

ಪಾಟ್ನಾ: ಬಿಹಾರದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಆರ್‌ಜೆಡಿ ಹೀನಾಯ ಸೋಲು ಅನುಭವಿಸಿತ್ತು. ಇದರ ಬೆನ್ನಲ್ಲೇ ಕುಟುಂಬ ಕಲಹ ಕೂಡ ಮುನ್ನೆಲೆಗೆ ಬಂದಿತ್ತು. ತೇಜಸ್ವಿ ಯಾದವ್ ಸಹೋದರಿ ರೋಹಿಣಿ ಆಚಾರ್ಯ ತಮ್ಮನ ಮೇಲೆ ಹಲವು ಆರೋಪಗಳನ್ನು ಮಾಡಿದ್ದರು. ಈ ಸಂಬಂಧ ಮಾಜಿ ಸಿಎಂ ಲಾಲೂ ಪ್ರಸಾದ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಇದು ನಮ್ಮ ಕುಟುಂಬದ ಆಂತರಿಕ ವಿಷಯವಾಗಿದ್ದು, ಕುಟುಂಬದೊಳಗೆ ಇದನ್ನು ಪರಿಹರಿಸಲಾಗುವುದು. ಅದನ್ನು ನಿಭಾಯಿಸಲು ನಾನು ಇಲ್ಲಿದ್ದೇನೆ ಎಂದು ಲಾಲು ಪಾಟ್ನಾದಲ್ಲಿ ನಡೆದ ಸಭೆಯಲ್ಲಿ ಹೇಳಿದರು ಎಂದು ಮೂಲಗಳು ತಿಳಿಸಿವೆ.
ತೇಜಸ್ವಿ ಹಾಗೂ ರೋಹಿಣಿ ನಡುವೆ ಇರುವ ಮನಸ್ತಾಪ ಶೀಘ್ರವೇ ಬಗೆಹರಿಯಲಿದೆ ಎಂದು ಹೇಳಿದ್ದಾರೆ. ಸೋಮವಾರ ತೇಜಸ್ವಿ ಯಾದವ್ ಅವರ ಅಧಿಕೃತ ನಿವಾಸದಲ್ಲಿ ಆರ್‌ಜೆಡಿ ಶಾಸಕರು ಮತ್ತು ನಾಯಕರ ಸಭೆ ನಡೆಯಿತು. ಲಾಲು ಪ್ರಸಾದ್ ಯಾದವ್ ಕೂಡ ಸಭೆಯಲ್ಲಿ ಹಾಜರಿದ್ದರು.
ಲಾಲು ಪ್ರಸಾದ್ ಯಾದವ್, ಪತ್ನಿ ರಾಬ್ರಿ ದೇವಿ, ಹಿರಿಯ ಮಗಳು ಮಿಸಾ ಭಾರತಿ ಮತ್ತು ಜಗದಾನಂದ್ ಸಿಂಗ್ ಸೇರಿದಂತೆ ಹಿರಿಯ ಆರ್‌ಜೆಡಿ ನಾಯಕರು ಭಾಗವಹಿಸಿದ್ದ ಸಭೆಯಲ್ಲಿ, ತೇಜಸ್ವಿ ಅವರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಲಾಯಿತು.
ಬಿಹಾರ ಚುನಾವಣೆಗೆ ತೇಜಸ್ವಿ ತುಂಬಾ ಶ್ರಮಿಸಿದ್ದಾರೆ ಎಂದು ಲಾಲು ಹೊಗಳಿದರು, 243 ಸದಸ್ಯ ಬಲದ ವಿಧಾನಸಭೆಯಲ್ಲಿ ಅರ್ ಜೆಡಿ ಕೇವಲ 25 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಯಿತು, ಇದು 2010 ರ ನಂತರದ ಎರಡನೇ ಅತ್ಯಂತ ಕಳಪೆ ಪ್ರದರ್ಶನವಾಗಿದೆ. ಇನ್ನು ಮುಂದೆ ತೇಜಸ್ವಿ ಪಕ್ಷವನ್ನು ಮುನ್ನಡೆಸುತ್ತಾರೆ ಎಂದು ಹೇಳಲಾಗುತ್ತಿದೆ.
Advertisement