

ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಭಾನುವಾರ ಕಾಂಗ್ರೆಸ್ 2034 ರವರೆಗೆ 10 ವರ್ಷಗಳ ಕಾಲ ರಾಜ್ಯದಲ್ಲಿ ಅಧಿಕಾರದಲ್ಲಿ ಉಳಿಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇಲ್ಲಿ 'ಮೀಟ್ ದಿ ಪ್ರೆಸ್' ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ರೆಡ್ಡಿ, ಬಿಆರ್‌ಎಸ್ ಅನ್ನು ತರಾಟೆಗೆ ತೆಗೆದುಕೊಂಡರು. ಹತ್ತು ವರ್ಷಗಳ ಆಡಳಿತದಲ್ಲಿ ಸರಾಸರಿ ವಾರ್ಷಿಕ 2 ಲಕ್ಷ ಕೋಟಿ ರೂ. ಆದಾಯ ಗಳಿಸಿದ್ದರೂ, ಹೈದರಾಬಾದ್‌ನಲ್ಲಿ ಕೆಲವು ಫ್ಲೈಓವರ್‌ಗಳು ಸೇರಿದಂತೆ ಹಲವಾರು ಯೋಜನೆಗಳನ್ನು ಪೂರ್ಣಗೊಳಿಸಲು ವಿಫಲವಾಗಿದೆ ಎಂದು ಆರೋಪಿಸಿದರು.
ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಅವರನ್ನು ತರಾಟೆಗೆ ತೆಗೆದುಕೊಂಡ ಮುಖ್ಯಮಂತ್ರಿ, ತೆಲಂಗಾಣದಲ್ಲಿ ಹೂಡಿಕೆ ಮಾಡಲು ಆಸಕ್ತಿ ಹೊಂದಿರುವ ಕೈಗಾರಿಕೆಗಳನ್ನು ಪ್ರಧಾನಿ ನರೇಂದ್ರ ಮೋದಿಯವರ ಆದೇಶದ ಮೇರೆಗೆ ಗುಜರಾತ್‌ಗೆ 'ಕಳುಹಿಸಲಾಗಿದೆ'. ತಮ್ಮ ಸರ್ಕಾರಕ್ಕೆ ಕೇಂದ್ರದೊಂದಿಗೆ ಹೋರಾಡುವ ಉದ್ದೇಶವಿಲ್ಲ ಎಂದರು.
'1994 ರಿಂದ 2004 ರವರೆಗೆ, ಟಿಡಿಪಿ 10 ವರ್ಷಗಳ ಕಾಲ ಆಳಿತು ಮತ್ತು 2004 ರಿಂದ 2014 ರವರೆಗೆ, (ಆಗ) ಅವಿಭಜಿತ ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. 2014 ರಿಂದ, ಬಿಆರ್‌ಎಸ್ ಸುಮಾರು 10 ವರ್ಷ ಕಾಲ ತೆಲಂಗಾಣವನ್ನು ಆಳಿತು ಮತ್ತು ಮತ್ತೆ 2024 ರಿಂದ 2034 ರವರೆಗೆ, ಕಾಂಗ್ರೆಸ್ ಅಧಿಕಾರದಲ್ಲಿರುತ್ತದೆ. ಇದು ಜನರ ದೃಢನಿಶ್ಚಯದ ಆದೇಶವಾಗಿದೆ' ಎಂದು ಅವರು ಹೇಳಿದರು.
ಜುಬಿಲಿ ಹಿಲ್ಸ್ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ರೆಡ್ಡಿ, ಬಿಜೆಪಿ ಠೇವಣಿ ಕಳೆದುಕೊಳ್ಳುತ್ತದೆ ಮತ್ತು ಬಿಆರ್‌ಎಸ್ "ಸೋಲುತ್ತದೆ" ಎಂದು ಭವಿಷ್ಯ ನುಡಿದರು.
ತಮ್ಮ ಸರ್ಕಾರ ಜಾರಿಗೆ ತರುತ್ತಿರುವ ವಿವಿಧ ಕಲ್ಯಾಣ ಯೋಜನೆಗಳನ್ನು ತಿಳಿಸಿದ ಅವರು, ನಮ್ಮ ಸರ್ಕಾರವು ಹಿಂದಿನ ಯಾವುದೇ ಬಿಆರ್‌ಎಸ್ ಯೋಜನೆಗಳನ್ನು ಸ್ಥಗಿತಗೊಳಿಸಿಲ್ಲ ಮತ್ತು ಕೆಲವನ್ನು ವಿಸ್ತರಿಸಲಾಗಿದೆ ಎಂದು ಹೇಳಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಆರ್‌ಎಸ್ "ಆತ್ಮಹತ್ಯೆಗೆ ಮುಂದಾಗುವ ಮೂಲಕ ಬಿಜೆಪಿಗೆ ತನ್ನ ಅಂಗಾಂಗಗಳನ್ನು ದಾನ ಮಾಡಿದೆ". ಬಿಆರ್‌ಎಸ್ ಅನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಕೆಸಿಆರ್ ಅವರ ಪುತ್ರಿಯೇ ಹೇಳುತ್ತಾರೆ. ಬಿಆರ್‌ಎಸ್‌ಗೆ ಕೇವಲ ಭೂತಕಾಲವಿದೆ - ಭವಿಷ್ಯವಿಲ್ಲ. ಅದರ 25 ವರ್ಷಗಳ ಜೀವನ ಮುಗಿದಿದೆ ಎಂದು ಅವರು ಹೇಳಿದರು.
ಬಿಆರ್‌ಎಸ್ ಮುಖ್ಯಸ್ಥ ಕೆ. ಚಂದ್ರಶೇಖರ್ ರಾವ್ ಇದುವರೆಗೆ ಜುಬಿಲಿ ಹಿಲ್ಸ್‌ನ ಮತದಾರರಿಗೆ ತಮ್ಮ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿಲ್ಲ ಎಂದು ರೆಡ್ಡಿ ಆರೋಪಿಸಿದ್ದಾರೆ.
ತಮ್ಮ ಸರ್ಕಾರವು ರಾಜ್ಯ ಮಟ್ಟದ ಗಣತಿಯನ್ನು ಯಶಸ್ವಿಯಾಗಿ ಕೈಗೊಂಡಿದೆ ಮತ್ತು ಕೇಂದ್ರವು ತೆಲಂಗಾಣದ ಮಾದರಿಯನ್ನು ಅನುಸರಿಸುವುದನ್ನು ಖಚಿತಪಡಿಸಿದೆ ಎಂದು ಮುಖ್ಯಮಂತ್ರಿ ಹೇಳಿದರು.
'ಕೆಸಿಆರ್ ತಮ್ಮ 10 ವರ್ಷಗಳ ಆಳ್ವಿಕೆಯಲ್ಲಿ ರಾಜ್ಯವನ್ನು ಹಾಳು ಮಾಡಿದ್ದಾರೆ. ಕೆಸಿಆರ್ ಅಧಿಕಾರ ವಹಿಸಿಕೊಂಡಾಗ ತೆಲಂಗಾಣದ ಆರ್ಥಿಕತೆಯು 60,000 ಕೋಟಿ ರೂ.ಗೂ ಹೆಚ್ಚಾಗಿತ್ತು. ಹಿಂದಿನ ಬಿಆರ್‌ಎಸ್ ಸರ್ಕಾರವು 8.11 ಲಕ್ಷ ಕೋಟಿ ರೂ. ಸಾಲವನ್ನು ಕಾಂಗ್ರೆಸ್ ಸರ್ಕಾರಕ್ಕೆ ಹಸ್ತಾಂತರಿಸಿತು. ಆ ಆರ್ಥಿಕ ಬಿಕ್ಕಟ್ಟಿನಿಂದಾಗಿ ಸಂಬಳ ಪಾವತಿಸಲು ಸಾಧ್ಯವಾಗಲಿಲ್ಲ' ಎಂದು ರೆಡ್ಡಿ ಹೇಳಿದ್ದಾರೆ.
Advertisement