

ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಗುಲದ ಶಿಖರದ ಮೇಲೆ 10 ಅಡಿ ಎತ್ತರದ ಭಗವಾಧ್ವಜವನ್ನು ಹಾರಿಸಿದ್ದಾರೆ.
ಧ್ವಜಾರೋಹಣ ಸಮಯದಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರ ಪ್ರದೇಶ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಾಥ್ ನೀಡಿದ್ದಾರೆ.
ಹಿಂದೂ ಸಂಪ್ರದಾಯದಲ್ಲಿ ಶುಭವೆಂದು ಪರಿಗಣಿಸಲಾದ 'ಅಭಿಜಿತ್ ಮುಹೂರ್ತ'ದ ಸಮಯದಲ್ಲಿ ಧ್ವಜಾರೋಹಣ ನೆರವೇರಿಸಲಾಗಿದೆ. ಈ ದಿನ ಮಾರ್ಗಶಿರ ಶುಕ್ಲ ಪಂಚಮಿ ತಿಥಿಯಾಗಿದ್ದು, ಇದೇ ದಿನ ಶ್ರೀರಾಮ ಮತ್ತು ಸೀತೆಯರ ವಿವಾಹವಾಗಿತ್ತು.
ಅಯೋಧ್ಯೆಯಲ್ಲಿ 48 ಗಂಟೆಗಳ ಕಾಲ ಅಖಂಡ ತಪಸು ಕೈಗೊಂಡ ಸಿಖ್ ಗುರು ತೇಗಬಹದ್ದೂರರ ಬಲಿದಾನ ದಿನವೂ ಇವತ್ತೇ ಬಂದಿದೆ. ಹಾಗಾಗಿ ಇದೇ ದಿನ ಈ ಮಂಗಳ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಿಎಂಒ ತಿಳಿಸಿದೆ.
ಇನ್ನು ಶಿಖರದ ಮೇಲೆ ಸ್ಥಾಪಿಸಲಾದ 42 ಅಡಿ ಎತ್ತರದ ಧ್ವಜಸ್ತಂಭವನ್ನು 360 ಡಿಗ್ರಿ ತಿರುಗುವಂತೆ ವಿನ್ಯಾಸಗೊಳಿಸಲಾಗಿದೆ. ಧ್ವಜವು ಕೇಸರಿ ಬಣ್ಣ ಹಾಗೂ ತ್ರಿಕೋನಾಕೃತಿಯಲ್ಲಿದೆ. 10 ಅಡಿ ಎತ್ತರ ಮತ್ತು 20 ಅಡಿ ಉದ್ದವಿದೆ. ಇದರ ಮೇಲೆ ಸೂರ್ಯ, 'ಓಂ' ಹಾಗೂ ಕೋವಿದಾರ ಮರವನ್ನು ಚಿತ್ರಿಸಲಾಗಿದೆ. ಸೂರ್ಯನ ಚಿತ್ರ ರಾಮನ ವಂಶವಾದ ಸೂರ್ಯವಂಶವನ್ನು ಸೂಚಿಸುತ್ತದೆ. “ಓಂ' ಶುಭಸೂಚಕವಾಗಿದ್ದು, ಕೋವಿದಾರ ಮರವು ಅಯೋಧ್ಯೆಯ ಪ್ರಾಚೀನ ಸಂಪ್ರದಾಯಗಳನ್ನು ಪ್ರತಿನಿಧಿಸುತ್ತದೆ.
ಧ್ವಜಾರೋಹಣ ಸಮಾರಂಭಕ್ಕೂ ಮುನ್ನ, ಪ್ರಧಾನಿ ಮೋದಿಯವರು ಮಹರ್ಷಿ ವಾಲ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೇವಾಲಯ ಸಂಕೀರ್ಣದವರೆಗೆ ರೋಡ್ ಶೋ ನಡೆಸಿದರು.
ಭಾರೀ ಭದ್ರತಾ ನಿಯೋಜನೆಯ ನಡುವೆ ಮೋದಿ ಅವರ ಬೆಂಗಾವಲು ಪಡೆ ಹಾದು ಹೋಗುವಾಗ ಮಹಿಳೆಯರು ಮತ್ತು ಯುವಕರು ಸೇರಿದಂತೆ ಹೆಚ್ಚಿನ ಸಂಖ್ಯೆಯ ನಿವಾಸಿಗಳು ಮತ್ತು ಭಕ್ತರು ಮಾರ್ಗದುದ್ದಕ್ಕೂ ಸಾಲುಗಟ್ಟಿ ನಿಂತು ಹೂವಿನ ಮಳೆಯನ್ನೇ ಸುರಿಸಿರು. ಹಲವರು ತ್ರಿವರ್ಣ ಧ್ವಜವನ್ನು ಬೀಸಿದರೆ, ಇತರರು ಕಮಲದ ಲಾಂಛನವಿರುವ ಬಿಜೆಪಿ ಧ್ವಜಗಳನ್ನು ಹಿಡಿದು ನಿಂತಿರುವುದು ಕಂಡು ಬಂದಿತು
ಮೋದಿಯವರು ಅಯೋಧ್ಯೆಗೆ ಆಗಮಿಸಿದ ವೇಳೆ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಮತ್ತು ಮುಖ್ಯಮಂತ್ರಿ ಆದಿತ್ಯನಾಥ್ ಔಪಚಾರಿಕವಾಗಿ ಸ್ವಾಗತಿಸಿದರು.
ಮುಖ್ಯ ಕಾರ್ಯಕ್ರಮಕ್ಕೆ ಹೋಗುವ ಮೊದಲು, ಪ್ರಧಾನಿ ಮೋದಿಯವರು ರಾಮ ಜನ್ಮಭೂಮಿ ಮಂದಿರ ಸಂಕೀರ್ಣದೊಳಗಿನ ಸಪ್ತ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿದರು.
Advertisement