

ಫಿಲಿಭಿಟ್: ಸಫಾರಿ ವಾಹನದ ಮೇಲೆ ಹುಲಿಯೊಂದು ದಾಳಿಗೆ ಮುಂದಾದ ಘಟನೆಯೊಂದು ವರದಿಯಾಗಿದ್ದು, ಕೂದಲೆಳೆ ಅಂತರದಲ್ಲಿ ವಾಹನದಲ್ಲಿದ್ದವರು ಪಾರಾಗಿದ್ದಾರೆ.
ಉತ್ತರ ಪ್ರದೇಶದ ಪಿಲಿಭಿತ್ ಅಭಯಾರಣ್ಯದಲ್ಲಿ ಈ ಘಟನೆ ನಡೆದಿದ್ದು, ಕುಟುಂಬವೊಂದು ತೆರೆದ ಸಫಾರಿವಾಹನದಲ್ಲಿ ಅರಣ್ಯ ವೀಕ್ಷಣೆಗೆ ತೆರಳಿತ್ತು. ಈ ವೇಳೆ ಮಾರ್ಗ ಮಧ್ಯೆ ಪೊದೆಯಲ್ಲಿ ಅಡಗಿ ಕುಳಿತಿದ್ದ ಹುಲಿಯೊಂದು ಸಫಾರಿ ವಾಹನದ ಮೇಲೆ ಹಾರಿ ದಾಳಿಗೆ ಮುಂದಾಗಿದೆ.
ಹುಲಿ ದಾಳಿ ಮುನ್ಸೂಚನೆ ಅರಿತ ಸಫಾರಿ ವಾಹನದ ಚಾಲಕ ಕೂದಲೇ ವೇಗವಾಗಿ ವಾಹನ ಚಲಾಯಿಸಿ ಸಂಭಾವ್ಯ ಅಪಾಯ ತಪ್ಪಿಸಿದ್ದಾರೆ.
ಹುಲಿ ಜೀಪಿನ ಮೇಲೆ ಹಾರುತ್ತಲೇ ಜೀಪಿನಲ್ಲಿದ್ದ ಪ್ರವಾಸಿಗರೂ ಹೌಹಾರಿದ್ದಾರೆ. ಆದರೆ ಚಾಲಕನ ಸಮಯ ಪ್ರಜ್ಞೆಯಿಂದ ಸಂಭಾವ್ಯ ಅಪಾಯವೊಂದು ತಪ್ಪಿದಂತಾಗಿದೆ.
ಮೂಲಗಳ ಪ್ರಕಾರ ಪಿಲಿಭಿತ್‌ನ ಪುರನ್‌ಪುರ ನಿವಾಸಿ ನಿತಿನ್ ಅಗರ್ವಾಲ್ ಅವರು ಶನಿವಾರ ತಮ್ಮ ಕುಟುಂಬದ 10 ಸದಸ್ಯರೊಂದಿಗೆ ಸಫಾರಿಗೆ ಹೋಗಿದ್ದರು. ಅದರಂತೆ ಸಫಾರಿ ವಾಹನ ಹತ್ತಿ ಅರಣ್ಯ ವೀಕ್ಷಿಸುತ್ತಿದ್ದರು. ಅಲ್ಲದೆ ಮಕ್ಕಳು ತಮ್ಮ ಮೊಬೈಲ್ ನಲ್ಲಿ ಕಾಡಿನ ಸೌಂದರ್ಯವನ್ನು ಸೆರೆ ಹಿಡಿಯುತ್ತಿದ್ದರು. ಈ ವೇಳೆ ಸಮೀಪದ ಪೊದೆಯಲ್ಲಿ ಪ್ರಾಣಿಯೊಂದರ ಚಲನ ಕಂಡುಬಂದಿದೆ. ಕೂಡಲೇ ಇದನ್ನು ಗಮನಿಸಿದ ಚಾಲಕ ಜಿಪ್ಸಿಯನ್ನು ನಿಧಾನಗೊಳಿಸಿದರು. ಮಕ್ಕಳು ಅದನ್ನು ವಿಡಿಯೋ ಮಾಡಲು ಮುಂದಾದರು.
ಇದಾದ ಕೆಲ ಕ್ಷಣಗಳಲ್ಲೇ ಪೊದೆಯೊಳಗಿದ್ದ ಬೃಹತ್ ಹುಲಿಯೊಂದು ಜೀಪಿನ ಮೇಲೆ ಹಾರಿದೆ. ಅಲ್ಲದೆ ಜಿಪ್ಸಿ ವಾಹನವನ್ನು ಅಟ್ಟಾಡಿಸಿದೆ. ಅತ್ತ ಹುಲಿ ದಾಳಿಗೆ ಮುಂದಾಗುತ್ತಿದ್ದಂತೆಯೇ ಜಿಪ್ಸಿ ಚಾಲಕ ವೇಗವಾಗಿ ವಾಹನ ಚಲಾಯಿಸಿಕೊಂಡು ಹೋಗಿದ್ದಾರೆ. ಸ್ವಲ್ಪ ದೂರ ಬಂದ ಹುಲಿ ಬಳಿಕ ಅಲ್ಲಿಯೇ ನಿಂತಿದೆ. ಇವಿಷ್ಟೂ ಘಟನೆ ಜಿಪ್ಸಿಯಲ್ಲಿದ್ದ ಪ್ರವಾಸಿಗರ ಮೊಬೈಲ್ ನಲ್ಲಿ ಸೆರೆಯಾಗಿದೆ.
ಇನ್ನು ಈ ಘಟನೆಯ ನಂತರ, ಅನೇಕ ಪ್ರವಾಸಿಗರು ಅರಣ್ಯಕ್ಕೆ ಭೇಟಿ ನೀಡುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿಯ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದೆ.
ಅಂದಹಾಗೆ 2008ರಲ್ಲಿ ಸ್ಥಾಪನೆಯಾದ ಪಿಲಿಭಿಟ್ ಹುಲಿ ಅಭಯಾರಣ್ಯವು ಸುಮಾರು 727 ಚದರ ಕಿಲೋಮೀಟರ್‌ಗಳಷ್ಟು ವಿಸ್ತೀರ್ಣವನ್ನು ಹೊಂದಿದೆ, ಇದು ಉತ್ತರ ಭಾರತದ ಅತ್ಯಂತ ಮಹತ್ವದ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಂದಾಗಿದೆ. ಈ ಅಭಯಾರಣ್ಯವು ತನ್ನ ಶ್ರೀಮಂತ ಮತ್ತು ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿಗಳಿಗೆ ಹೆಸರುವಾಸಿಯಾಗಿದೆ, ಇದು ಹಲವಾರು ಅಳಿವಿನಂಚಿನಲ್ಲಿರುವ ಪ್ರಭೇದಗಳಿಗೆ ಸುರಕ್ಷಿತ ತಾಣವನ್ನು ಒದಗಿಸುತ್ತದೆ. ಈ ಅಭಯಾರಣ್ಯವು ಭವ್ಯವಾದ ಬಂಗಾಳ ಹುಲಿಗಳಿಗೆ ನೆಲೆಯಾಗಿದೆ ಮತ್ತು ಅವುಗಳ ಸಂರಕ್ಷಣೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎನ್ನಲಾಗಿದೆ.
Advertisement