

ಪಾಟ್ನಾ: ಬಿಹಾರ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ರಾಜಕೀಯ ನಾಯಕರ ಮತ ಭೇಟಿ ಅಬ್ಬರದಿಂದ ಸಾಗಿದ್ದು, ಆದರೆ ಇಲ್ಲೋರ್ವ ನಾಯಕರಿಗೆ ಅವರದ್ದೇ ಸ್ವಂತ ಕ್ಷೇತ್ರದ ಮತದಾರರು ಚಳಿಬಿಡಿಸಿದ್ದಾರೆ.
ಬಿಹಾರದ ಗಯಾದಲ್ಲಿ ಪ್ರಚಾರದ ಸಮಯದಲ್ಲಿ ಹಿಂದೂಸ್ತಾನಿ ಅವಾಮ್ ಮೋರ್ಚಾ (HAM) ಶಾಸಕ ಅನಿಲ್ ಕುಮಾರ್ ಮೇಲೆ ಅವರದ್ದೇ ಕ್ಷೇತ್ರದ ಗ್ರಾಮಸ್ಥರು ಹಲ್ಲೆ ಮಾಡಿದ್ದಾರೆ.
ಕುಮಾರ್ ಟಿಕ್ಕರಿ ವಿಧಾನಸಭಾ ಸ್ಥಾನಕ್ಕಾಗಿ ಪ್ರಚಾರ ಮಾಡುತ್ತಿದ್ದಾಗ ದಿಘೋರಾ ಗ್ರಾಮದಲ್ಲಿ ಈ ದಾಳಿ ನಡೆದಿದೆ. ಹಿಂದೂಸ್ತಾನಿ ಅವಾಮ್ ಮೋರ್ಚಾ (HAM) ಅಭ್ಯರ್ಥಿ ಮತ್ತು ಹಾಲಿ ಶಾಸಕ ಅನಿಲ್ ಕುಮಾರ್ ಮೇಲೆ ಚುನಾವಣಾ ಪ್ರಚಾರದ ಸಮಯದಲ್ಲಿ ಹಿಂಸಾಚಾರ ನಡೆದಿದೆ.
ಶಾಸಕ ಅನಿಲ್ ಕುಮಾರ್ ತಮ್ಮ ಕಾರಿನ ಮೇಲೆ ನಿಂತು ಮತದಾರರತ್ತ ಕೈ ಬೀಸುತ್ತಿದ್ದಾಗ ಸ್ಥಳೀಯರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಮತಕೇಳಲು ಮಾತ್ರ ಗ್ರಾಮಕ್ಕೆ ಬರುತ್ತಾರೆ ಎಂದು ಆಕ್ರೋಶಗೊಂಡು ಸ್ಥಳೀಯರು ಹಲ್ಲೆ ನಡೆಸಿದ್ದಾರೆ.
ರಸ್ತೆ ನಿರ್ಮಿಸಿ ಎಂದು ಕೇಳುತ್ತಿದ್ದ ಜನ
ಇನ್ನು ಸ್ಥಳೀಯ ಗ್ರಾಮಸ್ಥರು ವರ್ಷಗಳಿಂದಲೂ ಉತ್ತಮ ರಸ್ತೆಗಾಗಿ ಬೇಡಿಕೆ ಇಡುತ್ತಾ ಬಂದಿದ್ದಾರೆ. ಆದರೆ ಎಷ್ಟೇ ಬೇಡಿಕೆ ಸಲ್ಲಿಸಿದರೂ ರಸ್ತೆ ಕಾಮಗಾರಿ ನಡೆದಿಲ್ಲ. ರಸ್ತೆಯನ್ನು ನಿರ್ಮಿಸದ ಕಾರಣ ಕೋಪಗೊಂಡ ಗ್ರಾಮಸ್ಥರು ಅವರ ವಾಹನವನ್ನು ಕಲ್ಲು ಮತ್ತು ಇಟ್ಟಿಗೆಗಳಿಂದ ಹಲ್ಲೆ ಮಾಡುತ್ತಿದ್ದ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಅನಿಲ್ ಕುಮಾರ್ ಮಾತ್ರವಲ್ಲದೇ ಅವರ ಕೆಲವು ಬೆಂಬಲಿಗರ ಮೇಲೂ ಹಲ್ಲೆಯಾಗಿದ್ದು, ಸಣ್ಣಪುಟ್ಟ ಗಾಯಗಳಾಗಿವೆ. ವಿಚಾರ ತಿಳಿಯುತ್ತಲೇ ಸ್ಥಳಕ್ಕಾಗಮಿಸಿದ ಪೊಲೀಸರು ಕ್ರಮ ಕೈಗೊಂಡಿದ್ದು, ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ.
ಬಿಜೆಪಿ ಖಂಡನೆ
ಇನ್ನು ಬಿಜೆಪಿ ಈ ಘಟನೆಯನ್ನು ಬಲವಾಗಿ ಖಂಡಿಸಿದ್ದು, ಇದು 'ಜಂಗಲ್ ರಾಜ್ ರೀಲೋಡಿಂಗ್' ಎಂದು ಪಕ್ಷದ ವಕ್ತಾರರು ಎಚ್ಚರಿಸಿದ್ದಾರೆ.
Advertisement