

ಗುಜರಾತ್‌ನ ಭರೂಚ್ ಜಿಲ್ಲೆಯ ಔಷಧ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟದಲ್ಲಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದು 20ಕ್ಕೂ ಹೆಚ್ಚು ಕಾರ್ಮಿಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಸಯ್ಖಾ ಜಿಐಡಿಸಿ ಪ್ರದೇಶದಲ್ಲಿರುವ ಕಾರ್ಖಾನೆಯಲ್ಲಿ ಬೆಳಗಿನ ಜಾವ 2:30ರ ಸುಮಾರಿಗೆ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಾರ್ಖಾನೆಯೊಳಗಿನ ಪ್ರಬಲ ಬಾಯ್ಲರ್ ಸ್ಫೋಟದಿಂದ ಭಾರಿ ಬೆಂಕಿ ಕಾಣಿಸಿಕೊಂಡಿದೆ ಎಂದು ಭರೂಚ್ ಜಿಲ್ಲಾಧಿಕಾರಿ ಗೌರಂಗ್ ಮಕ್ವಾನಾ ಹೇಳಿದ್ದಾರೆ. ನಂತರ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದರು.
ಸ್ಫೋಟ ಎಷ್ಟು ಪ್ರಬಲವಾಗಿತ್ತೆಂದರೆ ಇಡೀ ಕಾರ್ಖಾನೆ ಕಟ್ಟಡ ಕುಸಿದು ಬಿದ್ದಿದೆ. ಹೆಚ್ಚಿನ ಕಾರ್ಮಿಕರು ಅಪಾಯದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು ದುರಾದುಷ್ಟವಶಾತ್ ಇಬ್ಬರು ಸಿಲುಕಿ ಸಾವನ್ನಪ್ಪಿದ್ದಾರೆ. ಬೆಂಕಿಯನ್ನು ನಂದಿಸಿದ ನಂತರ ಅವರ ದೇಹಗಳನ್ನು ಅವಶೇಷಗಳಿಂದ ಹೊರತೆಗೆಯಲಾಯಿತು. ಘಟನೆಯಲ್ಲಿ ಸುಮಾರು 20 ಕಾರ್ಮಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಸ್ಫೋಟದ ನಂತರ ಒಬ್ಬ ವ್ಯಕ್ತಿ ಕಾಣೆಯಾಗಿದ್ದು ಕಟ್ಟಡದೊಳಗೆ ಸಿಲುಕಿರುವ ಸಾಧ್ಯತೆ ಇದೆ ಎಂದು ಕೆಲವು ಕಾರ್ಮಿಕರು ಹೇಳಿರುವುದರಿಂದ, ಅಗ್ನಿಶಾಮಕ ಇಲಾಖೆ, ಪೊಲೀಸರು ಮತ್ತು ವಿಧಿವಿಜ್ಞಾನ ತಜ್ಞರ ತಂಡಗಳು ಸ್ಥಳದಲ್ಲಿ ಸಂಪೂರ್ಣ ತನಿಖೆ ನಡೆಸುತ್ತಿವೆ ಎಂದು ಜಿಲ್ಲಾಧಿಕಾರಿ ಗೌರಂಗ್ ಮಕ್ವಾನಾ ಹೇಳಿದ್ದಾರೆ.
ಜಿಲ್ಲಾಧಿಕಾರಿ ಗೌರಂಗ್ ಮಕ್ವಾನಾ ಅವರ ಪ್ರಕಾರ, ಕೈಗಾರಿಕಾ ಸುರಕ್ಷತೆ ಮತ್ತು ಆರೋಗ್ಯ ನಿರ್ದೇಶಕರ (ಡಿಶ್) ಅಧಿಕಾರಿಗಳು ಸಹ ಘಟನೆಯ ತನಿಖೆಗಾಗಿ ಸ್ಥಳಕ್ಕೆ ತಲುಪಿದ್ದಾರೆ. ಕಾರ್ಖಾನೆಗೆ ಅಗತ್ಯವಿರುವ ಎಲ್ಲಾ ಪರವಾನ ಮತ್ತು ಅನುಮತಿ ಪಡೆದಿತ್ತಾ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.
Advertisement