
ಕಾಮ್‌ಜಾಂಗ್: ಭದ್ರತಾ ಪಡೆಗಳು ಮಣಿಪುರದ ಕಾಮ್‌ಜಾಂಗ್ ಜಿಲ್ಲೆಯಲ್ಲಿ ನಿಷೇಧಿತ ಉಗ್ರ ಸಂಘಟನೆ 'ಪ್ರೆಪಕ್‌ನ (Prepak) ಓರ್ವ ಉಗ್ರನನ್ನು ಬಂಧಿಸಿದ್ದು, ಆತನಿಂದ ಬಂದೂಕು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಕಾಸೋಮ್ ಖುಲ್ಲೆನ್ ಪೊಲೀಸ್ ಠಾಣೆ ವ್ಯಾಪ್ತಿಯ ತಾರೆಟ್ ನದಿ ಸಮೀಪದ ಸ್ಥಳವೊಂದರಿಂದ ಆತನನ್ನು ಬಂಧಿಸಲಾಗಿದೆ. ಬಂಧಿತ ಉಗ್ರನಿಂದ ಒಂದು 9 ಎಂಎಂ ಪಿಸ್ತೂಲ್ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಶುಕ್ರವಾರ ಮತ್ತೊಂದು ಕಾರ್ಯಾಚರಣೆ ವೇಳೆ ಭದ್ರತಾ ಪಡೆಗಳು ಇಂಫಾಲ್ ಪೂರ್ವ ಜಿಲ್ಲೆಯ ಪಂಗೆಯ್ ನೇಪಾಳಿ ಬಸ್ತಿ ಮತ್ತು ಅದರ ಪಕ್ಕದ ಪ್ರದೇಶದಲ್ಲಿ ಎರಡು ಬಂದೂಕುಗಳು, ಮೂರು ಹ್ಯಾಂಡ್ ಗ್ರೆನೇಡ್‌ಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಎರಡು ವರ್ಷಗಳ ಹಿಂದೆ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ನಂತರ ಭದ್ರತಾ ಪಡೆಗಳು ಮಣಿಪುರದಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸುತ್ತಿವೆ. ಮೇ 2023 ರಿಂದ ಮೈತಿ ಮತ್ತು ಕುಕಿ-ಜೋ ನಡುವಿನ ಜನಾಂಗೀಯ ಹಿಂಸಾಚಾರದಲ್ಲಿ 260 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ.
Advertisement