
ನವದೆಹಲಿ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಎನ್.ವಿ.ಅಂಜಾರಿಯಾ, ವಿಜಯ್ ಬಿಷ್ಣೋಯ್ ಹಾಗೂ ಎ.ಎಸ್.ಚಂದೂರ್ಕರ್ ಅವರು ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಸುಪ್ರೀಂ ಕೋರ್ಟ್ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಮೂವರು ನ್ಯಾಯಾಧೀಶರಿಗೆ ಪ್ರಮಾಣ ವಚನ ಬೋಧಿಸಿದರು.
ಮೂವರು ನ್ಯಾಯಾಧೀಶರ ಪ್ರಮಾಣ ವಚನ ಸ್ವೀಕಾರದೊಂದಿಗೆ ಒಟ್ಟು 34 ನ್ಯಾಯಮೂರ್ತಿಗಳ ಸಂಖ್ಯಾಬಲದ ಸರ್ವೋಚ್ಚ ನ್ಯಾಯಾಲಯ ಸಂಪೂರ್ಣ ಸದಸ್ಯರೊಂದಿಗೆ ಕಾರ್ಯನಿರ್ವಹಿಸಲಿದೆ.
ಸಿಜೆಐಯಾಗಿದ್ದ ಸಂಜೀವ್ ಖನ್ನಾ, ನ್ಯಾಯಮೂರ್ತಿಗಳಾದ ಅಭಯ್ ಶ್ರೀನಿವಾಸ್ ಓಕಾ ಮತ್ತು ಬೆಲಾ ತ್ರಿವೇದಿ ಅವರು ಈಚಗೆ ನಿವೃತ್ತಿ ಹೊಂದಿದ್ದರಿಂದ ಮೂರು ಹುದ್ದೆಗಳು ಖಾಲಿ ಉಳಿದಿದ್ದವು.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ನೇತೃತ್ವದ ಕೊಲಿಜಿಯಂ ಮೇ 26ರಂದು ಮೂವರು ಹೈಕೋರ್ಟ್ ನ್ಯಾಯಮೂರ್ತಿಗಳನ್ನು ಸುಪ್ರೀಂ ಕೋರ್ಟ್‌ಗೆ ಪದೋನ್ನತಿಗೊಳಿಸುವಂತೆ ಶಿಫಾರಸು ಮಾಡಿತ್ತು.
ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಅವರ ಮಾತೃ ಹೈಕೋರ್ಟ್ ಗುಜರಾತ್ ಆಗಿದ್ದು, ಗುವಾಹಟಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಜಯ್ ಬಿಷ್ಣೋಯ್ ಅವರ ಮಾತೃ ಹೈಕೋರ್ಟ್ ರಾಜಸ್ಥಾನ ಹೈಕೋರ್ಟ್ ಆಗಿದೆ. ನ್ಯಾ. ಚಂದೂರ್ಕರ್ ಅವರ ಮಾತೃ ಹೈಕೋರ್ಟ್ ಬಾಂಬೆ ಹೈಕೋರ್ಟ್ ಆಗಿದೆ.
2011ರ ನವೆಂಬರ್ 21ರಂದು ನ್ಯಾ. ಅಂಜಾರಿಯಾ ಅವರು ಗುಜರಾತ್ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದು, 2013ರ ಸೆಪ್ಟೆಂಬರ್ 6ರಂದು ಕಾಯಂಗೊಂಡಿದ್ದರು. 2024ರ ಫೆಬ್ರವರಿ 25ರಂದು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಪದೋನ್ನತಿಗೊಂಡಿದ್ದರು.
ನ್ಯಾಯಮೂರ್ತಿ ಬಿಷ್ಣೋಯ್ ಅವರು 1989ರ ಜುಲೈ 8ರಂದು ವಕೀಲರಾಗಿ ನೋಂದಣಿ ಮಾಡಿಸಿದ್ದು, ರಾಜಸ್ಥಾನ ಹೈಕೋರ್ಟ್ ಮತ್ತು ಜೋಧಪುರದ ಕೇಂದ್ರೀಯ ಆಡಳಿತಾತ್ಮಕ ನ್ಯಾಯ ಮಂಡಳಿಯಲ್ಲಿ ಪ್ರಾಕ್ಟೀಸ್ ಮಾಡಿದ್ದಾರೆ. ಸಿವಿಲ್, ಕ್ರಿಮಿನಲ್, ಸಾಂವಿಧಾನಿಕ, ಸೇವಾ ಮತ್ತು ಚುನಾವಣಾ ಪ್ರಕರಣಗಳನ್ನು ನಡೆಸಿದ್ದಾರೆ.
ನ್ಯಾ. ಚಂದೂರ್ಕರ್ ಅವರು 1988ರ ಜುಲೈ 21ರಂದು ವಕೀಲರಾಗಿ ನೋಂದಣಿಯಾಗಿದ್ದು, ಮುಂಬೈನ ಹಿರಿಯ ವಕೀಲ ಬಿ ಎನ್ ನಾಯ್ಕ್ ಅವರ ಚೇಂಬರ್‌ನಲ್ಲಿ ವೃತ್ತಿ ಬದುಕು ಆರಂಭಿಸಿದ್ದರು. ಆನಂತರ ನ್ಯಾಯಮೂರ್ತಿಯಾಗಿ ಪದೋನ್ನತಿಗೊಂಡಿದ್ದರು. 1992ರಲ್ಲಿ ನಾಗ್ಪುರ ಪೀಠಕ್ಕೆ ಪ್ರಾಕ್ಟೀಸ್ ವರ್ಗಾಯಿಸಿಕೊಂಡಿದ್ದ ನ್ಯಾ. ಚಂದೂರ್ಕರ್ ಅವರು ಹಲವು ನ್ಯಾಯಾಲಯಗಳಲ್ಲಿ ವಿಚಾರಣೆಗೆ ಹಾಜರಾಗಿದ್ದರು.
Advertisement