

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುಗ್ರಾಮದಲ್ಲಿ ಮನೆ ಖರೀದಿದಾರರಿಗೆ ವಂಚಿಸಿದ ಆರೋಪದ ಮೇಲೆ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರ ಕುಟುಂಬಕ್ಕೆ ಆಪ್ತ ಎಂದು ಪರಿಗಣಿಸಲಾದ ರಿಯಲ್ ಎಸ್ಟೇಟ್ ಉದ್ಯಮಿ ಅಮಿತ್ ಕಟ್ಯಾಲ್ ಅವರನ್ನು ಜಾರಿ ನಿರ್ದೇಶನಾಲಯ(ಇಡಿ) ಬಂಧಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಕಟ್ಯಾಲ್ ಅವರನ್ನು ಸೋಮವಾರ ಸಂಸ್ಥೆಯ ಗುರುಗ್ರಾಮ ವಲಯ ಕಚೇರಿಯು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ) ಅಡಿಯಲ್ಲಿ ವಶಕ್ಕೆ ತೆಗೆದುಕೊಂಡಿದೆ ಎಂದು ಅವರು ತಿಳಿಸಿದ್ದಾರೆ.
ಗುರುಗ್ರಾಮದಲ್ಲಿರುವ ವಿಶೇಷ ನ್ಯಾಯಾಲಯವು ಹೆಚ್ಚಿನ ವಿಚಾರಣೆಗಾಗಿ ಆರೋಪಿ ಕಟ್ಯಾಲ್ ಅವರನ್ನು ಆರು ದಿನಗಳ ಇಡಿ ಕಸ್ಟಡಿಗೆ ಒಪ್ಪಿಸಿದೆ.
ಗುರುಗ್ರಾಮದ ಸೆಕ್ಟರ್ 70 ರಲ್ಲಿ 14 ಎಕರೆಗಳಿಗಿಂತ ಹೆಚ್ಚು ವಿಸ್ತೀರ್ಣದಲ್ಲಿ ನಿರ್ಮಿಸಲಾದ ಕ್ರಿಶ್ ಫ್ಲಾರೆನ್ಸ್ ಎಸ್ಟೇಟ್‌ನಲ್ಲಿ ಫ್ಲಾಟ್‌ಗಳನ್ನು ವಿತರಿಸದ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ.
ಈ ಯೋಜನೆಯನ್ನು ಕಟ್ಯಾಲ್ ಅವರ ಕಂಪನಿಯಾದ ಆಂಗಲ್ ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಅಭಿವೃದ್ಧಿಪಡಿಸಿದೆ.
ಲಾಲು ಪ್ರಸಾದ್, ಅವರ ಪತ್ನಿ ರಾಬ್ರಿ ದೇವಿ ಮತ್ತು ಇತರ ಕುಟುಂಬ ಸದಸ್ಯರನ್ನು ಒಳಗೊಂಡ ರೈಲ್ವೆಯ ಉದ್ಯೋಗಕ್ಕಾಗಿ ಭೂಮಿ ಹಗರಣಕ್ಕೆ ಸಂಬಂಧಿಸಿದ ಪ್ರತ್ಯೇಕ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಟ್ಯಾಲ್ ಅವರನ್ನು 2023 ರಲ್ಲಿ ಇಡಿ ಬಂಧಿಸಿತ್ತು.
ಕ್ರಿಶ್ ರಿಯಲ್‌ಟೆಕ್ ಪ್ರವರ್ತಕರಾಗಿರುವ ಮೂಲಕ ಮನೆ ಖರೀದಿದಾರರಿಗೆ 500 ಕೋಟಿ ರೂ. ವಂಚಿಸಿದ ಆರೋಪದ ಮೇಲೆ ಇಡಿ, ಕಳೆದ ಆಗಸ್ಟ್‌ನಲ್ಲಿ ಈ ಉದ್ಯಮಿಯ ವಿರುದ್ಧ ಮೂರನೇ ಪ್ರಕರಣದಲ್ಲಿ ಚಾರ್ಜ್‌ಶೀಟ್ ಸಲ್ಲಿಸಿತ್ತು.
Advertisement