

ನವದೆಹಲಿ: ಭಾರತ ವಿಶ್ವದಲ್ಲೇ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ರಾಷ್ಟ್ರವಾಗಿದ್ದು, ಸದ್ಯದಲ್ಲೇ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಹೇಳಿದ್ದಾರೆ.
ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ (DSE)ಕಾಲೇಜಿನಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್, ಜನಸಂಖ್ಯೆ ಹಾಗೂ ಭೌಗೋಳಿಕ ವಿಭಿನ್ನತೆಯ ನಡುವೆಯೂ ದೇಶವು ಒಗ್ಗಟ್ಟಿನಿಂದ ಇಂದು ದೊಡ್ದದಾಗಿ ನಿಂತಿದೆ. ಸೃದೃಢ ಆರ್ಥಿಕತೆಯೊಂದಿಗೆ ಇಂದು ದೇಶ ಸ್ವಾವಲಂಬನೆ ಸಾಧಿಸಿದೆ ಎಂದರು.
2014ರಲ್ಲಿ 10ನೇ ಅತಿದೊಡ್ಡ ಆರ್ಥಿಕತೆಯಾಗಿದ್ದ ಭಾರತ, ಸದ್ಯದಲ್ಲೇ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ. ಭಾರತೀಯರು ತಮ್ಮ ಬಗ್ಗೆ ಮತ್ತು ದೇಶದ ಆರ್ಥಿಕತೆ ಬಗ್ಗೆ ನಂಬಿಕೆ ಹೊಂದಿರಬೇಕು. ಜನರ ಪ್ರಯತ್ನದಿಂದಲೇ ನಾವು ನಮ್ಮ ಗುರಿಯ ಕಡೆಗೆ ಸಾಗುತ್ತಿದ್ದೇವೆ ಎಂದು ತಿಳಿಸಿದರು.
ಜನರ ಸಹಾಯದಿಂದಲೇ 2.5 ಕೋಟಿ ಜನರನ್ನು ಬಡತನದಿಂದ ಹೊರಬರುವಂತೆ ಮಾಡಿದ್ದೇವೆ. 140 ಕೋಟಿ ಜನಸಂಖ್ಯೆ ಇರುವ ದೇಶವನ್ನು ಸತ್ತ ಆರ್ಥಿಕತೆ ಎಂದು ಯಾರಾದರೂ ಬುದ್ದಿವಂತರು ಕರೆಯಲು ಸಾಧ್ಯವೇ ಎಂದು ಪ್ರಶ್ನಿಸುವ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
Advertisement