
ಪಾಟ್ನಾ: 2019 ರಲ್ಲಿ ಬಿಹಾರದ ದರ್ಭಾಂಗಾ ಜಿಲ್ಲೆಯಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಿನಗರ ಬಿಜೆಪಿ ಶಾಸಕ ಮಿಶ್ರಿ ಲಾಲ್ ಯಾದವ್ ಅವರಿಗೆ ಕೋರ್ಟ್ ಜೈಲು ಶಿಕ್ಷೆ ವಿಧಿಸಿದ್ದು, ಪೊಲೀಸರು ಗುರುವಾರ ಅವರನ್ನು ವಶಕ್ಕೆ ಪಡೆದು ಜೈಲಿಗೆ ಕಳುಹಿಸಿದ್ದಾರೆ.
2019 ರ ಜನವರಿಯಲ್ಲಿ ಉಮೇಶ್ ಮಿಶ್ರಾ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ನ್ಯಾಯಾಲಯವು ಬಿಜೆಪಿ ಶಾಸಕನಿಗೆ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ದರ್ಭಾಂಗಾದ ವಿಶೇಷ ಸಂಸದ/ಶಾಸಕರ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಸುಮನ್ ಕುಮಾರ್ ದಿವಾಕರ್ ಅವರು, ನ್ಯಾಯಾಲಯದ ಮುಂದೆ ಹಾಜರಾಗಿದ್ದ ಶಾಸಕರನ್ನು ವಶಕ್ಕೆ ಪಡೆಯುವಂತೆ ಆದೇಶಿಸಿದರು.
ಶಾಸಕ ಯಾದವ್ ಅವರಿಗೆ ಕೋರ್ಟ್ ಮೂರು ತಿಂಗಳ ಜೈಲು ಶಿಕ್ಷೆ ಮತ್ತು 500 ರೂ. ದಂಡ ವಿಧಿಸಿದ್ದು,ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿದೆ.
ಈ ಪ್ರಕರಣದಲ್ಲಿ ಶಾಸಕ ಯಾದವ್ ಮತ್ತು ಮತ್ತೊಬ್ಬ ಆರೋಪಿ ಸುರೇಶ್ ಯಾದವ್ ತಪ್ಪಿತಸ್ಥರೆಂದು ನ್ಯಾಯಾಲಯ ತೀರ್ಪು ನೀಡಿದೆ.
ನ್ಯಾಯಾಲಯದ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಾಸಕ ಯಾದವ್, ಸಂಸದ/ಶಾಸಕರ ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದೇನೆ ಎಂದು ಹೇಳಿದರು.
"ನಾನು ವಿಚಾರಣೆಗೆ ಹಾಜರಾದಾಗ, ನ್ಯಾಯಾಲಯವು ನನ್ನನ್ನು 24 ಗಂಟೆಗಳ ಕಾಲ ಕಸ್ಟಡಿಗೆ ತೆಗೆದುಕೊಂಡಿತು. ನಾನು ನ್ಯಾಯಾಲಯದ ಆದೇಶವನ್ನು ಪಾಲಿಸಬೇಕು ಮತ್ತು ಜೈಲಿಗೆ ಹೋಗಬೇಕು" ಎಂದು ಅವರು ತಿಳಿಸಿದರು.
Advertisement