

ಜಿದ್ದಾ: ಸೌದಿ ಅರೇಬಿಯಾದಲ್ಲಿ ಘೋರ ದುರಂತ ಸಂಭವಿಸಿದೆ. ಮೆಕ್ಕಾದಿಂದ ಮದೀನಾಗೆ ತೆರಳುತ್ತಿದ್ದ ಯಾತ್ರಿಕರ ಬಸ್ ಡೀಸೆಲ್ ಟ್ಯಾಂಕರ್‌ಗೆ ಡಿಕ್ಕಿ ಹೊಡೆದ ಪರಿಣಾಮ 42 ಭಾರತೀಯರು ಸಜೀವ ದಹನವಾಗಿರುವ ಘಟನೆ ನಡೆದಿದೆ.
ಟ್ಯಾಂಕರ್‌ಗೆ ಬಸ್ ಡಿಕ್ಕಿ ಹೊಡೆಯುತ್ತಿದ್ದಂತೆ ಈ ದುರಂತದಲ್ಲಿ ಬಸ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಹೆಚ್ಚಿನ ಪ್ರಯಾಣಿಕರು ನಿದ್ರಾವಸ್ಥೆಯಲ್ಲಿದ್ದ ಕಾರಣ ಸಾವಿನ ಸಂಖ್ಯೆ ಹೆಚ್ಚಾಗಿರುವ ಸಾಧ್ಯತೆ ಇದೆ. ಮೃತರಲ್ಲಿ ಹೆಚ್ಚಿನವರು ಹೈದರಾಬಾದ್ ಮೂಲದವರಾಗಿದ್ದು ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ ಎಂದು ತಿಳಿದುಬಂದಿದೆ.
ಸೋಮವಾರ ಮದೀನಾ ಬಳಿ ಸಂಭವಿಸಿದ ಈ ದುರ್ಘಟನೆಯಲ್ಲಿ ಓರ್ವ ಯುವಕ ಪವಾಡ ಸದೃಶ್ಯ ರೀತಿಯಲ್ಲಿ ಬದುಕುಳಿದಿದ್ದಾನೆ. ಮೆಕ್ಕಾದಿಂದ ಮದೀನಾಕ್ಕೆ ಹೋಗುತ್ತಿದ್ದ ಬಸ್ ಡೀಸೆಲ್ ಟ್ಯಾಂಕರ್‌ಗೆ ಡಿಕ್ಕಿ ಹೊಡೆದಾಗ ಚಾಲಕನ ಪಕ್ಕದಲ್ಲಿದ್ದ ಕುಳಿತಿದ್ದ 24 ವರ್ಷದ ಯುವಕ ಮೊಹಮ್ಮದ್ ಅಬ್ದುಲ್ ಶೋಯಾಬ್, ಧಗ ಧಗನೆ ಹೊತ್ತಿ ಉರಿಯುತ್ತಿದ್ದ ಬಸ್ ನ ಕಿಟಕಿ ಮುರಿದು ಜಂಪ್ ಮಾಡಿ ಪ್ರಾಣ ಉಳಿಸಿಕೊಂಡಿರುವುದಾಗಿ ವರದಿಯಾಗಿದೆ. ಶೋಯಾಬ್ ಹೈದರಾಬಾದ್ ನಿವಾಸಿಯಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ, ಆದರೆ ಅವರ ಸ್ಥಿತಿ ತಿಳಿದಿಲ್ಲ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಹೈದರಾಬಾದಿನಲ್ಲಿ ಮಾತನಾಡಿದ ಶೋಯಾಬ್ ಅವರ ಸಂಬಂಧಿ ಮೊಹಮ್ಮದ್ ತೆಹಸೀನ್, ನಮ್ಮ ಕುಟುಂಬದಿಂದ ಏಳು ಮಂದಿ ಸೌದಿ ಅರೇಬಿಯಾಕ್ಕೆ ತೆರಳಿದ್ದರು. ಕಳೆದ ವಾರ ಅವರು ಸೌಧಿಗೆ ಹೋಗಿದ್ದರು. ಯುವಕ ಬಸ್ ನಿಂದ ಜಿಗಿದು ಹೊರಬಂದಿರುವುದಾಗಿ ತಿಳಿದುಬಂದಿದೆ. ಮೃತರ ಪಾರ್ಥಿವ ಶರೀರಗಳನ್ನು ಭಾರತಕ್ಕೆ ತರುವಂತೆ ಭಾರತ ಸರ್ಕಾರಕ್ಕೆ ಮನವಿ ಮಾಡುವುದಾಗಿ ತಿಳಿಸಿದರು.
ಬೆಳಗಿನ ಜಾವ 1:30 ರ ಸುಮಾರಿಗೆ (IST) ಡೀಸಲ್ ಟ್ಯಾಂಕರ್ ಗೆ ಬಸ್ ಡಿಕ್ಕಿ ಹೊಡೆದಾಗ ಸುಮಾರು 46 ಜನರು ಬಸ್‌ನಲ್ಲಿದ್ದರು ಎಂದು ಹೇಳಲಾಗಿದೆ. ಸಂತ್ರಸ್ತ ಕುಟುಂಬಕ್ಕೆ ನೆರವು ನೀಡಲು ಸಹಾಯವಾಣಿ ಸ್ಥಾಪಿಸಲಾಗಿದೆ ಎಂದು ಜೆದ್ದಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಪ್ರಸ್ತುತ ರಷ್ಯಾ ಭೇಟಿಯಲ್ಲಿರುವ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅಪಘಾತದ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.
ರಿಯಾದ್‌ನಲ್ಲಿರುವ ನಮ್ಮ ರಾಯಭಾರ ಕಚೇರಿ ಮತ್ತು ಜೆದ್ದಾದಲ್ಲಿರುವ ರಾಯಭಾರಿ ಕಚೇರಿ, ಈ ಅಪಘಾತದಿಂದ ಹಾನಿಗೊಳಗಾದ ಭಾರತೀಯ ಪ್ರಜೆಗಳು ಮತ್ತು ಕುಟುಂಬಗಳಿಗೆ ಸಂಪೂರ್ಣ ಬೆಂಬಲವನ್ನು ನೀಡುತ್ತಿದೆ ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
Advertisement