲ್ಯಗಳನ್ನು ಮರೆಮಾಡಲು ಭಾರತದತ್ತ ಬೊಟ್ಟು ಮಾಡುತ್ತಿದೆ ಎಂದು ತಿರುಗೇಟು ನೀಡಿದೆ.
ಪಾಕ್ ಮಾಡಿರುವ ಆಧಾರರಹಿತ ಆರೋಪಗಳನ್ನು ಭಾರತ ತಿರಸ್ಕರಿಸಿದ್ದು, ಈ ಬಗ್ಗೆ ಮಾತನಾಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, 'ಖುಜ್ದಾರ್ ಘಟನೆಯಲ್ಲಿ ಭಾರತದ ಕೈವಾಡವಿದೆ ಎಂಬ ಪಾಕಿಸ್ತಾನದ ಆಧಾರರಹಿತ ಆರೋಪಗಳನ್ನು ಭಾರತ ತಿರಸ್ಕರಿಸುತ್ತದೆ. ಪಾಕ್ ಮಾಡಿರುವ ಆಧಾರರಹಿತ ಆರೋಪಗಳನ್ನು ಭಾರತ ತಿರಸ್ಕರಿಸಿದೆ. ಅಂತಹ ದುರಂತ ಘಟನೆಯಲ್ಲಿ ಆದ ಜೀವಹಾನಿಗೆ ಭಾರತ ಸಂತಾಪ ವ್ಯಕ್ತಪಡಿಸುತ್ತದೆ.
ಜಾಗತಿಕ ಭಯೋತ್ಪಾದನೆಯ ಕೇಂದ್ರಬಿಂದು ಎಂಬ ತನ್ನ ಖ್ಯಾತಿಯಿಂದ ಗಮನವನ್ನು ಬೇರೆಡೆ ಸೆಳೆಯಲು ಮತ್ತು ತನ್ನದೇ ಆದ ಘೋರ ವೈಫಲ್ಯಗಳನ್ನು ಮರೆಮಾಡಲು, ಪಾಕಿಸ್ತಾನವು ತನ್ನ ಎಲ್ಲಾ ಆಂತರಿಕ ಸಮಸ್ಯೆಗಳಿಗೆ ಭಾರತವನ್ನು ದೂಷಿಸುವುದು ಎರಡನೇ ಸ್ವಭಾವವಾಗಿದೆ. ಜಗತ್ತನ್ನು ಮೋಸಗೊಳಿಸುವ ಈ ಪ್ರಯತ್ನ ವಿಫಲವಾಗುವುದು ಖಚಿತ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
Advertisement