

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಮತದಾನ ನಡೆದಿರುವುದು ಆಡಳಿತಾರೂಢ ಎನ್‌ಡಿಎ ಸರ್ಕಾರ ಅಧಿಕಾರ ಕಳೆದುಕೊಳ್ಳುವ ಹಾದಿಯಲ್ಲಿದೆ ಎಂಬುದರ ಸ್ಪಷ್ಟ ಸೂಚನೆಯಾಗಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ರಾಜೀವ್ ಶುಕ್ಲಾ ಶುಕ್ರವಾರ ಹೇಳಿದ್ದಾರೆ.
'ಇಬ್ಬರು ಉಪಮುಖ್ಯಮಂತ್ರಿಗಳು ಸೇರಿದಂತೆ ಒಂದು ಡಜನ್‌ಗೂ ಹೆಚ್ಚು ಸಚಿವರು' ತಮ್ಮ ಸ್ಥಾನಗಳನ್ನು ಕಳೆದುಕೊಳ್ಳಲಿದ್ದಾರೆ ಎಂದು ಶುಕ್ಲಾ ಪ್ರತಿಪಾದಿಸಿದರು.
ಬಿಹಾರದಲ್ಲಿ ನವೆಂಬರ್ 6ರಂದು ಮೊದಲ ಹಂತದ ಚುನಾವಣೆ ನಡೆದಿದೆ. ಆ ಸಮಯದಲ್ಲಿ 243 ಸ್ಥಾನಗಳ ಪೈಕಿ 121 ಸ್ಥಾನಗಳಿಗೆ ಮತದಾನ ನಡೆಯಿತು. ದಾಖಲೆಯ ಶೇ 64.69 ರಷ್ಟು ಮತದಾನ ದಾಖಲಾಗಿದ್ದು, ಇದು ರಾಜ್ಯದ ಇತಿಹಾಸದಲ್ಲಿಯೇ ಅತಿ ಹೆಚ್ಚು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಅತಿ ಹೆಚ್ಚು ಮತದಾನವಾಗಿರುವುದು ಜನರು ಬದಲಾವಣೆಗೆ ಮತ ಹಾಕಿದ್ದಾರೆಂದು ಸೂಚಿಸುತ್ತದೆ ಎಂದು ಯಾವಾಗಲೂ ಕಂಡುಬರುತ್ತದೆ. ಬಿಹಾರದಲ್ಲೂ ಅದೇ ಆಗುತ್ತಿದೆ' ಎಂದು ಮಾಜಿ ಕೇಂದ್ರ ಸಚಿವರು ಹೇಳಿದರು.
'ಆಡಳಿತರೂಢ ಎನ್‌ಡಿಎಗೆ ಹೀನಾಯ ಸೋಲುಂಟಾಗುವ ಕೆಲವು ಸ್ಥಳೀಯ ವರದಿಗಳು ನಮ್ಮ ಬಳಿ ಇವೆ. 15 ಸಚಿವರು ಸ್ಪರ್ಧಿಸಿದ್ದ ಸ್ಥಾನಗಳಿಗೆ ನಿನ್ನೆ ಚುನಾವಣೆ ನಡೆದಿದ್ದು, ಅವರಲ್ಲಿ 12 ಸ್ಥಾನಗಳನ್ನು ಕಳೆದುಕೊಳ್ಳಲಿದ್ದಾರೆ. ಇಬ್ಬರೂ ಉಪಮುಖ್ಯಮಂತ್ರಿಗಳು ಸಹ ಸೋಲು ಕಾಣಲಿದ್ದಾರೆ' ಎಂದು ಅವರು ಹೇಳಿದ್ದಾರೆ.
ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ ಲಖಿಸರಾಯ್‌ನಿಂದ ಸತತ ನಾಲ್ಕನೇ ಅವಧಿಗೆ ಸ್ಪರ್ಧಿಸುತ್ತಿದ್ದರೆ, ಸಾಮ್ರಾಟ್ ಚೌಧರಿ ತಾರಾಪುರದಿಂದ ಸ್ಪರ್ಧಿಸುತ್ತಿದ್ದಾರೆ.
ಸದ್ಯ ವಿಧಾನಸಭೆಯಲ್ಲಿ 19 ಸ್ಥಾನಗಳನ್ನು ಹೊಂದಿರುವ ಕಾಂಗ್ರೆಸ್ ಈ ಬಾರಿ ತನ್ನ ಸಂಖ್ಯೆಯನ್ನು ಸುಧಾರಿಸಿಕೊಳ್ಳಲಿದೆ ಎಂದು ಪ್ರತಿಪಾದಿಸಿದರು.
ಕಾಂಗ್ರೆಸ್ ಆರ್‌ಜೆಡಿ, ಮೂರು ಎಡ ಪಕ್ಷಗಳು ಮತ್ತು ಮಾಜಿ ರಾಜ್ಯ ಸಚಿವ ಮುಖೇಶ್ ಸಾಹ್ನಿ ಅವರ ವಿಕಾಸಶೀಲ ಇನ್ಸಾನ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ.
Advertisement