

ತಿರುಮಲ: ಹಿಂದೂಗಳ ಪವಿತ್ರ ಧಾರ್ಮಿಕ ಯಾತ್ರಾತಾಣ ವಿಶ್ವ ವಿಖ್ಯಾತ ತಿರುಪತಿ ತಿರುಮಲದಲ್ಲಿ ವೈಕುಂಠ ಏಕಾದಶಿ ವಿಶೇಷ ದರ್ಷಶನಕ್ಕೆ ತಿರುಪತಿ ತಿರುಮಲ ದೇವಸ್ಥಾನ ಆಡಳಿತ ಮಂಡಳಿ ಆನ್ ಲೈನ್ ಟಿಕೆಟ್ ವಿತರಣೆ ಆರಂಭಿಸಿದೆ.
ಹೌದು.. ತಿರುಮಲ ತಿರುಪತಿ ದೇವಸ್ಥಾನಗಳು ವೈಕುಂಠ ಏಕಾದಶಿ ದರ್ಶನದ ವೇಳಾಪಟ್ಟಿಯನ್ನು ದೃಢಪಡಿಸಿದ್ದು, ವರ್ಷಾಂತ್ಯದ ಭಾರೀ ಜನದಟ್ಟಣೆಯನ್ನು ನಿರ್ವಹಿಸಲು ಸ್ಪಷ್ಟ ವ್ಯವಸ್ಥೆಗಳನ್ನು ಮಾಡಿದೆ.
ಮೊದಲ 3 ದಿನಗಳಲ್ಲಿ ಆನ್‌ಲೈನ್ ಇ-ಡಿಪ್ ಟೋಕನ್ ಹೊಂದಿರುವವರಿಗೆ ಮಾತ್ರ ವೈಕುಂಠ ದ್ವಾರ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ಟಿಟಿಡಿ ಘೋಷಿಸಿದೆ.
ಸಾಮಾನ್ಯ ಭಕ್ತರಿಗೆ ಆದ್ಯತೆ ನೀಡಲು ಈ ಕ್ರಮ ಕೈಗೊಳ್ಳಲಾಗಿದೆ. ಡಿಸೆಂಬರ್ 30ರಿಂದ ಜನವರಿ 8ರವರೆಗೆ 10 ದಿನಗಳ ಕಾಲ ವೈಕುಂಠ ದ್ವಾರ ದರ್ಶನವನ್ನು ಮುಂದುವರಿಸಲು ಆಡಳಿತ ಮಂಡಳಿ ನಿರ್ಧರಿಸಿದೆ.
ಸಿಎಂ ನೇತೃತ್ವದಲ್ಲಿ ಮಹತ್ವ ನಿರ್ಣಯಗಳು
ಇನ್ನು ವೈಕುಂಠ ಏಕಾದಶಿ ನಿಮಿತ್ತ ತಿರುಮಲದಲ್ಲಿ ಕೈಗೊಳ್ಳಬೇಕಾದ ಕಾರ್ಯಗಳ ಕುರಿತು ಟಿಟಿಡಿ ಮತ್ತು ಸಿಎಂ ಚಂದ್ರಬಾಬು ನಾಯ್ಡು ಅವರು ಮಹತ್ವದ ಸಭೆ ನಡೆಸಿದರು. ಈ ಸಭೆಯಲ್ಲಿ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಪ್ರಮುಖವಾಗಿ ತಿರುಮಲ ತಿರುಪತಿ ದೇವಸ್ಥಾನಗಳ (TTD) ಆಡಳಿತ ಮಂಡಳಿಯು ವೈಕುಂಠ ದ್ವಾರ ದರ್ಶನಕ್ಕೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದು, ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಸೂಚನೆಯಂತೆ, ಈ ವರ್ಷ ಸಾಮಾನ್ಯ ಭಕ್ತರಿಗೆ ಆದ್ಯತೆ ನೀಡಲು ದರ್ಶನದ ಸಮಯವನ್ನು ನಿಗದಿಪಡಿಸಲಾಗಿದೆ.
ಡಿಸೆಂಬರ್ 30ರಿಂದ ಜನವರಿ 8ರವರೆಗೆ 10 ದಿನಗಳ ಕಾಲ ವೈಕುಂಠ ದ್ವಾರ ದರ್ಶನವನ್ನು ಮುಂದುವರಿಸಲು ಆಡಳಿತ ಮಂಡಳಿ ನಿರ್ಧರಿಸಿದೆ.
ನೂಕು ನುಗ್ಗಲು ತಪ್ಪಿಸಲು ಕ್ರಮ
ಒಟ್ಟು 182 ಗಂಟೆಗಳ ದರ್ಶನದಲ್ಲಿ 164 ಗಂಟೆಗಳ ಕಾಲ ಸಾಮಾನ್ಯ ಭಕ್ತರಿಗೆ ಸರ್ವ ದರ್ಶನ ನೀಡಲು ಟಿಟಿಡಿ ನಿರ್ಧರಿಸಿದೆ. ಮುಖ್ಯಮಂತ್ರಿಯ ಆದೇಶದಂತೆ ಸಾಮಾನ್ಯ ಭಕ್ತರಿಗೆ ಆದ್ಯತೆ ನೀಡುವ ಭಾಗ ಇದಾಗಿದೆ.
ತಿರುಪತಿಯ ಕೌಂಟರ್‌ಗಳಲ್ಲಿ ವೈಕುಂಠ ದ್ವಾರ ದರ್ಶನ ಟೋಕನ್‌ಗಳನ್ನು ಆಫ್‌ಲೈನ್‌ನಲ್ಲಿ ನೀಡುವ ಪದ್ಧತಿಯನ್ನು ಈ ಬಾರಿ ರದ್ದುಗೊಳಿಸಲಾಗಿದೆ. ಕಳೆದ ವರ್ಷ ತಿರುಪತಿಯ ಕೌಂಟರ್‌ಗಳಲ್ಲಿ ನಡೆದ ಕಾಲ್ತುಳಿತದ ಘಟನೆಯನ್ನು ಗಮನದಲ್ಲಿಟ್ಟುಕೊಂಡು ಭಕ್ತರಿಗೆ ಆಗುವ ಅನಾನುಕೂಲತೆಯನ್ನು ತಪ್ಪಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಹೊಸ ನೀತಿ ಜಾರಿಗೆ
ಸಾಮಾನ್ಯ ಭಕ್ತರಿಗೆ ಸರ್ವ ದರ್ಶನ ಟೋಕನ್‌ಗಳ ಹಂಚಿಕೆಯಲ್ಲಿ ಟಿಟಿಡಿ ಹೊಸ ನೀತಿಯನ್ನು ಜಾರಿಗೆ ತರುತ್ತಿದೆ. ಡಿಸೆಂಬರ್ 30, 31 ಮತ್ತು ಜನವರಿ 1ರಂದು ದರ್ಶನದ ಮೊದಲ ಮೂರು ದಿನಗಳವರೆಗೆ ಇ-ಡಿಐಪಿ ಮೂಲಕ ಟಿಕೆಟ್‌ಗಳನ್ನು ಹಂಚಲಾಗುತ್ತದೆ.
ಇದಕ್ಕೆ ನವೆಂಬರ್ 27ರಿಂದ ಡಿಸೆಂಬರ್ 1ರವರೆಗೆ ಆನ್‌ಲೈನ್‌ನಲ್ಲಿ ನೋಂದಣಿ ಮಾಡಬೇಕು. ಡಿಸೆಂಬರ್ 2ರಂದು ಆನ್‌ಲೈನ್ ಡಿಐಪಿ ಮೂಲಕ ಟೋಕನ್‌ಗಳನ್ನು ಹಂಚಲಾಗುತ್ತದೆ. ಟಿಟಿಡಿ ವೆಬ್‌ಸೈಟ್, ಅಪ್ಲಿಕೇಶನ್ ಮತ್ತು ವಾಟ್ಸಾಪ್ ಮೂಲಕ ಮಾತ್ರ ಟೋಕನ್‌ಗಳನ್ನು ನೀಡಲಾಗುತ್ತದೆ. ಆಫ್‌ಲೈನ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.
ಜನವರಿ 2ರಿಂದ ಜನವರಿ 8ರವರೆಗೆ, ಟೋಕನ್ ಇಲ್ಲದ ಭಕ್ತರಿಗೆ ಎಂದಿನಂತೆ ಸರ್ವ ದರ್ಶನಕ್ಕೆ ಅವಕಾಶ ನೀಡಲಾಗುವುದು. ಟಿಟಿಡಿ ಪ್ರತಿದಿನ 15,000 ವಿಶೇಷ ಪ್ರವೇಶ ದರ್ಶನ (ರೂ. 300) ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡುತ್ತದೆ.
ಜೊತೆಗೆ 1,000 ಶ್ರೀವಾನಿ ಟ್ರಸ್ಟ್ ಬ್ರೇಕ್ ದರ್ಶನ ಟಿಕೆಟ್‌ಗಳನ್ನು ಬಿಡುಗಡೆ ಮಾಡುತ್ತದೆ. ವೈಯಕ್ತಿಕವಾಗಿ ಭೇಟಿ ನೀಡುವ ಪ್ರೋಟೋಕಾಲ್ ಇರುವ ಗಣ್ಯರಿಗೆ ಮಾತ್ರ ಶಿಫಾರಸು ದರ್ಶನಕ್ಕೆ ಅವಕಾಶವಿರುತ್ತದೆ.
ತಿರುಮಲ ನಿವಾಸಿಗಳಿಗೂ ದರ್ಶನ ಭಾಗ್ಯ
ತಿರುಮಲದ ನಿವಾಸಿಗಳಿಗೆ, ಟಿಟಿಡಿ ಜನವರಿ 6, 7 ಮತ್ತು 8ರಂದು ಪ್ರತಿದಿನ 5,000 ಸರ್ವ ದರ್ಶನ ಟೋಕನ್‌ಗಳನ್ನು ನೀಡಲಿದೆ. ಅಂತಿಮ ದಿನಗಳಲ್ಲಿ ಸ್ಥಳೀಯರಿಗೆ ಪ್ರವೇಶವನ್ನು ನೀಡಲಾಗುತ್ತದೆ ಎಂದು ಟಿಟಿಡಿ ಮೂಲಗಳು ತಿಳಿಸಿವೆ.
Advertisement