ರಸ್ತೆ ಅಪಘಾತದಲ್ಲಿ ಟೀಂ ಇಂಡಿಯಾ ಮಾಜಿ ಆಟಗಾರ ಸಾವು!, ಆಗಿದ್ದೇನು?
ತ್ರಿಪುರ: ಭಾರತ ತಂಡದ ಪರ ಅಂಡರ್ 15 ಕ್ರಿಕೆಟ್ ತಂಡದಲ್ಲಿ ಆಡಿದ್ದ ತ್ರಿಪುರದ ಮಾಜಿ ಆಲ್ರೌಂಡರ್ ರಾಜೇಶ್ ಬಾನಿಕ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಅಕ್ಟೋಬರ್ 31 ರ ರಾತ್ರಿ ಪಶ್ಚಿಮ ತ್ರಿಪುರಾದ ಆನಂದನಗರದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ರಾಜೇಶ್ ಗಂಭೀರವಾಗಿ ಗಾಯಗೊಂಡಿದ್ದರು.
ತಕ್ಷಣವೇ ಅವರನ್ನು ಅಗರ್ತಲಾದ ಜಿಬಿಪಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಆಸ್ಪತ್ರೆಗೆ ತಲುಪುವ ಮುನ್ನವೇ ರಾಜೇಶ್ ಅವರು ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.
ಯಾರು ರಾಜೇಶ್ ಬಾನಿಕ್
ಬಾನಿಕ್ ಈ ಹಿಂದೆ ಟೀಮ್ ಇಂಡಿಯಾದ ಮಾಜಿ ಆಟಗಾರರಾದ ಇರ್ಫಾನ್ ಪಠಾಣ್ ಹಾಗೂ ಅಂಬಾಟಿ ರಾಯುಡು ಜೊತೆ ಕಣಕ್ಕಿಳಿದಿದ್ದರು.
2002-03ರಲ್ಲಿ ತ್ರಿಪುರ ಪರ ರಣಜಿ ಟ್ರೋಫಿಗೆ ಪಾದಾರ್ಪಣೆ ಮಾಡಿದ್ದ ರಾಜೇಶ್ ಬಾನಿಕ್ 42 ಪ್ರಥಮ ದರ್ಜೆ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. ಈ ವೇಳೆ 6 ಅರ್ಧಶತಕಗಳೊಂದಿಗೆ 1469 ರನ್ ಕಲೆಹಾಕಿದ್ದರು.
ಹಾಗೆಯೇ ಲಿಸ್ಟ್ ಎ ಕ್ರಿಕೆಟ್ನಲ್ಲಿ 24 ಪಂದ್ಯಗಳನ್ನಾಡಿದ್ದ ಅವರು 1 ಶತಕದೊಂದಿಗೆ 378 ರನ್ ಕಲೆಹಾಕಿದ್ದರು. ಅಲ್ಲದೆ 8 ವಿಕೆಟ್ ಕಬಳಿಸಿ ಮಿಂಚಿದ್ದರು. ಇನ್ನು 18 ಟಿ20 ಪಂದ್ಯಗಳನ್ನಾಡಿರುವ ರಾಜೇಶ್ ಬಾನಿಕ್ 203 ರನ್ ಕಲೆಹಾಕಿದ್ದರು.
ದೇಶೀಯ ಕ್ರಿಕೆಟ್ನಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಮತ್ತು ನುರಿತ ಲೆಗ್ ಬ್ರೇಕ್ ಬೌಲರ್ ಆಗಿ ಗುರುತಿಸಿಕೊಂಡಿದ್ದ ರಾಜೇಶ್ ಬಾನಿಕ್ ಈ ಹಿಂದೆ ಕಾಸ್ಟ್‌ಕಟರ್ ವರ್ಲ್ಡ್ ಚಾಲೆಂಜ್ ಟೂರ್ನಿಗೆ ಆಯ್ಕೆಯಾಗಿದ್ದರು. ಈ ಪಂದ್ಯಾವಳಿಯಲ್ಲಿ ಬಾನಿಕ್ ಭಾರತದ ಮಾಜಿ ಕ್ರಿಕೆಟಿಗರಾದ ಅಂಬಟಿ ರಾಯುಡು ಮತ್ತು ಇರ್ಫಾನ್ ಪಠಾಣ್ ಅವರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದರು.


