
ಪಾಟ್ನಾ: ಭಾರತ-ನೇಪಾಳ ಗಡಿಯಲ್ಲಿರುವ ಜಿಲ್ಲೆಗಳಲ್ಲಿ 15 ರಿಂದ 20 ಡ್ರೋನ್‌ಗಳು ಹಾರಾಟ ನಡೆಸಿದ್ದು, ಬಿಹಾರ ಪೊಲೀಸರು ಮಂಗಳವಾರ ಹೈ ಅಲರ್ಟ್ ಘೋಷಿಸಿದ್ದಾರೆ.
ಹೌದು. ಸೋಮವಾರ ರಾತ್ರಿ ಸುಮಾರು 15 ರಿಂದ 20 ಡ್ರೋನ್‌ಗಳು ನೇಪಾಳದಿಂದ ಭಾರತೀಯ ವಾಯುಪ್ರದೇಶ ಪ್ರವೇಶಿಸಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಗಡಿಯಲ್ಲಿರುವ ಜಿಲ್ಲೆಗಳಲ್ಲಿ ಬಿಹಾರ ಪೊಲೀಸರು ಹೈ ಅಲರ್ಟ್ ಘೋಷಿಸಿದ್ದಾರೆ.
ಮಧುಬನಿ ಜಿಲ್ಲೆಯ ಕಮಲಾ ಬಾರ್ಡರ್ ಔಟ್‌ಪೋಸ್ಟ್ ನಲ್ಲಿ ಸುಮಾರು 40 ನಿಮಿಷಗಳ ಕಾಲ ಈ ಡ್ರೋನ್‌ಗಳು ಹಾರಾಟ ನಡೆಸಿದ್ದು, ತದನಂತರ ನೇಪಾಳಕ್ಕೆ ಹಿಂತಿರುಗಿವೆ.
ಸೋಮವಾರ ಸಂಜೆ 7.30 ರ ಸುಮಾರಿಗೆ ಕಮಲಾ ಗಡಿ ಪೊಲೀಸ್ ಹೊರಠಾಣೆ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ 15-20 ಡ್ರೋನ್ ತರಹದ ಸಾಧನಗಳು ಆಕಾಶದಲ್ಲಿ ಹಾರಾಟ ನಡೆಸಿರುವುದು ಕಂಡುಬಂದಿದೆ. ತದನಂತರ, ಅವುಗಳು ಭಾರತದ ವಾಯುಪ್ರದೇಶವನ್ನು ಪ್ರವೇಶಿಸಿ ಉತ್ತರ ನೇಪಾಳದ ಕಡೆಗೆ ಮರಳಿವೆ ಎಂದು ಸಶಸ್ತ್ರ ಸೀಮಾ ಬಾಲ್ (SSB)ಉಪ ಕಮಾಂಡೆಂಟ್ ವಿವೇಕ್ ಓಜಾ ಖಚಿತಪಡಿಸಿದ್ದಾರೆ.
SSB ಅಧಿಕಾರಿಗಳು ತಕ್ಷಣವೇ ಈ ಮಾಹಿತಿಯ್ನು ದರ್ಭಾಂಗಾ ಮತ್ತು ದೆಹಲಿ ವಾಯುಪಡೆ ಅಧಿಕಾರಿಗಳಿಗೆ ತಲುಪಿಸಿದ್ದು, ತದನಂತರ ಅಂತರಾಷ್ಟ್ರೀಯ ಗಡಿಯಲ್ಲಿ ಹೈ ಅಲರ್ಟ್ ಘೋಷಿಸಿದ್ದಾರೆ. ಡ್ರೋನ್ ಹಾರಾಟದ ಬಗ್ಗೆ ನೇಪಾಳದ ಭದ್ರತಾ ಅಧಿಕಾರಿಗಳೊಂದಿಗೆ ವಿಚಾರಣೆ ನಡೆಸಲಾಗಿದೆ. ಆದರೆ ಅಂತಹ ಯಾವುದೇ ಚಟುವಟಿಕೆ ಕಂಡುಬಂದಿಲ್ಲ ಎಂದು ಅವರು ತಿಳಿಸಿದ್ದಾರೆ. ಡ್ರೋನ್‌ಗಳ ನಿಖರವಾದ ಸ್ವರೂಪ ಮತ್ತು ಉದ್ದೇಶ ಕುರಿತು ತನಿಖೆ ನಡೆಯುತ್ತಿದೆ ಎಂದು ಓಜಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಗಡಿ ಪ್ರದೇಶಗಳಲ್ಲಿ ತೀವ್ರ ತಪಾಸಣೆ ಕಾರ್ಯಾಚರಣೆ ಆರಂಭಿಸಲಾಗಿದೆ. ಕಟ್ಟುನಿಟ್ಟಾದ ಮುನ್ನೆಚ್ಚರಿಕೆ ವಹಿಸಲಾಗಿದೆ. ಭದ್ರತಾ ಕಾರಣಗಳಿಗಾಗಿ ನೇಪಾಳದಿಂದ ಬರುವ ಜನರನ್ನು ತಪಾಸಣೆ ನಡೆಸಲಾಗುತ್ತಿದೆ ಎಂದು ಗಲ್ಗಾಲಿಯಾ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ರಾಕೇಶ್ ಕುಮಾರ್ ತಿಳಿಸಿದ್ದಾರೆ.
Advertisement