

ರಾಯಪುರ: ಕಳೆದ ಎರಡು ದಶಕಗಳಲ್ಲಿ ಹಲವಾರು ದಾಳಿಗಳ ಮಾಸ್ಟರ್ ಮೈಂಡ್ ಆಗಿದ್ದ ನಕ್ಸಲ್ ಕಮಾಂಡರ್ ಮದ್ವಿ ಹಿದ್ಮಾ ಮಂಗಳವಾರ ಆಂಧ್ರಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಸಾವಿಗೀಡಾಗಿದ್ದಾನೆ ಎಂದು ಛತ್ತೀಸಗಢ ಪೊಲೀಸರು ಬುಧವಾರ ತಿಳಿಸಿದ್ದಾರೆ.
ಆಂಧ್ರ ಪ್ರದೇಶದ ಮಾರೆಡುಮಿಲ್ಲಿ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಬೆಳಿಗ್ಗೆ 6.30 ರಿಂದ 7 ಗಂಟೆಯ ನಡುವೆ ಎನ್‌ಕೌಂಟರ್ ನಡೆದಿದೆ ಎಂದು ಅಲ್ಲೂರಿ ಸೀತಾರಾಮರಾಜು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅಮಿತ್ ಬರ್ದಾರ್ ತಿಳಿಸಿದ್ದಾರೆ.
ಇಂದು ಬೆಳಿಗ್ಗೆ ನಡೆದ ಕಾರ್ಯಾಚರಣೆಯಲ್ಲಿ ಪೊಲೀಸರು ಹಿದ್ಮಾ, ಅವರ ಪತ್ನಿ ರಾಜೆ ಮತ್ತು ಇತರ ನಾಲ್ವರು ನಕ್ಸಲರನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಬಸ್ತಾರ್‌ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ. ಹಿದ್ಮಾ ಅವರ ಸಾವು ಛತ್ತೀಸಗಢದ ಬಸ್ತಾರ್ ಪ್ರದೇಶದಲ್ಲಿ ಈಗಾಗಲೇ ದುರ್ಬಲವಾಗಿದ್ದ ದಂಗೆಯನ್ನು ಸಂಪೂರ್ಣವಾಗಿ ಕೊನೆಗೊಳಿಸಿದೆ ಎಂದಿದ್ದಾರೆ.
'ಆಂಧ್ರಪ್ರದೇಶ-ಛತ್ತೀಸಗಢ ಗಡಿಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮಾವೋವಾದಿ ನಾಯಕ ಹಿದ್ಮಾ ಸಾವಿಗೀಡಾಗಿರುವ ಮಾಹಿತಿ ನಮಗೆ ಬಂದಿದೆ. ಇದು ಬಹಳ ಮುಖ್ಯವಾದ ಬೆಳವಣಿಗೆ' ಎಂದು ಛತ್ತೀಸಗಢದ ಉಪಮುಖ್ಯಮಂತ್ರಿ ವಿಜಯ್ ಶರ್ಮಾ ರಾಯಪುರದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಸುಕ್ಮಾ ಜಿಲ್ಲೆಯ ಪುವರ್ತಿ ಗ್ರಾಮದವರಾದ ಹಿದ್ಮಾ ಅವರ ವಯಸ್ಸು ಮತ್ತು ಹೇಗಿದ್ದಾರೆ ಎಂಬುದು ಈ ವರ್ಷದ ಆರಂಭದಲ್ಲಿ ಅವರ ಛಾಯಾಚಿತ್ರ ಹೊರಬರುವವರೆಗೂ ನಿಗೂಢವಾಗಿತ್ತು.
ಅವರು ದಂಡಕಾರಣ್ಯದಲ್ಲಿ ಮಾವೋವಾದಿಗಳ ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ (ಪಿಎಲ್‌ಜಿಎ) ಬೆಟಾಲಿಯನ್ ನಂ.1 ರ ಮುಖ್ಯಸ್ಥರಾಗಿದ್ದರು. ಇದು ಬಸ್ತಾರ್ ಹೊರತುಪಡಿಸಿ ಆಂಧ್ರಪ್ರದೇಶ, ಒಡಿಶಾ, ತೆಲಂಗಾಣ ಮತ್ತು ಮಹಾರಾಷ್ಟ್ರದ ಕೆಲವು ಭಾಗಗಳನ್ನು ವ್ಯಾಪಿಸಿರುವ ದಂಡಕಾರಣ್ಯದಲ್ಲಿನ ಮಾವೋವಾದಿಗಳ ಪ್ರಬಲ ಗುಂಪಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷ ಹಿದ್ಮಾ ಅವರಿಗೆ ಮಾವೋವಾದಿಗಳ ಕೇಂದ್ರ ಸಮಿತಿಗೆ ಬಡ್ತಿ ನೀಡಲಾಯಿತು. 1990ರ ದಶಕದ ಉತ್ತರಾರ್ಧದಲ್ಲಿ ಹಿದ್ಮಾ ನಿಷೇಧಿತ ಸಂಘಟನೆಗೆ ಗ್ರೌಂಡ್ ಲೆವೆಲ್ ಸಂಘಟಕರಾಗಿ ಸೇರಿದರು. 2010ರಲ್ಲಿ 76 ಭದ್ರತಾ ಸಿಬ್ಬಂದಿ ಸಾವಿಗೀಡಾದ ಟಾಡ್ಮೆಟ್ಲಾ ದಾಳಿಯ ನಂತರ ಅವರು ಭದ್ರತಾ ಪಡೆಗಳ ಗಮನಕ್ಕೆ ಬಂದರು.
ನಂತರ ಮತ್ತೊಬ್ಬ ಉನ್ನತ ಮಾವೋವಾದಿ ಕಮಾಂಡರ್ ಪಾಪ ರಾವ್‌ಗೆ ದಾಳಿ ನಡೆಸಲು ಹಿದ್ಮಾ ಸಹಾಯ ಮಾಡಿದ್ದರು. ಅಂದಿನಿಂದ, ಬಸ್ತಾರ್‌ನಲ್ಲಿ ಭದ್ರತಾ ಪಡೆಗಳ ಮೇಲೆ ನಡೆದ ಪ್ರತಿಯೊಂದು ಪ್ರಮುಖ ಹೊಂಚುದಾಳಿಯ ನಂತರವೂ ಅವರ ಹೆಸರು ಪದೇ ಪದೆ ಕೇಳಿಬರುತ್ತಿತ್ತು. ಅವರು ದಕ್ಷಿಣ ಬಸ್ತಾರ್‌ನಲ್ಲಿ ಹಲವಾರು ಮಾರಕ ದಾಳಿಗಳನ್ನು ಆಯೋಜಿಸಿದ್ದ ದಂಡಕಾರಣ್ಯ ವಿಶೇಷ ವಲಯ ಸಮಿತಿಯ (DKSZC) ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
ಗೆರಿಲ್ಲಾ ಯುದ್ಧದಲ್ಲಿ ಪರಿಣಿತನಾಗಿದ್ದ ಹಿದ್ಮಾ ಎಕೆ-47 ರೈಫಲ್ ಅನ್ನು ಹೊಂದಿದ್ದನೆಂದು ತಿಳಿದುಬಂದಿದೆ. ಆದರೆ, ಆತನ ಘಟಕದ ಸದಸ್ಯರು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರು. ಕಾಡಿನೊಳಗಿನ ಆತನ ನಾಲ್ಕು ಪದರಗಳಿಂದಾಗಿ ವರ್ಷಗಳ ಕಾಲ ಆತನನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ ಎಂದು ವರದಿಯಾಗಿದೆ.
ಆದಾಗ್ಯೂ, ಕಳೆದ ಎರಡು ವರ್ಷಗಳಲ್ಲಿ ತೀವ್ರಗೊಂಡ ನಕ್ಸಲ್ ವಿರೋಧಿ ಕಾರ್ಯಾಚರಣೆಗಳು ಹಿದ್ಮಾ ಅವರ ವ್ಯಾಪ್ತಿಯನ್ನು ದುರ್ಬಲಗೊಳಿಸಿದವು. ಇದರಿಂದಾಗಿ ಅವರು ಛತ್ತೀಸಗಢ-ತೆಲಂಗಾಣ ಮತ್ತು ಛತ್ತೀಸಗಢ-ಆಂಧ್ರಪ್ರದೇಶ ಗಡಿಗಳಲ್ಲಿರುವ ಅರಣ್ಯದ ಆಶ್ರಯ ಪಡೆಯಲು ಪಲಾಯನ ಮಾಡಬೇಕಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾವೋವಾದಿಗಳ ಪ್ರಮುಖ ಪ್ರದೇಶಗಳಲ್ಲಿ ಭದ್ರತಾ ಪಡೆಗಳ ನಿರಂತರ ಕಾರ್ಯಾಚರಣೆಗಳು ಹಿದ್ಮಾ ಸೇರಿದಂತೆ ಹಿರಿಯ ನಾಯಕರ ಮೇಲೆ ಗಮನಾರ್ಹ ಒತ್ತಡವನ್ನು ಹೆಚ್ಚಿಸಿವೆ.
Advertisement