

ಚೆನ್ನೈ: ಕರೂರು ಕಾಲ್ತುಳಿತ ಘಟನೆಯ ಸುಮಾರು 2 ತಿಂಗಳ ವಿರಾಮದ ನಂತರ ತಮಿಳಿಗ ವೆಟ್ರಿ ಕಳಗಂ (TVK) ಮುಖ್ಯಸ್ಥ ವಿಜಯ್ ಭಾನುವಾರ 2026ರ ವಿಧಾನಸಭಾ ಚುನಾವಣೆಗೆ ತಮ್ಮ ಪ್ರಚಾರವನ್ನು ಪುನರಾರಂಭಿಸಿದರು. ಆಡಳಿತಾರೂಢ ಡಿಎಂಕೆಯನ್ನು ಗುರಿಯಾಗಿಸಿಕೊಂಡ ಅವರು, 'ಲೂಟಿ' ಮತ್ತು ಕುಟುಂಬ ರಾಜಕಾರಣದ ವಿರುದ್ಧ ಕಿಡಿಕಾರಿದರು.
ಕಾಂಚೀಪುರಂ ಜಿಲ್ಲೆಯ ಸುಂಗುವರ್ಚತ್ತಿರಂನಲ್ಲಿ ಶಿಕ್ಷಣ ಸಂಸ್ಥೆಯ ಒಳಾಂಗಣ ಸಭಾಂಗಣದಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಮತ್ತು ಸ್ಥಳೀಯ ಜನರನ್ನು ಉದ್ದೇಶಿಸಿ ಮಾತನಾಡಿದರು.
ಟಿವಿಕೆ ಸಿದ್ಧಾಂತದ ಬಗ್ಗೆ ಪ್ರಶ್ನಿಸಿದ್ದಕ್ಕಾಗಿ ಡಿಎಂಕೆಯನ್ನು ತರಾಟೆಗೆ ತೆಗೆದುಕೊಂಡ ವಿಜಯ್, 'ನಮ್ಮ ಪಕ್ಷವು ಘನ ಸೈದ್ಧಾಂತಿಕ ನಿಲುವುಗಳ ಮೇಲೆ ಸ್ಥಾಪಿತವಾಗಿದೆ ಮತ್ತು ಅದು ಸಮಾನತೆಯ ತತ್ವದಿಂದ ಪ್ರಾರಂಭವಾಗುತ್ತದೆ ಮತ್ತು ಇತರ ವಿಷಯಗಳ ಜೊತೆಗೆ, ಜಾತಿ ಗಣತಿಯನ್ನು ಒತ್ತಾಯಿಸಿದೆ' ಎಂದು ಪ್ರತಿಪಾದಿಸಿದರು.
ನೀಟ್ (ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ) ಕೊನೆಗೊಳಿಸುವ ಬಗ್ಗೆ ಡಿಎಂಕೆಯಂತೆ ಟಿವಿಕೆ 'ಖಾಲಿ ಭರವಸೆಗಳನ್ನು' ನೀಡುವುದಿಲ್ಲ. ಬದಲಾಗಿ, ಶಿಕ್ಷಣದ ಮೇಲಿನ ನಿಯಂತ್ರಣವನ್ನು ಭಾರತೀಯ ಸಂವಿಧಾನದಲ್ಲಿ ಸಮಕಾಲೀನ ಪಟ್ಟಿಯಿಂದ ರಾಜ್ಯ ಪಟ್ಟಿಗೆ ಬದಲಾಯಿಸುವುದರತ್ತ (ಇದು ರಾಜ್ಯ ಸರ್ಕಾರಗಳಿಗೆ ಶಿಕ್ಷಣ ನೀತಿಗಳ ಮೇಲೆ ಹೆಚ್ಚಿನ ಅಧಿಕಾರವನ್ನು ಹೊಂದಲು ಅನುವು ಮಾಡಿಕೊಡುತ್ತದೆ) ಟಿವಿಕೆ ಹೆಚ್ಚು ಗಮನಹರಿಸುತ್ತದೆ ಎಂದರು.
ಸೆಪ್ಟೆಂಬರ್ 27 ರಂದು ಕರೂರಿನಲ್ಲಿ ನಡೆದ ಕಾಲ್ತುಳಿತದ ನಂತರ, ವಿಜಯ್ ತಮ್ಮ ಪಕ್ಷದ ಕಾರ್ಯಕರ್ತರು ಮತ್ತು ಜನರನ್ನು ಉದ್ದೇಶಿಸಿ ಮಾತನಾಡುತ್ತಿರುವುದು ಇದೇ ಮೊದಲು. ತಮಿಳುನಾಡಿನಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಮುನ್ನ ಅವರು ತಮ್ಮ ಪ್ರಚಾರವನ್ನು ಪುನರಾರಂಭಿಸಿದ್ದಾರೆ.
Advertisement