

ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮಿತ್ರ ಪಕ್ಷ ಕೇಂದ್ರ ಸಚಿವ 'ಮೋದಿಯ ಹನುಮಾನ್' ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಸ್ಪರ್ಧಿಸಿದ್ದ 29 ಸ್ಥಾನಗಳ ಪೈಕಿ 22 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಎಲ್ಲರ ಅಚ್ಚರಿಗೆ ಕಾರಣವಾಗಿದೆ.
2020ರ ಚುನಾವಣೆಯಲ್ಲಿ, ಕೇವಲ ಒಂದು ಸ್ಥಾನವನ್ನು ಗೆದ್ದಿದ್ದ ಪಕ್ಷವು ನವೆಂಬರ್ 14 ರಂದು ಮಧ್ಯಾಹ್ನದ ಹೊತ್ತಿಗೆ, 22 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಈ ಮೂಲಕ ಹಲವರು ಹುಬ್ಬೇರಿಸುವಂತೆ ಮಾಡಿದೆ.
ಬಿಹಾರ ರಾಜಕೀಯದಲ್ಲಿ ಸಣ್ಣ ಪಕ್ಷವಾಗಿದ್ದ ಎಲ್‌ಜೆಪಿ(ಆರ್‌ವಿ) ಈ ಚುನಾವಣೆಯಲ್ಲಿ ಎನ್‌ಡಿಎಯ ಅತ್ಯುತ್ತಮ ಪ್ರದರ್ಶನ ನೀಡುವ ಪಕ್ಷಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಈ ಬದಲಾವಣೆಯು ರಾಜಕೀಯ ಪ್ರಭಾವ ಮತ್ತು ಯಶಸ್ಸಿನಲ್ಲಿನ ಅವರ ಏರಿಕೆಯನ್ನು ಎತ್ತಿ ತೋರಿಸುತ್ತದೆ.
ಬಿಜೆಪಿ ಮತ್ತು ಜೆಡಿ(ಯು) ಜೊತೆಗೆ ಎನ್‌ಡಿಎಯ ಭಾಗವಾಗಿ ಸ್ಪರ್ಧಿಸಿರುವ ಪಕ್ಷದ ಪ್ರದರ್ಶನವು ಬಿಹಾರ ವಿಧಾನಸಭಾ ಚುನಾವಣೆಯಲ್ಲಿಯೇ ಅದರ ಅತ್ಯುತ್ತಮ ಪ್ರದರ್ಶನವಾಗಿದೆ. ಇದು ಪಾಟ್ನಾದಲ್ಲಿ ಆಡಳಿತ ಸಮೀಕರಣವನ್ನೇ ಬದಲಾಯಿಸಿದೆ ಮತ್ತು ಪ್ರತಿ ಪಕ್ಷವು ತನ್ನ ರಾಜಕೀಯ ಲೆಕ್ಕಾಚಾರಗಳನ್ನು ಮರು ಮೌಲ್ಯಮಾಪನ ಮಾಡುವಂತೆ ಪ್ರೇರೇಪಿಸಿದೆ.
ಎನ್‌ಡಿಎಯ ಸೀಟು ಹಂಚಿಕೆ ಸೂತ್ರದಡಿಯಲ್ಲಿ ಎಲ್‌ಜೆಪಿ(ಆರ್‌ವಿ)ಗೆ 29 ಸ್ಥಾನಗಳನ್ನು ನೀಡಲಾಗಿತ್ತು. ಇದು ಕೆಲವು ಮಿತ್ರಪಕ್ಷಗಳಿಂದ ಟೀಕೆಗೂ ಗುರಿಯಾಗಿತ್ತು. ಆದರೆ, ಇಂದಿನ ಪ್ರವೃತ್ತಿಗಳು ಈ ನಿರ್ಧಾರವನ್ನು ಸಮರ್ಥಿಸುವಂತೆ ಕಂಡುಬಂದಿವೆ.
ಒಟ್ಟಾರೆಯಾಗಿ, 243 ಸದಸ್ಯ ಬಲದ ವಿಧಾನಸಭೆಯಲ್ಲಿ ಎನ್‌ಡಿಎ 200 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
2020 ರಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದ್ದ ಚಿರಾಗ್ ಪಾಸ್ವಾನ್ ಅವರು 137 ಸ್ಥಾನಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಆದರೆ, ಕೇವಲ ಒಂದು ಕ್ಷೇತ್ರದಲ್ಲಿ ಮಾತ್ರ ಗೆಲುವು ಸಿಕ್ಕಿತ್ತು. ಆದಾಗ್ಯೂ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ತೀವ್ರವಾಗಿ ಟೀಕಿಸುವ ಅವರ ಪ್ರಚಾರವು ಜೆಡಿಯು ಮತ ಹಂಚಿಕೆಯನ್ನು ಕಡಿತಗೊಳಿಸಿತು. ಪರಿಣಾಮವಾಗಿ 2015ರಲ್ಲಿ 71 ಸ್ಥಾನಗಳಿಂದ 43 ಕ್ಷೇತ್ರಗಳಿಗೆ ಕುಸಿಯಲು ಕಾರಣವಾಯಿತು ಎನ್ನಲಾಗಿದೆ.
ಈ ಬಾರಿ, ಎಲ್‌ಜೆಪಿ(ಆರ್‌ವಿ) ಪಕ್ಷವು ತನ್ನ ಹಿಂದಿನ ದಾಖಲೆಯನ್ನು ಮೀರಿಸುತ್ತಿದೆ ಮತ್ತು ಎನ್‌ಡಿಎಯ ಮಹತ್ವದ ಪಾಲುದಾರನಾಗಿ ಹೊರಹೊಮ್ಮುತ್ತಿದೆ.
ಬಿರುಕುಗಳಿಂದ ಸಮನ್ವಯದವರೆಗೆ...
ಪಕ್ಷದ ಆಂತರಿಕ ಗೊಂದಲ ಮತ್ತು ಅವರ ಚಿಕ್ಕಪ್ಪ ಪಶುಪತಿ ನಾಥ್ ಪರಾಸ್ ಅವರೊಂದಿಗಿನ ಒಡಕಿನ ನಂತರ, ಚಿರಾಗ್ ಕ್ರಮೇಣ ರಾಜಕೀಯ ಜೀವನವನ್ನು ಪುನರ್ನಿರ್ಮಿಸಿದರು. 2024ರ ಲೋಕಸಭಾ ಚುನಾವಣೆಯ ಹೊತ್ತಿಗೆ, ಅವರು ಎನ್‌ಡಿಎಗೆ ಮರಳಿದರು. ಸಂಸದೀಯ ಸ್ಥಾನವನ್ನು ಗೆದ್ದರು ಮತ್ತು ಮೂರನೇ ಅವಧಿಯಲ್ಲಿ ಮೋದಿ ಸಂಪುಟವನ್ನು ಸೇರಿದರು.
ಈಗ 43 ವರ್ಷ ವಯಸ್ಸಿನ ಚಿರಾಗ್, 2020ರಿಂದಲೂ ಬಿಜೆಪಿ ಅಥವಾ ಪ್ರಧಾನಿ ನರೇಂದ್ರ ಮೋದಿ ಜೊತೆ ಯಾವುದೇ ಸಮಸ್ಯೆ ಇಲ್ಲ. ನಮ್ಮ ಸಮಸ್ಯೆ ಏನಿದ್ದರೂ ಅದು ನಿತೀಶ್ ಕುಮಾರ್ ಜೊತೆ ಮಾತ್ರ ಎಂದು ಪದೇ ಪದೆ ಹೇಳುತ್ತಾ ಬಂದಿದ್ದಾರೆ. 2030ರ ವೇಳೆಗೆ ರಾಜ್ಯ ರಾಜಕೀಯಕ್ಕೆ ಮರಳುವ ಬಗ್ಗೆಯೂ ತಾವು ಯೋಚಿಸಬಹುದು ಎಂಬ ಸುಳಿವು ನೀಡಿದ್ದಾರೆ.
ಎಲ್ಲೆಲ್ಲಿ ಮುನ್ನಡೆ?
ಚುನಾವಣಾ ಆಯೋಗದ ಟ್ರೆಂಡ್‌ಗಳ ಪ್ರಕಾರ, ಎಲ್‌ಜೆಪಿ(ಆರ್‌ವಿ) ಅಭ್ಯರ್ಥಿಗಳು ಉತ್ತರ, ಮಧ್ಯ ಮತ್ತು ದಕ್ಷಿಣ ಬಿಹಾರದಾದ್ಯಂತ ಮುನ್ನಡೆ ಸಾಧಿಸಿದ್ದಾರೆ. ಸುಗೌಲಿ, ಗೋವಿಂದ್‌ಗಂಜ್, ಬೆಲ್‌ಸಂಡ್, ಬಹದ್ದೂರ್‌ಗಂಜ್, ಕಸ್ಬಾ, ಬಲರಾಮ್‌ಪುರ್, ಸಿಮ್ರಿ, ಭಕ್ತಿಯಾರ್‌ಪುರ್, ಬೋಚಹಾನ್, ದರೌಲಿ, ಗರ್ಖಾ, ಮಹುವಾ, ಬಕ್ರಿ, ಪರ್ಬಟ್ಟಾ, ದೇಬ್ರಾ, ಶೆಹ್ರಿ, ನಾಥ್‌ನಗರ, ಫತುವಾ, ದೆಹ್ರಿ, ಒಬ್ರಾ, ಶೇರ್ಘಾಟಿ, ಬೋಧ್ ಗಯಾ, ರಾಜೌಲಿ ಮತ್ತು ಗೋಬಿಂದಪುರದಲ್ಲಿನ ಅಭ್ಯರ್ಥಿಗಳು ಮುನ್ನಡೆ ಕಾಯ್ದುಕೊಂಡಿದ್ದಾರೆ.
ಚುನಾವಣೋತ್ತರ ಸಮೀಕ್ಷೆಗಳು ಹೇಳಿದ್ದೇನು?
ಎನ್‌ಡಿಎ ಬಹುಮತದ ಗಡಿ ದಾಟಲಿದೆ ಎಂದು ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಚಿರಾಗ್ ನೇತೃತ್ವದ ಪಕ್ಷವು 10–15 ಸ್ಥಾನಗಳನ್ನು ಗೆಲ್ಲಲಿದೆ ಎಂದು ಅಂದಾಜಿಸಿದ್ದವು. ಎಲ್‌ಜೆಪಿ(ಆರ್‌ವಿ) 29 ಸ್ಥಾನಗಳಲ್ಲಿ ಸ್ಪರ್ಧಿಸಿದರೆ, ಬಿಜೆಪಿ ಮತ್ತು ಜೆಡಿ(ಯು) ತಲಾ 101 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.
Advertisement