
ಭಾರತವು 5ನೇ ತಲೆಮಾರಿನ ಸ್ಟೆಲ್ತ್ ಫೈಟರ್ ಜೆಟ್ ನಿರ್ಮಾಣಕ್ಕೆ ಮುಂದಾಗಿದ್ದು, ಪಾಕಿಸ್ತಾನ-ಚೀನಾಗೆ ಖಡಕ್ ತಿರುಗೇಟು ನೀಡಿದೆ. ಈ ಯೋಜನೆಯು ದೇಶೀಯ ಸಂಸ್ಥೆಗಳ ಮೂಲಕ ಕೈಗೊಳ್ಳಲಾಗುತ್ತದೆ. HAL ಮೇಲೆ ಒತ್ತಡವನ್ನು ಕಡಿಮೆ ಮಾಡಲು ಖಾಸಗಿ ಸಂಸ್ಥೆಗಳನ್ನು ಒಳಗೊಳ್ಳುವ ನಿರ್ಧಾರವನ್ನು ರಕ್ಷಣಾ ಸಮಿತಿಯು ಶಿಫಾರಸು ಮಾಡಿದೆ. DRDO ತನ್ನ ಸ್ಥಳೀಯ ವಿಮಾನ ಎಂಜಿನ್ ಅಭಿವೃದ್ಧಿ ಕಾರ್ಯದಲ್ಲಿ ನಿರತರಾಗಿದ್ದು, ಲೈಟ್ ಕಾಂಬ್ಯಾಟ್ ಏರ್‌ಕ್ರಾಫ್ಟ್ ತೇಜಸ್ ಯೋಜನೆಯ ಪ್ರಗತಿಯಲ್ಲಿದೆ.
ನವದೆಹಲಿ: ಭಾರತೀಯ ಸೇನೆಯ ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಳಿಕ ಚೀನಾದಿಂದ J35 ಯುದ್ಧ ವಿಮಾನ ಖರೀದಿಗೆ ಪಾಕಿಸ್ತಾನ ಮುಂದಾಗಿರುವಂತೆಯೇ ಇತ್ತ ಭಾರತ ಸರ್ಕಾರ 5ನೇ ತಲೆಮಾರಿನ Stealth Fighter Jet ವಿಮಾನ ತಯಾರಿಕೆಗೆ ಅನುಮೋದನೆ ನೀಡುವ ಮೂಲಕ ಪಾಕಿಸ್ತಾನ ಮತ್ತು ಚೀನಾ ಎರಡೂ ದೇಶಗಳಿಗೆ ಖಡಕ್ ತಿರುಗೇಟು ನೀಡಿದೆ.
ಜಾಗತಿಕ ಮಟ್ಟದಲ್ಲಿ ತನ್ನಷ್ಟೇ ವೇಗವಾಗಿ ಬೆಳೆಯುತ್ತಿರುವ ಭಾರತದ ಪ್ರಗತಿ ಸಹಿಸಿಕೊಳ್ಳಲಾಗದ ಚೀನಾ, ತನ್ನ ಮಿತ್ರ ರಾಷ್ಟ್ರ ಪಾಕಿಸ್ತಾನಕ್ಕೆ ಸ್ಟೆಲ್ತ್ ಫೈಟರ್ ಜೆಟ್‌ಗಳನ್ನು ಪೂರೈಸಲು ಮುಂದಾಗಿರುವಂತೆಯೇ ಇತ್ತ ಭಾರತ ಕೂಡ ಇದಕ್ಕೆ ಖಡಕ್ ತಿರುಗೇಟು ನೀಡಿದ್ದು, ತನ್ನದೇ ಆದ ಸ್ಟೆಲ್ತ್ ಫೈಟರ್ ಜೆಟ್ ವಿಮಾನವನ್ನು ತಯಾರಿಸುವ ಚೌಕಟ್ಟನ್ನು ಅನುಮೋದಿಸಿದೆ.
ಭಾರತದ ಅತ್ಯಂತ ಮುಂದುವರಿದ ಫೈಟರ್ ಜೆಟ್ - ದೇಶದ ಮೊದಲ ಸ್ಟೆಲ್ತ್ ವಿಮಾನವನ್ನು ನಿರ್ಮಿಸುವ ಯೋಜನೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಅನುಮೋದನೆ ನೀಡಿದ್ದಾರೆ. ಈ ಫೈಟರ್ ಜೆಟ್ ಅವಳಿ-ಎಂಜಿನ್, 5ನೇ ತಲೆಮಾರಿನ ಮಿಲಿಟರಿ ವಿಮಾನವಾಗಿರಲಿದ್ದು, ಈ ಕಾರ್ಯಕ್ರಮವನ್ನು ಸರ್ಕಾರಿ ಸ್ವಾಮ್ಯದ ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ ಅಥವಾ ಎಡಿಎ ಕಾರ್ಯಗತಗೊಳಿಸಲಿದೆ.
ಎಡಿಎ (Aeronautical Development Agency) ಶೀಘ್ರದಲ್ಲೇ ಸಾರ್ವಜನಿಕ ಮತ್ತು ಖಾಸಗಿ ರಕ್ಷಣಾ ಸಂಸ್ಥೆಗಳನ್ನು ಸ್ಟೆಲ್ತ್ ವಿಮಾನದ ಮೂಲಮಾದರಿಯನ್ನು ಅಭಿವೃದ್ಧಿಪಡಿಸುವ ಮೂಲಕ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಭಾಗವಹಿಸಲು ತಮ್ಮ ಆರಂಭಿಕ ಆಸಕ್ತಿಯನ್ನು ವ್ಯಕ್ತಪಡಿಸಲು ಆಹ್ವಾನಿಸಲಿದೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.
ಭಾರತದ ರಕ್ಷಣಾ ಸಚಿವಾಲಯದ ಹೇಳಿಕೆಯ ಪ್ರಕಾರ, ಸ್ಟೆಲ್ತ್ ಫೈಟರ್ ಯೋಜನೆಯನ್ನು ದೇಶೀಯ ಸಂಸ್ಥೆ ಮಾತ್ರ ಮುನ್ನಡೆಸುತ್ತದೆ. ಇದಕ್ಕಾಗಿ ಸ್ವತಂತ್ರವಾಗಿ ಮತ್ತು ಜಂಟಿ ಉದ್ಯಮವಾಗಿ ಬಿಡ್‌ಗಳನ್ನು ಮಾಡಬಹುದು. ಈ ಬಿಡ್‌ಗಳನ್ನು ಸರ್ಕಾರ ನಡೆಸುವ ಸಂಸ್ಥೆಗಳು ಮತ್ತು ಖಾಸಗಿ ಉದ್ಯಮಗಳು ಎರಡೂ ಮಾಡಬಹುದು.
ರಕ್ಷಣಾ ವಲಯದಲ್ಲಿ ಖಾಸಗಿ ಉತ್ಪಾದನೆಯನ್ನು ಉತ್ತೇಜಿಸುವ ಮತ್ತು ಸರ್ಕಾರಿ ಸ್ವಾಮ್ಯದ ದೇಶದ ಪ್ರಮುಖ ಫೈಟರ್ ಜೆಟ್ ತಯಾರಕ ಸಂಸ್ಥೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಅಥವಾ ಎಚ್‌ಎಎಲ್ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಕ್ರಮವಾಗಿ ಖಾಸಗಿ ಸಂಸ್ಥೆಗಳನ್ನು ಒಳಗೊಳ್ಳುವ ನಿರ್ಧಾರವನ್ನು ಈ ವರ್ಷದ ಮಾರ್ಚ್‌ನಲ್ಲಿ ಉನ್ನತ ರಕ್ಷಣಾ ಸಮಿತಿಯು ಶಿಫಾರಸು ಮಾಡಿತು ಎನ್ನಲಾಗಿದೆ.
HAL ಯುದ್ಧ ವಿಮಾನ ತಯಾರಿಕೆಯಲ್ಲಿ ಈಗಾಗಲೇ ಭಾರಿ ವಿಳಂಬವನ್ನು ಎದುರಿಸುತ್ತಿದೆ. ವಿಶೇಷವಾಗಿ 4.5 ತಲೆಮಾರಿನ ಯುದ್ಧ ವಿಮಾನ ಅಥವಾ LCA ತೇಜಸ್ ಯೋಜನೆ - ಲೈಟ್ ಕಾಂಬ್ಯಾಟ್ ಏರ್‌ಕ್ರಾಫ್ಟ್ ಯಲ್ಲಿ. ಆದಾಗ್ಯೂ, HAL, ಅಮೆರಿಕದ ಜನರಲ್ ಎಲೆಕ್ಟ್ರಿಕ್ ಅಥವಾ GE ಯಿಂದ ಜೆಟ್ ಎಂಜಿನ್‌ಗಳ ನಿಧಾನಗತಿಯ ವಿತರಣೆಯನ್ನು ವಿಳಂಬಕ್ಕೆ ದೂಷಿಸಿದೆ.
ಭಾರತದ DRDO GTRE GTX-35VS ಕಾವೇರಿ ಎಂಜಿನ್ ಯೋಜನೆಯಡಿಯಲ್ಲಿ ತನ್ನ ಸ್ಥಳೀಯ ವಿಮಾನ ಎಂಜಿನ್ ಅನ್ನು ಅಭಿವೃದ್ಧಿಪಡಿಸುವ ಕೆಲಸ ಮಾಡುತ್ತಿದೆ. ಇದನ್ನು ಮುಖ್ಯವಾಗಿ LCA ತೇಜಸ್ ಫೈಟರ್ ಜೆಟ್‌ಗಾಗಿ ತಯಾರಿಸಲಾಗುತ್ತಿದೆ ಮತ್ತು ಇದು ಪ್ರಸ್ತುತ ಪ್ರಗತಿಯಲ್ಲಿರುವ ಯೋಜನೆಯಾಗಿದೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.
ರಷ್ಯಾ ಸಾಥ್?
ಭಾರತವು ತನ್ನ ಪ್ರಸ್ತುತ ಫೈಟರ್ ಜೆಟ್‌ಗಳಲ್ಲಿ ಹೆಚ್ಚಾಗಿ ರಷ್ಯನ್ ಮತ್ತು ಫ್ರೆಂಚ್ ಮಿಲಿಟರಿ ವಿಮಾನಗಳನ್ನು ಒಳಗೊಂಡಿರುವುದರಿಂದ ಸ್ಟೆಲ್ತ್ ಫೈಟರ್ ಯೋಜನೆಗೆ ಉತ್ತೇಜನ ನೀಡಿದೆ. ಅಂತೆಯೇ ಭಾರತದ ಬಹು ನಿರೀಕ್ಷಿತ 5ನೇ ತಲೆಮಾರಿನ Stealth Fighter Jet ವಿಮಾನ ತಯಾರಿಕೆಗೂ ರಷ್ಯಾ ಸಾಥ್ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಪ್ರಸ್ತುತ ಭಾರತೀಯ ವಾಯುಪಡೆಯಲ್ಲಿ ಪ್ರಸ್ತುತ ಸ್ಕ್ವಾಡ್ರನ್‌ಗಳ ಸಂಖ್ಯೆ 31 ರಷ್ಟಿದ್ದು, ಇದು 42 ಸ್ಕ್ವಾಡ್ರನ್‌ಗಳ ಅನುಮೋದಿತ ಬಲಕ್ಕಿಂತ ಬಹಳ ಕಡಿಮೆಯಾಗಿದೆ. ಹೀಗಾಗಿ ಭಾರತ ತನ್ನ ಯುದ್ಧ ವಿಮಾನಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವತ್ತ ಭಾರತ ಮುಂದಾಗಿದೆ.
ಚೀನಾದಿಂದ 6ನೇ ತಲೆಮಾರಿನ ಯುದ್ಧ ವಿಮಾನ ಪರೀಕ್ಷೆ
ಇತ್ತ ಚೀನಾ ತನ್ನ ವಾಯುಪಡೆಯನ್ನು ವೇಗವಾಗಿ ವಿಸ್ತರಿಸುತ್ತಿದ್ದು, ಅಂತೆಯೇ ಪಾಕಿಸ್ತಾನವು ತನ್ನ ವಾಯುಪಡೆಯನ್ನು ವಿಸ್ತರಿಸುವಲ್ಲಿ ಚೀನಾ ಸಹಾಯ ಮಾಡುತ್ತಿದೆ. ಹೀಗಾಗಿ ಭಾರತ ಕೂಡ ಇದೀಗ ತನ್ನ ಸ್ಥಳೀಯ ಸ್ಟೆಲ್ತ್ ವಿಮಾನ ಯೋಜನೆಯನ್ನು ವೇಗಗೊಳಿಸಲು ನಿರ್ಧರಿಸಿದೆ.
ಭಾರತ ಈಗ 5 ನೇ ತಲೆಮಾರಿನ ಮಿಲಿಟರಿ ವಿಮಾನಗಳನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸುತ್ತಿದ್ದರೆ, ಚೀನಾ ಈಗಾಗಲೇ ತನ್ನ 6ನೇ ತಲೆಮಾರಿನ ವಿಮಾನವನ್ನು ತಯಾರಿಸಿ, ಪ್ರದರ್ಶಿಸಿದೆ. ಹಾರಾಟ-ಪರೀಕ್ಷೆ ಕೂಡ ಮಾಡಿದೆ. ಚೀನಾದ ಚೆಂಗ್ಡು ವಿಮಾನ ನಿಗಮವು ಅಭಿವೃದ್ಧಿಪಡಿಸಿದ ಜೆ -36 ಯುದ್ಧ ವಿಮಾನವನ್ನು ಚೀನಾ ಯಶಸ್ವಿಯಾಗಿ ಹಾರಾಟ ಮಾಡಿದೆ ಎನ್ನಲಾಗಿದೆ.
ಪಾಕಿಸ್ತಾನವು ಈಗಾಗಲೇ ಚೀನಾದ ಅತ್ಯಂತ ಮುಂದುವರಿದ ಯುದ್ಧ ವಿಮಾನಗಳಲ್ಲಿ ಒಂದಾದ ಜೆ -10 ವಿಮಾನಗಳನ್ನು ಹೊಂದಿದೆ. ವರದಿಗಳ ಪ್ರಕಾರ, ಬೀಜಿಂಗ್ ತನ್ನ ಅತ್ಯಂತ ಮುಂದುವರಿದ ರಹಸ್ಯ ಯುದ್ಧ ವಿಮಾನ - ಶೆನ್ಯಾಂಗ್ ಜೆ -35 ಅನ್ನು ನೀಡಿದೆ, ಇದು ಏಕ-ಆಸನ, ಅವಳಿ-ಎಂಜಿನ್, ಎಲ್ಲಾ ಹವಾಮಾನ, ರಹಸ್ಯ, ಬಹು-ಪಾತ್ರ ಯುದ್ಧ ವಿಮಾನವಾಗಿದೆ. ಕೆಲವು ವರದಿಗಳು ಬೀಜಿಂಗ್ ಈ ವಿಮಾನವನ್ನು ಇಸ್ಲಾಮಾಬಾದ್‌ಗೆ ರಿಯಾಯಿತಿ ಬೆಲೆಯಲ್ಲಿ ನೀಡಿದೆ ಎಂದು ಹೇಳಲಾಗಿದೆ.
Advertisement