

ಮೆಕ್ಕಾದಿಂದ ಮದೀನಾಗೆ ಭಾರತೀಯ ಉಮ್ರಾ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್ಸೊಂದು ಡೀಸೆಲ್ ಟ್ಯಾಂಕರ್‌ಗೆ ಡಿಕ್ಕಿ ಹೊಡೆದ ಪರಿಣಾಮ, ಸುಮಾರು 45 ಮಂದಿ ಭಾರತೀಯ ಯಾತ್ರಿಕರು ಸಾವನ್ನಪ್ಪಿರುವ ದುರಂತವೊಂದು ಸೋಮವಾರ ಸಂಭವಿಸಿದೆ.
ಸೋಮವಾರ ಬೆಳಗಿನ ಜಾವ ಮೆಕ್ಕಾದಿಂದ ಮದೀನಾಗೆ ಭಕ್ತರನ್ನು ಕರೆದೊಯ್ಯಲಾಗುತ್ತಿತ್ತು. ದುರಂತದ ಸಮಯದಲ್ಲಿ ಸುಮಾರು 20 ಮಹಿಳೆಯರು ಮತ್ತು 11 ಮಕ್ಕಳು ಬಸ್ಸಿನಲ್ಲಿದ್ದರು.
ಈ ವೇಳೆ ಬಸ್ ಡೀಸೆಲ್ ಟ್ಯಾಂಕರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ಬಸ್ಸಿನಲ್ಲಿದ್ದ 45 ಭಾರತೀಯ ಉಮ್ರಾ ಯಾತ್ರಿಕರು ಸಜೀವ ದಹನವಾಗಿದ್ದಾರೆಂದು ತಿಳಿದುಬಂದಿದೆ.
ಪ್ರಾಥಮಿಕ ವರದಿಗಳ ಪ್ರಕಾರ, ಮುಫ್ರಿಹತ್ ಎಂದು ಗುರುತಿಸಲಾದ ಸ್ಥಳದಲ್ಲಿ ಭಾರತೀಯ ಕಾಲಮಾನ ಬೆಳಗಿನ ಜಾವ 1.30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ.
ಸ್ಥಳಧಲ್ಲಿ ತುರ್ತು ಕಾರ್ಯಾಚರಣೆಗಳು ನಡೆಯುತ್ತಿದ್ದು, ಹಜ್ ಮತ್ತು ಉಮ್ರಾ ಸಚಿವಾಲಯ ಹಾಗು ಪ್ರಯಾಣ ಸಂಸ್ಥೆ ಅಪಘಾತವನ್ನು ದೃಢಪಡಿಸಿರುವುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಸ್ಥಳೀಯ ಮೂಲಗಳು 45 ಸಾವುಗಳನ್ನು ವರದಿ ಮಾಡಿದ್ದರೂ, ಅಧಿಕಾರಿಗಳು ಇನ್ನೂ ನಿಖರ ಸಾವುನೋವುಗಳ ಸಂಖ್ಯೆ ಮತ್ತು ಬದುಕುಳಿದವರ ಸ್ಥಿತಿಯನ್ನು ಪರಿಶೀಲಿಸುತ್ತಿದ್ದಾರೆ.
ಘಟನೆಯಲ್ಲಿ ಓರ್ವ ಯುವಕ ಮಾತ್ರ ಬದುಕುಳಿದಿದ್ದು, ಆತನನ್ನು 25 ವರ್ಷದ ಅಬ್ದುಲ್ ಶುಹೈಬ್ ಮೊಹಮ್ಮದ್ ಎಂದು ಗುರುತಿಸಲಾಗಿದೆ. ಘಟನೆಯ ಸಂದರ್ಭದಲ್ಲಿ ಯಾತ್ರಿಕರೆಲ್ಲರೂ ನಿದ್ರೆಯಲ್ಲಿದ್ದದ್ದರಿಂದ ಭಾರೀ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಯಾತ್ರಿಕರಿಗೆ ಉಮ್ರಾ ವೀಸಾ ಮತ್ತು ಪ್ರಯಾಣದ ವ್ಯವಸ್ಥೆ ಮಾಡಿದ್ದ ಏಜೆನ್ಸಿಗಳು ಮುಂದಿನ ಎಲ್ಲ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಹಜ್ ಮತ್ತು ಉಮ್ರಾ ಸಚಿವಾಲಯದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.
ಸಿಎಂ ರೇವಂತ್ ರೆಡ್ಡಿ ಸಂತಾಪ
ಮೃತರೆಲ್ಲರೂ ಹೈದರಾಬಾದ್ ಮೂಲದವರೆಂದು ಹೇಳಲಾಗುತ್ತಿದ್ದು, ಘಟನೆಗೆ ಮುಖ್ಯಮಂತ್ರಿ ರೇವಂತ್ ರೆಡ್ಡಿಯವರು ಆಘಾತ ವ್ಯಕ್ತಪಡಿಸಿದ್ದಾರೆ.
ತೆಲಂಗಾಣ ನಿವಾಸಿಗಳ ಸಂಖ್ಯೆ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸುವಂತೆ ಮುಖ್ಯಮಂತ್ರಿಗಳು ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿಗೆ ಸೂಚನೆ ನೀಡಿದ್ದಾರೆ.
ಕೇಂದ್ರ ವಿದೇಶಾಂಗ ಸಚಿವಾಲಯ ಮತ್ತು ಸೌದಿ ರಾಯಭಾರ ಕಚೇರಿಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ಅಗತ್ಯ ಪರಿಹಾರ ಕ್ರಮಗಳನ್ನು ವಿಳಂಬವಿಲ್ಲದೆ ಪ್ರಾರಂಭಿಸುವಂತೆ ಸೂಚಿಸಿದ್ದಾರೆ.
ಸಿಎಂ ಸೂಚನೆ ಬೆನ್ನಲ್ಲೇ ಮುಖ್ಯ ಕಾರ್ಯದರ್ಶಿ ಕೆ. ರಾಮಕೃಷ್ಣ ರಾವ್ ಅವರು ದೆಹಲಿಯಲ್ಲಿ ಸಮನ್ವಯ ಕಾರ್ಯದರ್ಶಿ ಗೌರವ್ ಉಪ್ಪಲ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಕುಟುಂಬಗಳಿಗೆ ಮಾಹಿತಿ ನೀಡಲು ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದ್ದಾರೆ.
ನಿಯಂತ್ರಣ ಕೊಠಡಿ ಸಂಖ್ಯೆಗಳು ಇಂತಿವೆ...
+91 79979 59754
+91 99129 19545
ಓವೈಸಿ ಸಂತಾಪ
ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ಅಸಾದುದ್ದೀನ್ ಓವೈಸಿ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.
ಹೈದರಾಬಾದ್ ಮೂಲದ ಎರಡು ಪ್ರಯಾಣ ಏಜೆನ್ಸಿಗಳನ್ನು ಸಂಪರ್ಕಿಸಿ ಪ್ರಯಾಣಿಕರ ಮಾಹಿತಿಯನ್ನು ರಿಯಾದ್ ರಾಯಭಾರ ಕಚೇರಿಯೊಂದಿಗೆ ಹಂಚಿಕೊಂಡಿದ್ದೇನೆ. ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿ ಅಬು ಮಾಥೇನ್ ಜಾರ್ಜ್ ಅವರೊಂದಿಗೆ ಮಾತಕತೆ ನಡೆಸಲಾಗಿದೆ. ಅವರು ಸ್ಥಳೀಯ ಅಧಿಕಾರಿಗಳಿಂದ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆಂದು ಹೇಳಿದ್ದಾರೆ.
ಮೃತದೇಹಗಳನ್ನು ಭಾರತಕ್ಕೆ ತರುವಂತೆ ಮತ್ತು ಗಾಯಗೊಂಡವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳುವಂತೆ ಕೇಂದ್ರ ಸರ್ಕಾರ, ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರಿಗೆ ಮನವಿ ಮಾಡುತ್ತೇನೆಂದು ತಿಳಿಸಿದ್ದಾರೆ.
ಸಂಸದೀಯ ವ್ಯವಹಾರ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಪ್ರತಿಕ್ರಿಯಿಸಿ, ಸೌದಿ ಅರೇಬಿಯಾದ ಮದೀನಾ-ಮೆಕ್ಕಾ ಹೆದ್ದಾರಿಯಲ್ಲಿ ಸಂಭವಿಸಿದ ಬಸ್ ಅಪಘಾತದಲ್ಲಿ ಭಾರತೀಯ ಯಾತ್ರಿಕರ ಸಾವು ಸಂಭವಿಸಿರುವುದು ಆಘಾತ ಹಾಗೂ ತೀವ್ರ ದುಃಖ ತಂದಿದೆ.
ನಮ್ಮ ರಾಯಭಾರ ಕಚೇರಿ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ, ಹೆಚ್ಚಿನ ವಿವರಗಳನ್ನು ಸಂಗ್ರಹಿಸಲಾಗುತ್ತಿದ್ದು, ಸಾಧ್ಯವಿರುವ ಎಲ್ಲಾ ರೀತಿಯ ನೆರವುಗಳನ್ನು ಒದಗಿಸಲಾಗುತ್ತಿದೆ. ದುಃಖಿತ ಕುಟುಂಬಗಳಿಗೆ ನನ್ನ ಸಂತಾಪಗಳು ಎಂದು ಹೇಳಿದ್ದಾರೆ.
ಸಹಾಯವಾಣಿಯ ಸಂಪರ್ಕ ವಿವರಗಳು ಕೆಳಕಂಡಂತಿವೆ:
8002440003 (ಟೋಲ್ ಫ್ರೀ)
0122614093
0126614276
0556122301 (ವಾಟ್ಸಾಪ್)
ಸಹಾಯವಾಣಿ ಆರಂಭ
ಈ ನಡುವೆ ಜಿದ್ದಾದ ಭಾರತೀಯ ರಾಯಭಾರಿ ಕಚೇರಿಯಲ್ಲಿ 24x7 ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದ್ದು, ಸಹಾಯವಾಣಿಗಾಗಿ 8002440003 ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.
ಘಟನೆಗೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಪ್ರತಿಕ್ರಿಯಿಸಿದ್ದು, ದುರಂತಕ್ಕೆ ಆಘಾತ ವ್ಯಕ್ತಪಡಿಸಿದ್ದಾರೆ.
ಸೌದಿ ಅರೇಬಿಯಾದ ಮದೀನಾದಲ್ಲಿ ಭಾರತೀಯ ಪ್ರಜೆಗಳು ಅಪಘಾತದಲ್ಲಿ ಸಾವನ್ನಪ್ಪಿರುವುದು ತೀವ್ರ ಆಘಾತ ತಂದಿದೆ.
ರಿಯಾದ್‌ನಲ್ಲಿರುವ ನಮ್ಮ ರಾಯಭಾರ ಕಚೇರಿ ಮತ್ತು ಜಿದ್ದಾದ ರಾಯಭಾರ ಕಚೇರಿ ಈ ಅಪಘಾತದಿಂದ ಹಾನಿಗೊಳಗಾದ ಭಾರತೀಯ ಪ್ರಜೆಗಳು ಮತ್ತು ಕುಟುಂಬಗಳಿಗೆ ಸಂಪೂರ್ಣ ಬೆಂಬಲವನ್ನು ನೀಡುತ್ತಿವೆ. ಮೃತರ ಕುಟುಂಬಗಳಿಗೆ ತೀವ್ರ ಸಂತಾಪ ಸೂಚಿಸುತ್ತೇನೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆಂದು ತಿಳಿಸಿದ್ದಾರೆ.
ಹೈದರಾಬಾದ್'ನಿಂದ ತೆರಳಿದ್ದು ಒಟ್ಟು 54 ಮಂದಿ
ನವೆಂಬರ್ 9 ರಂದು ಹೈದರಾಬಾದ್‌ನಿಂದ ಒಟ್ಟು 54 ಜನರು ಜಿದ್ದಾಗೆ ಪ್ರಯಾಣಿಸಿದ್ದಾರೆ ಎಂದು ಹೈದರಾಬಾದ್ ಪೊಲೀಸ್ ಆಯುಕ್ತ ವಿ.ಸಿ. ಸಜ್ಜನರ್ ಅವರು ಮಾಹಿತಿ ನೀಡಿದ್ದಾರೆ.
ಎಲ್ಲರೂ ನವೆಂಬರ್ 23 ರಂದು ಹಿಂತಿರುಗಬೇಕಿತ್ತು. ಆದರೆ, 54 ಜನರಲ್ಲಿ ನಾಲ್ವರು ಭಾನುವಾರ ಮದೀನಾಗೆ ಕಾರಿನಲ್ಲಿ ಪ್ರತ್ಯೇಕವಾಗಿ ಪ್ರಯಾಣಿಸಿದ್ದಾರೆ. ಇನ್ನೂ ನಾಲ್ವರು ಮೆಕ್ಕಾದಲ್ಲಿಯೇ ಉಳಿದುಕೊಂಡಿದ್ದಾರೆ. ಉಳಿದ 46 ಮಂದಿ ಬಸ್ ನಲ್ಲಿ ಪ್ರಯಾಣಿಸಿದ್ದು, ಮದೀನಾದಿಂದ ಸುಮಾರು 25 ಕಿ.ಮೀ ದೂರದಲ್ಲಿ ತೈಲ ಟ್ಯಾಂಕರ್‌ಗೆ ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ. ಅಪಘಾತದಲ್ಲಿ ಒಬ್ಬ ಮಾತ್ರ ಬದುಕುಳಿದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ದುರ್ಘಟನೆಯಲ್ಲಿ 45 ಮಂದಿ ಸಾವನ್ನಪ್ಪಿದ್ದಾರೆಂಬ ಮಾಹಿತಿ ಬಂದಿದೆ ಎಂದು ತಿಳಿಸಿದ್ದಾರೆ.
Advertisement