Tiger Falls: ಜಲಪಾತದ ಮೇಲಿಂದ ಮರಬಿದ್ದು ಇಬ್ಬರ ಸಾವು! Video

ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್ ಜಿಲ್ಲೆಯ ಚಕ್ರತದಲ್ಲಿರುವ ಜನಪ್ರಿಯ ಜಲಪಾತವಾದ ಟೈಗರ್ ಫಾಲ್ಸ್‌ನಲ್ಲಿ ಈ ಭೀಕರ ಘಟನೆ ನಡೆದಿದೆ.
Tiger Falls
ಟೈಗರ್ ಫಾಲ್ಸ್
Updated on

ಡೆಹ್ರಾಡೂನ್: ಜಲಪಾತ ವೀಕ್ಷಣೆಗೆ ತೆರಳಿದ್ದ ಪ್ರವಾಸಿಗರ ಮೇಲೆ ಮರ ಬಿದ್ದ ಪರಿಣಾಣ ಇಬ್ಬರು ಪ್ರವಾಸಿಗರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್ ಜಿಲ್ಲೆಯ ಚಕ್ರತದಲ್ಲಿರುವ ಜನಪ್ರಿಯ ಜಲಪಾತವಾದ ಟೈಗರ್ ಫಾಲ್ಸ್‌ನಲ್ಲಿ ಈ ಭೀಕರ ಘಟನೆ ನಡೆದಿದ್ದು, ಜಲಪಾತದಲ್ಲಿ ಸ್ನಾನ ಮಾಡುತ್ತಿದ್ದಾಗ ಮರ ಬಿದ್ದು ದೆಹಲಿಯ ಮಹಿಳೆ ಸೇರಿದಂತೆ ಇಬ್ಬರು ಪ್ರವಾಸಿಗರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ದೆಹಲಿಯ ಶಹದಾರ ಪ್ರದೇಶದ ಅಲ್ಕಾ ಆನಂದ್ ಮತ್ತು ಚಕ್ರತದ ಗೀತಾರಾಮ್ ಜೋಶಿ (48) ಎಂದು ಗುರುತಿಸಲಾಗಿದೆ.

ವಿಚಾರ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿ ಸ್ಥಳ ಪರಿಶೀಲನೆ ನಡೆಸಿದ ಚಕ್ರತ ಪೊಲೀಸ್ ಠಾಣೆಯ ಉಸ್ತುವಾರಿ ಚಂದ್ರಶೇಖರ್ ನೌಟಿಯಾಲ್, "ಆನಂದ್ ತನ್ನ ಮಗಳು ಮತ್ತು ಆಕೆಯ ಭಾವಿ ಪತಿಯೊಂದಿಗೆ ಬಂದಿದ್ದರು. ಆದರೆ ಜೋಶಿ ತನ್ನ ಪತ್ನಿ ಮತ್ತು ಮಗಳೊಂದಿಗೆ ಅಲ್ಲಿದ್ದರು.

ಅವರು ಇತರ ಪ್ರವಾಸಿಗರೊಂದಿಗೆ ಜಲಪಾತದಲ್ಲಿ ಸ್ನಾನ ಮಾಡುತ್ತಿದ್ದಾಗ ಸುಮಾರು 60 ಮೀಟರ್ ಎತ್ತರದಿಂದ ಜಲಪಾತದ ಜೊತೆಗೆ ಮರ ಉರುಳಿತು. ಈ ವೇಳೆ ಅಲ್ಕಾ ಆನಂದ್ ಮತ್ತು ಚಕ್ರತದ ಗೀತಾರಾಮ್ ಜೋಶಿ ಅವರ ಮೇಲೆ ಮರ ಬಿದ್ದು ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Tiger Falls
ಅಮರನಾಥ ಯಾತ್ರೆ ಭದ್ರತೆಗೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ 42,000 ಸಿಬ್ಬಂದಿ ನಿಯೋಜನೆ!

ಅಂತೆಯೇ ಅಲ್ಲಿಯೇ ಸಮೀಪದಲ್ಲಿ ನಿಂತಿದ್ದ ಇತರ ಮೂವರು ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳದಲ್ಲಿದ್ದ ಪ್ರವಾಸಿಗರು ಮರವನ್ನು ಮೇಲಕ್ಕೆತ್ತಲು ಪ್ರಯತ್ನಿಸಿದರು.

ನಂತರ, ಪೊಲೀಸರು ಸ್ಥಳಕ್ಕೆ ತಲುಪಿ ಅವರನ್ನು ಹತ್ತಿರದ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಮರಣೋತ್ತರ ಪರೀಕ್ಷೆಯ ನಂತರ ಅವರ ಶವಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಯಿತು" ಎಂದು ನೌಟಿಯಾಲ್ ಹೇಳಿದರು.

ಇನ್ನು ಈ ದುರಂತದ ಹೊರತಾಗಿಯೂ ಸ್ಥಳೀಯ ಜಿಲ್ಲಾಡಳಿತ ಜಲಪಾತವನ್ನು ಪ್ರವಾಸಿಗರ ವೀಕ್ಷಣೆಗೆ ಮುಚ್ಚಿಲ್ಲ ಎಂದು ಹೇಳಲಾಗಿದೆ.

ಅಂದಹಾಗೆ ಡೆಹ್ರಾಡೂನ್ ನ ಟೈಗರ್ ಜಲಪಾತವು ಭಾರತದ ಅತಿ ಎತ್ತರದ ನೇರ ಜಲಪಾತಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇಲ್ಲಿ ಸುಮಾರು 312 ಅಡಿಗಳಷ್ಟು ಮೇಲಿನಿಂದ ಕೆಳಕ್ಕೆ ನೀರು ಧುಮುಕತ್ತದೆ. ಈ ಪ್ರದೇಶವು ತನ್ನ ರಮಣೀಯ ಸೌಂದರ್ಯಕ್ಕೆ ಹೆಸರುವಾಸಿಯಾಗಿದ್ದು, ಪ್ರತಿನಿತ್ಯ ನೂರಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ. ವಿಶೇಷವಾಗಿ ಬೇಸಿಗೆಯ ತಿಂಗಳುಗಳಲ್ಲಿ ಇಲ್ಲಿಗೆ ಗಣನೀಯ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com