

ತಿರುವನಂತಪುರಂ: ಕಡುಬಡತನವನ್ನು ನಿರ್ಮೂಲನೆ ಮಾಡಿದ್ದೇವೆ ಎಂಬ ಕೇರಳ ಸರ್ಕಾರದ ಘೋಷಣೆ "ನಕಲಿ" ಎಂದು ಟೀಕಿಸಿದ, ಕಾಂಗ್ರೆಸ್ ನೇತೃತ್ವದ ಯುಡಿಎಫ್ ವಿರೋಧ ಪಕ್ಷ ಶನಿವಾರ ಕೇರಳ ವಿಧಾನಸಭೆಯ ವಿಶೇಷ ಅಧಿವೇಶನವನ್ನು ಬಹಿಷ್ಕರಿಸಿದೆ.
ಇಂದು ವಿಶೇಷ ವಿಧಾನಸಭೆ ಅಧಿವೇಶನ ಪ್ರಾರಂಭವಾಗುತ್ತಿದ್ದಂತೆ, ವಿರೋಧ ಪಕ್ಷದ ನಾಯಕ ವಿ ಡಿ ಸತೀಶನ್, ನಿಯಮ 300 ರ ಅಡಿಯಲ್ಲಿ ಮುಖ್ಯಮಂತ್ರಿಯವರ ಹೇಳಿಕೆ "ಶುದ್ಧ ಸುಳ್ಳು" ಮತ್ತು ಸದನದ ನಿಯಮಗಳ "ತಿರಸ್ಕಾರ" ಎಂದರು.
"ಆದ್ದರಿಂದ, ನಾವು ಅದರಲ್ಲಿ ಸೇರಲು ಸಾಧ್ಯವಿಲ್ಲ ಮತ್ತು ಅಧಿವೇಶನವನ್ನು ಸಂಪೂರ್ಣವಾಗಿ ಬಹಿಷ್ಕರಿಸುತ್ತಿದ್ದೇವೆ" ಎಂದು ಸತೀಶನ್ ಹೇಳಿದರು.
ನಂತರ ಯುಡಿಎಫ್ ಸದಸ್ಯರು, ಬಡತನ ಮುಕ್ತ ಹೇಳಿಕೆ "ಮೋಸ" ಮತ್ತು "ನಾಚಿಕೆಗೇಡಿನ" ಸಂಗತಿ ಎಂದು ಕೂಗುತ್ತಾ ಸದನದಿಂದ ಹೊರನಡೆದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, "ನಾವು ಕಾರ್ಯಗತಗೊಳಿಸಬಹುದಾದದ್ದನ್ನು ಮಾತ್ರ ಹೇಳುತ್ತೇವೆ ಮತ್ತು ನಾವು ಹೇಳಿದ್ದನ್ನು ಕಾರ್ಯಗತಗೊಳಿಸಿದ್ದೇವೆ. ಇದು ವಿರೋಧ ಪಕ್ಷದ ನಾಯಕನಿಗೆ ನಮ್ಮ ಉತ್ತರ" ಎಂದರು.
ಕೇರಳ ಪಿರವಿ, ರಾಜ್ಯ ರಚನೆಯ ದಿನವನ್ನು ಗುರುತಿಸಲು ಕರೆಯಲಾದ ವಿಶೇಷ ಅಧಿವೇಶನದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕಡುಬಡತನ ಮುಕ್ತ ರಾಜ್ಯ ಕೇರಳ ಎಂದು ಘೋಷಣೆ ಮಾಡಿದರು. ಕೇರಳವು ಈ ಮೈಲಿಗಲ್ಲು ಸಾಧಿಸಿದ ದೇಶದ ಮೊದಲ ರಾಜ್ಯವಾಗಿದೆ ಎಂದು ಹೇಳಿದರು.
ತೀವ್ರ ಬಡತನವನ್ನು ನಿರ್ಮೂಲನೆ ಮಾಡಲು ಮತ್ತು ಜಾಗತಿಕ ಸಾಮಾಜಿಕ ಭೂದೃಶ್ಯದಲ್ಲಿ ತನ್ನ ಛಾಪು ಮೂಡಿಸಲು ರಾಜ್ಯವು 1,000 ಕೋಟಿ ರೂ.ಗಳಿಗೂ ಹೆಚ್ಚು ಖರ್ಚು ಮಾಡಿದೆ ಎಂದು ಪಿಣರಾಯಿ ಹೇಳಿದರು.
ಕೇರಳವು ಇತರ ರಾಜ್ಯಗಳು ಅನುಕರಿಸಲು ಒಂದು ಮಾದರಿಯಾಗಿದೆ. 'ನವ ಕೇರಳ'ವನ್ನು ನಿರ್ಮಿಸುವ ಎಲ್‌ಡಿಎಫ್ ಸರ್ಕಾರದ ಪ್ರಯತ್ನಗಳಲ್ಲಿ ಈ ಸಾಧನೆಯು ಮಹತ್ವದ ಹೆಜ್ಜೆಯಾಗಿದೆ ಎಂದು ಮುಖ್ಯಮಂತ್ರಿ ಬಣ್ಣಿಸಿದರು.
"62 ಲಕ್ಷ ಕುಟುಂಬಗಳಿಗೆ ಕಲ್ಯಾಣ ಪಿಂಚಣಿ, 4.7 ಲಕ್ಷ ಕುಟುಂಬಗಳಿಗೆ ಮನೆ, ಸುಮಾರು 6,000 ಸಾರ್ವಜನಿಕ ಆರೋಗ್ಯ ಸೌಲಭ್ಯಗಳನ್ನು ಸ್ಥಾಪಿಸುವುದು, ಕುಟುಂಬ ಆರೋಗ್ಯ ಕೇಂದ್ರಗಳನ್ನು ವಿಸ್ತರಿಸುವುದು, 43 ಲಕ್ಷ ಕುಟುಂಬಗಳಿಗೆ ಉಚಿತ ಆರೋಗ್ಯ ವಿಮೆ ಮತ್ತು ನಾಲ್ಕು ಲಕ್ಷ ಕುಟುಂಬಗಳಿಗೆ ಭೂಮಿ ಒದಗಿಸಿರುವುದು ರಾಜ್ಯದಲ್ಲಿ ಬಡತನದ ಪ್ರಮಾಣ ಮತ್ತು ತೀವ್ರತೆಯನ್ನು ಕಡಿಮೆ ಮಾಡಲು ಸಹಾಯಕವಾಗಿದೆ" ಎಂದು ಮುಖ್ಯಮಂತ್ರಿ ತಿಳಿಸಿದರು.
Advertisement