
ಮುಂಬೈ: ಭಾರತ-ಪಾಕ್ ಯುದ್ಧದ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಬಂಧಿಸಲ್ಪಟ್ಟ ಪುಣೆಯ 19 ವರ್ಷದ ವಿದ್ಯಾರ್ಥಿನಿಗೆ ಬಾಂಬೆ ಹೈಕೋರ್ಟ್ ಮಂಗಳವಾರ ಜಾಮೀನು ಮಂಜೂರು ಮಾಡಿದೆ ಮತ್ತು ಆಕೆಯ ಪೋಸ್ಟ್‌ಗೆ ಮಹಾರಾಷ್ಟ್ರ ಸರ್ಕಾರವು "ತೀವ್ರವಾದ" ಪ್ರತಿಕ್ರಿಯೆಯನ್ನು ನೀಡಿರುವುದನ್ನು ಖಂಡಿಸಿ, ಆಕೆಯನ್ನು ತಕ್ಷಣ ಬಿಡುಗಡೆ ಮಾಡಲು ಆದೇಶಿಸಿದೆ.
ನ್ಯಾಯಮೂರ್ತಿಗಳಾದ ಗೌರಿ ಗೋಡ್ಸೆ ಮತ್ತು ಸೋಮಶೇಖರ್ ಸುಂದರೇಶನ್ ಅವರ ರಜಾ ಪೀಠ ವಿದ್ಯಾರ್ಥಿನಿಯನ್ನು ಸರ್ಕಾರವು "ಕಠಿಣ ಅಪರಾಧಿ"ಯಂತೆ ನಡೆಸಿಕೊಂಡಿರುವುದು "ಸಂಪೂರ್ಣವಾಗಿ ಆಘಾತಕಾರಿ" ಎಂದು ಹೇಳಿದೆ.
ವಿದ್ಯಾರ್ಥಿನಿಯನ್ನು ತಕ್ಷಣವೇ ಜಾಮೀನಿನ ಮೇಲೆ ಬಿಡುಗಡೆ ಮಾಡಲು ನ್ಯಾಯಾಲಯ ಆದೇಶಿಸಿದೆ, ಆಕೆ ಪೋಸ್ಟ್ ನ್ನು ತಕ್ಷಣವೇ ಅಳಿಸಿಹಾಕಿದ್ದರಿಂದ, ಪಶ್ಚಾತ್ತಾಪ ವ್ಯಕ್ತಪಡಿಸಿದ್ದರಿಂದ ಮತ್ತು ಅದಕ್ಕಾಗಿ ಕ್ಷಮೆಯಾಚಿಸಿದ್ದರಿಂದ ಆಕೆಯನ್ನು ಬಂಧಿಸಬಾರದಿತ್ತು ಎಂದು ಕೋರ್ಟ್ ಹೇಳಿದೆ.
ಇದು ಬಾಲಕಿ ಇನ್ನು ಮುಂದೆ ಬಂಧನದಲ್ಲಿರಬೇಕಾದ ಪ್ರಕರಣವಲ್ಲ ಎಂದು ಹೈಕೋರ್ಟ್ ಹೇಳಿದ್ದು, ಮಂಗಳವಾರವೇ ಬಾಲಕಿಯನ್ನು ಬಿಡುಗಡೆ ಮಾಡಬೇಕು ಎಂದು ಹೇಳಿದೆ.
ಆಕೆಯನ್ನು ಇಂದು ಸಂಜೆಯೇ ಬಿಡುಗಡೆ ಮಾಡುವಂತೆ ಸಂಬಂಧಪಟ್ಟ ಜೈಲು ಅಧಿಕಾರಿಗೆ ಸೂಚಿಸಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ. ಬಾಲಕಿಯ ಕಾಲೇಜು ಹೊರಡಿಸಿದ ರಸ್ಟಿಟೇಶನ್ ಆದೇಶವನ್ನು ನ್ಯಾಯಾಲಯ ಅಮಾನತುಗೊಳಿಸಿದೆ ಮತ್ತು ಆಕೆ ಪರೀಕ್ಷೆಗೆ ಹಾಜರಾಗಲು ಆಕೆಗೆ ಹಾಲ್ ಟಿಕೆಟ್ ನೀಡಬೇಕೆಂದು ಸಂಸ್ಥೆಗೆ ನಿರ್ದೇಶಿಸಿದೆ.
ವಿದ್ಯಾರ್ಥಿನಿಗೆ ವಿವರಣೆ ನೀಡಲು ಅವಕಾಶ ನೀಡದೆ ತರಾತುರಿಯಲ್ಲಿ ರಸ್ಟಿಟೇಶನ್ ಆದೇಶವನ್ನು ಹೊರಡಿಸಲಾಗಿದೆ ಎಂದು ಹೈಕೋರ್ಟ್ ಹೇಳಿದೆ. ಆಪರೇಷನ್ ಸಿಂಧೂರ್ ಮಧ್ಯೆ ಭಾರತ-ಪಾಕ್ ಯುದ್ಧದ ಸಮಯದಲ್ಲಿ ಭಾರತ ಸರ್ಕಾರವನ್ನು ಟೀಕಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಪುಣೆಯ ವಿದ್ಯಾರ್ಥಿನಿಯನ್ನು ಈ ತಿಂಗಳ ಆರಂಭದಲ್ಲಿ ಬಂಧಿಸಲಾಗಿತ್ತು.
Advertisement