

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ ಸ್ಫೋಟಗೊಂಡು ಒಂಬತ್ತು ಜನರ ಸಾವಿಗೆ ಕಾರಣವಾದ ಬಿಳಿ ಬಣ್ಣದ ಹುಂಡೈ i20 ಕಾರು ಓಡಾಡಿದ್ದ ಸಿಸಿಟಿವಿ ದೃಶ್ಯಾವಳಿಗಳು ಪತ್ತೆಯಾಗಿದ್ದು, ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೆಂಪುಕೋಟೆ ಮೆಟ್ರೊ ನಿಲ್ದಾಣದ ಸಮೀಪದ ಟ್ರಾಫಿಕ್ ಸಿಗ್ನಲ್‌ನಲ್ಲಿ ಸೋಮವಾರ ಸಂಜೆ 6.50ರ ಹೊತ್ತಿಗೆ ಹುಂಡೈ ಐ–20 ಕಾರು ಸ್ಫೋಟಗೊಂಡಿತ್ತು.
ಸ್ಫೋಟಕ್ಕೆ ಕಾರಣವಾದ ಕಾರನ್ನು ಪುಲ್ವಾಮಾ ನಿವಾಸಿ, ವೈದ್ಯ ಉಮರ್ ಮೊಹಮ್ಮದ್ ಕಾರನ್ನು ಚಲಾಯಿಸುತ್ತಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ.
ಇದೀಗ ಕಾರು ಚಲಾಯಿಸಿದ್ದ ವ್ಯಕ್ತಿಯ ಸಿಸಿಟಿವಿ ದೃಶ್ಯಗಳು ಪತ್ತೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಿಸಿಟಿವಿ ದೃಶ್ಯಾವಳಿಗಳಲ್ಲಿ HR 26CE7674 ನಂಬರ್ ಪ್ಲೇಟ್ ಹೊಂದಿರುವ ಕಾರು ಮಧ್ಯಾಹ್ನ 3.19 ಕ್ಕೆ ಕೆಂಪು ಕೋಟೆ ಪಾರ್ಕಿಂಗ್ ಸ್ಥಳಕ್ಕೆ ಪ್ರವೇಶಿಸಿದ್ದು, ಸಂಜೆ 6.30 ರವರೆಗೆ ಅಲ್ಲಿಯೇ ನಿಂತಿತ್ತು ಎಂದು ತಿಳಿದುಬಂದಿದೆ.
ಒಂದು ನಿಮಿಷದ ಸಿಸಿಟಿವಿ ವಿಡಿಯೋ ಪತ್ತೆಯಾಗಿದ್ದು, ಕಾರು ಬದರ್ಪುರ್ ಗಡಿಯ ಮೂಲಕ ಹಾದುಹೋಗುವುದನ್ನು ಸ್ಪಷ್ಟವಾಗಿ ಕಂಡು ಬಂದಿದೆ. ಇನ್ನೊಂದು ವೀಡಿಯೊದಲ್ಲಿ ಚಾಲಕನ ಕೈ ಕಿಟಕಿಯಿಂದ ಹೊರಗೆ ಚಾಚಿರುವುದೂ ಕಡು ಬಂದಿದೆ.
ತನಿಖಾ ಸಂಸ್ಥೆಗಳು ಪಡೆದ ದೃಶ್ಯಗಳ ಪ್ರಕಾರ, ಕಾರು ಸುಮಾರು ಮೂರು ಗಂಟೆಗಳ ಕಾಲ ಪಾರ್ಕಿಂಗ್ ಸ್ಥಳದಲ್ಲಿಯೇ ನಿಂತಿತ್ತು. ಆ ಸಮಯದಲ್ಲಿ ವಾಹನದ ಬಳಿ ಯಾರೂ ಇರಲಿಲ್ಲ ಎನ್ನಲಾಗುತ್ತಿದೆ.
ಸಂಜೆ ಕಾರು ಪಾರ್ಕಿಂಗ್ ಸ್ಥಳದಿಂದ ಹೊರಬಂದಾಗ, ಆ ಪ್ರದೇಶದಲ್ಲಿ ಭಾರೀ ಸಂಚಾರ ದಟ್ಟಣೆ ಇತ್ತು ಎಂಬುದು ದೃಶ್ಯಗಳಿಂದ ಗೊತ್ತಾಗುತ್ತಿದೆ. ಅದಕ್ಕಾಗಿಯೇ ಕಾರು ನಿಧಾನವಾಗಿ ಚಲಿಸಿತು ಮತ್ತು ಕೆಲವು ನಿಮಿಷಗಳ ನಂತರ ಸ್ಫೋಟದ ಸ್ಥಳಕ್ಕೆ ಬಂದಿದೆ.
ಸ್ಫೋಟಕ್ಕೂ ಮುನ್ನ ದರಿಯಾಗಂಜ್, ಕೆಂಪು ಕೋಟೆ ಪ್ರದೇಶ, ಕಾಶ್ಮೀರಿ ಗೇಟ್ ಮತ್ತು ಸುನೇಹ್ರಿ ಮಸೀದಿ ಪ್ರದೇಶದಲ್ಲೂ ಕಾರು ಕಾಣಿಸಿಕೊಂಡಿದೆ. ಈ ಎಲ್ಲಾ ಮಾರ್ಗಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಯಾವ ಟೋಲ್ ಪ್ಲಾಜಾಗಳ ಮೂಲಕ ಕಾರು ಹಾದುಹೋಗಿದೆ, ಯಾವ ಸಿಗ್ನಲ್‌ನಲ್ಲಿ ಅದು ಎಷ್ಟು ಸಮಯ ನಿಂತಿತು, ಪಾರ್ಕಿಂಗ್ ಸ್ಥಳದಿಂದ ಹೊರಬಂದ ನಂತರ ಎಲ್ಲಿ ಕಾಣಿಸಿಕೊಂಡಿತು ಎಂಬುದನ್ನು ಒಳಗೊಂಡಂತೆ ಇಡೀ ಮಾರ್ಗದ ಟೈಮ್‌ಲೈನ್ ಅನ್ನು ರಚಿಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಏತನ್ಮಧ್ಯೆ ಸ್ಫೋಟದಲ್ಲಿ ಬಳಸಲಾದ ಹುಂಡೈ i20 (ಸಂಖ್ಯೆ HR-26) ಗುರುಗ್ರಾಮ್ ವಾಹನ. ಇದು ಕಾಶ್ಮೀರದ ಪುಲ್ವಾಮಾ ಮೂಲದ ಮೊಹಮ್ಮದ್ ಸಲ್ಮಾನ್ ಎಂಬ ವ್ಯಕ್ತಿಗೆ ನೋಂದಣಿಯಾಗಿದೆ. ಗುರುಗ್ರಾಮ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಒಂದೂವರೆ ವರ್ಷದ ಹಿಂದೆ ಓಖ್ಲಾ ನಿವಾಸಿ ದೇವೇಂದ್ರ ಎಂಬವರಿಗೆ ಕಾರನ್ನು ಮಾರಾಟ ಮಾಡಿದ್ದಾಗಿ ಸಲ್ಮಾನ್ ಬಹಿರಂಗಪಡಿಸಿದ್ದಾನೆ.
ಈ ನಡುವೆ ದೆಹಲಿ ಸ್ಫೋಟ ಆತ್ಮಹತ್ಯಾ ದಾಳಿಯೋ ಅಥವಾ ಕಾರಿನಲ್ಲಿ ಸ್ಫೋಟಕಗಳನ್ನು ಮೊದಲೇ ಇರಿಸಲಾಗಿತ್ತೋ ಎಂದು ಖಚಿತಪಡಿಸಿಕೊಳ್ಳಲು ಪೊಲೀಸರ ವಿಶೇಷ ಘಟಕ, ಅಪರಾಧ ವಿಭಾಗ ಮತ್ತು NIA ತಂಡಗಳು ಜಂಟಿಯಾಗಿ ತನಿಖೆ ನಡೆಸುತ್ತಿವೆ.
Advertisement