

ಅಮರಾವತಿ: 2025ರಲ್ಲಿ ಆಂಧ್ರಪ್ರದೇಶದಾದ್ಯಂತ 3 ಪ್ರಮುಖ ದೇವಾಲಯ ದುರಂತಗಳು ಸಂಭವಿಸಿದ್ದು ಒಟ್ಟು 22 ಜನರು ಸಾವನ್ನಪ್ಪಿದ್ದಾರೆ.
ಹೌದು.. ಇಂದು ಆಂಧ್ರ ಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಕಾಶಿಬುಗ್ಗ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕಾಲ್ತುಳಿತ ಸಂಭವಿಸಿ ಕನಿಷ್ಛ 9 ಮಂದಿ ಭಕ್ತರು ಸಾವನ್ನಪ್ಪಿ, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಕಾರ್ತಿಕ ಮಾಸದ ಏಕಾದಶಿ ಶನಿವಾರ ಬಂದಿದ್ದರಿಂದ, ದೇವರ ದರ್ಶನ ಪಡೆಯಲು ಹೆಚ್ಚಿನ ಸಂಖ್ಯೆಯ ಭಕ್ತರು ಸೇರಿದ್ದರು. ಈ ಸಮಯದಲ್ಲಿ, ಜನಸಂದಣಿ ಹೆಚ್ಚಾದ ಕಾರಣ ಕಾಲ್ತುಳಿತ ಸಂಭವಿಸಿದೆ.
ಈ ದುರಂತವೂ ಸೇರಿದಂತೆ 2025ರಲ್ಲಿ ಆಂಧ್ರ ಪ್ರದೇಶದಲ್ಲಿ ಒಟ್ಟು ಮೂರು ದೇಗುಲ ದುರಂತಗಳು ಸಂಭವಿಸಿದೆ. ಈ ಪೈಕಿ ಒಟ್ಟು 22 ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 100 ಜನರು ಗಾಯಗೊಂಡಿದ್ದಾರೆ.
ಎಲ್ಲೆಲ್ಲಿ?
ಇದಕ್ಕೂ ಮೊದಲು, ಏಪ್ರಿಲ್‌ನಲ್ಲಿ ವಿಶಾಖಪಟ್ಟಣಂ ಬಳಿಯ ಸಿಂಹಾಚಲಂನಲ್ಲಿರುವ ಶ್ರೀ ವರಾಹ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಮಳೆಯಿಂದ ನೆನೆದ ಗೋಡೆ ಕುಸಿದು ಏಳು ಜನರು ಸಾವನ್ನಪ್ಪಿದ್ದರು.
ಇದಕ್ಕೂ ಮೊದಲು ಅಂದರೆ ವರ್ಷಾರಂಭದಲ್ಲಿ ಜನವರಿಯ ಆರಂಭದಲ್ಲಿ, ತಿರುಪತಿಯ ಬೈರಾಗಿ ಪಟ್ಟೇಡದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಆರು ಭಕ್ತರು ಸಾವನ್ನಪ್ಪಿದ್ದರು ಮತ್ತು ಸುಮಾರು 40 ಜನರು ಗಾಯಗೊಂಡರು.
ಅಲ್ಲಿ ತಿರುಮಲ ಬೆಟ್ಟಗಳಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ದ್ವಾರ ದರ್ಶನಕ್ಕೆ ಟಿಕೆಟ್‌ಗಾಗಿ ನೂರಾರು ಜನರು ಸೇರಿದ್ದರು.
ಆಂಧ್ರ ಪ್ರದೇಶದಲ್ಲಿ ಸರಣಿ ವಿಪತ್ತು
ಇನ್ನು ಒಂದು ವಾರಕ್ಕಿಂತ ಕಡಿಮೆ ಅವಧಿಯಲ್ಲಿ, ಆಂಧ್ರಪ್ರದೇಶವು ಸರಣಿ ವಿಪತ್ತುಗಳಿಂದ ನಲುಗಿದ್ದು, ಇದರಲ್ಲಿ ಕರ್ನೂಲ್ ಜಿಲ್ಲೆಯಲ್ಲಿ ಬಸ್ ಬೆಂಕಿ ಅವಘಡದಲ್ಲಿ 19 ಜನರು ಸಾವನ್ನಪ್ಪಿದ್ದಾರೆ. ಅಂತೆಯೇ ಈ ವಾರ 'ಮೊಂಥಾ' ಚಂಡಮಾರುತದಿಂದ ಕನಿಷ್ಠ 5,244 ಕೋಟಿ ರೂ. ನಷ್ಟ ಸಂಭವಿಸಿದೆ ಮತ್ತು ಈಗ ಶ್ರೀಕಾಕುಳಂ ದೇವಾಲಯದಲ್ಲಿ ಕಾಲ್ತುಳಿತ ದುರಂತವೂ ಸೇರಿದೆ.
Advertisement