

ನವದೆಹಲಿ: ಆಫ್ರಿಕಾದ ಇಥಿಯೋಪಿಯಾದಲ್ಲಿ ಜ್ವಾಲಾಮುಖಿಯೊಂದು ಸ್ಫೋಟಗೊಂಡಿದ್ದು, ಇದರ ಬೂದಿ ಮಿಶ್ರಿತ ಹೊಗೆಯು ಉತ್ತರ ಭಾರತದತ್ತ ಬರುತ್ತಿದೆ. ಪರಿಣಾಮ ವಿಮಾನಗಳ ಹಾರಾಟಕ್ಕೆ ಅಡ್ಡಿಯುಂಟಾಗಿದೆ ಎಂದು ತಿಳಿದುಬಂದಿದೆ.
ಬೂದಿ ಹೊಗೆಯಿಂದಾಗಿ ಆಗಸದಲ್ಲಿ ಗೋಚರತೆ ಕಡಿಮೆಯಾಗಿದ್ದು, ಇದು ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ದೆಹಲಿ-ಎನ್‌ಸಿಆರ್ ಮತ್ತು ಪಂಜಾಬ್‌ನಾದ್ಯಂತ ವಾಯು ಸಂಚಾರಕ್ಕೆ ಅಡ್ಡಿಯುಂಟು ಮಾಡಿದೆ.
ಹೈಲಿ ಗುಬ್ಬಿ ಎಂಬ ಜ್ವಾಲಾಮುಖಿಯ ಬೂದಿ ಮಿಶ್ರಿತ ಹೊಗೆಯು ಭೂತಾನ್‌ಗೂ ವ್ಯಾಪಿಸಲಿದ್ದು, ಹಿಮಾಲಯ ದವರೆಗೆ ಹೋಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಈಗಾಗಲೇ ಹದಗೆಟ್ಟಿರುವ ದೆಹಲಿ ಮತ್ತು ಎನ್‌ಸಿಆರ್ ಗಾಳಿ ಗುಣಮಟ್ಟ ಇನ್ನಷ್ಟು ಕುಸಿವ ಭೀತಿ ಎದುರಾಗಿದೆ. ಇದರ ಬೆನ್ನಲ್ಲೇ ಭಾರತದ ಹಲವು ವಿಮಾನಗಳು ಕೊಲ್ಲಿ ರಾಷ್ಟ್ರಗಳಿಗೆ ಸೇವೆಯನ್ನು ರದ್ದುಗೊಳಿಸಿವೆ.
ಭಾರತೀಯ ವಿಮಾನಯಾನ ಸಂಸ್ಥೆಗಳಾದ ಏರ್ ಇಂಡಿಯಾ ಮತ್ತು ಆಕಾಶ್ ಏರ್ ಹಲವಾರು ವಿಮಾನಗಳ ಹಾರಾಟವನ್ನು ರದ್ದುಗೊಳಿಸಿವೆ.
ಹೈಲಿ ಗುಬ್ಬಿ ಎಂಬ ಹೆಸರಿನ ಜ್ವಾಲಾ ಮುಖಿಯು ಇಥಿಯೋಪಿಯಾದ ಅಫಾರ್ ಪ್ರಾಂತ್ಯದಲ್ಲಿ ಸಿಡಿದಿದೆ. ಇದರ ಸ್ಪೋಟದ ತೀವ್ರತೆಗೆ ಆಸುಪಾಸಿನ ಊರುಗಳಲ್ಲಿ ಕಂಪನದ ಅನುಭವವಾಗಿದೆ.
ಹೊಗೆಯು ಸಂಪೂರ್ಣ ಗ್ರಾಮವನ್ನೇ ಆಹುತಿ ಪಡೆದುಕೊಂಡಿದೆ. ಮುಂದುವರಿದು ಕೆಂಪು ಸಮುದ್ರ ದಾಟಿ, ಪಕ್ಕದ ಯೆಮೆನ್, ಒಮಾನ್ ಮತ್ತು ಅರಬ್ಬಿ ಸಮುದ್ರವನ್ನು ಕ್ರಮಿಸಲಿದೆ.
ಹಾಗೆ ಕರಾಚಿ, ಗುಜರಾತ್ ಮೂಲಕ ಭಾರತಕ್ಕೆ ಪ್ರವೇಶಿಸಲಿದೆ. ಬಳಿಕ ದೆಹಲಿ ಹರ್ಯಾಣ, ಉತ್ತರ ಪ್ರದೇಶ ಮೂಲಕ ಬಿಹಾರ, ಭೂತಾನ್ ಪ್ರವೇಶಿಸಿ ಅಸಾಂ ಮೂಲಕ ಹಿಮಾಲಯದವರೆಗೆ ಹೋಗಲಿದೆ ಎಂದು ಅಂದಾಜಿಸಲಾಗಿದೆ.
ಬೂದಿ ಹೊಗೆಯ ಸಂಬಂಧ ವಿಮಾನಯಾನ ಕಂಪನಿಗಳು ಕೊಲ್ಲಿ ದೇಶಗಳಿಗೆ ವಿಮಾನ ರದ್ದುಗೊಳಿಸಿವೆ. ಜೊತೆಗೆ ಡಿಜಿಸಿಎ ವಿಮಾನ ನಿಲ್ದಾಣದ ಮುನ್ನೆಚ್ಚರಿಕೆ ನೀಡಿದೆ.
ಡಿಜಿಸಿಎ ಸಲಹೆಯ ನಂತರ, ಏರ್ ಇಂಡಿಯಾ ಸೋಮವಾರ ಎಕ್ಸ್‌ನಲ್ಲಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಸೋಮವಾರದಿಂದ 13 ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಸಂಭಾವ್ಯ ಪರಿಣಾಮ ಬೀರುವ ಪ್ರದೇಶಗಳಲ್ಲಿ ಹಾರಾಟ ನಡೆಸಿದ ವಿಮಾನಗಳ ತಪಾಸಣೆಯನ್ನು ಸಹ ಪ್ರಾರಂಭಿಸಲಾಗಿದೆ ಎಂದು ಹೇಳಿದೆ.
ಇಥಿಯೋಪಿಯಾದಲ್ಲಿ ಜ್ವಾಲಾಮುಖಿ ಸ್ಫೋಟದ ನಂತರ, ಕೆಲವು ಭೌಗೋಳಿಕ ಪ್ರದೇಶಗಳಲ್ಲಿ ಬೂದಿಹೊಗೆ ಕಂಡು ಬರುತ್ತಿದ್ದು, ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಮತ್ತು ನಮ್ಮ ಕಾರ್ಯಾಚರಣಾ ಸಿಬ್ಬಂದಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಈ ಸಮಯದಲ್ಲಿ ಏರ್ ಇಂಡಿಯಾ ವಿಮಾನಗಳ ಮೇಲೆ ಯಾವುದೇ ಪ್ರಮುಖ ಪರಿಣಾಮವಿಲ್ಲ. ನಮ್ಮ ಪ್ರಯಾಣಿಕರು, ಸಿಬ್ಬಂದಿ ಮತ್ತು ವಿಮಾನಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮುನ್ನೆಚ್ಚರಿಕೆಗಳೊಂದಿಗೆ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ, ಇದು ನಮ್ಮ ಪ್ರಮುಖ ಆದ್ಯತೆಯಾಗಿದೆ. ನಮ್ಮ ಪ್ರಯಾಣಿಕರನ್ನು ಬೆಂಬಲಿಸುವುದನ್ನು ಮುಂದುವರಿಸುತ್ತೇವೆ ಎಂದು ತಿಳಿಸಿದೆ.
ಆಕಾಶ್ ಏರ್ ಕೂಡ ಹೇಳಿಕೆ ಬಿಡುಗಡೆ ಮಾಡಿದ್ದು, ಮಧ್ಯಪ್ರಾಚ್ಯ ಮತ್ತು ದಕ್ಷಿಣ ಏಷ್ಯಾದ ಕೆಲವು ಭಾಗಗಳಲ್ಲಿ ಬೂದಿ ದಟ್ಟಣೆ ಹರಡಿದ್ದರಿಂದ ಕುವೈತ್ ಮತ್ತು ಅಬುಧಾಬಿಗೆ ಸೇವೆಗಳನ್ನು ಒಳಗೊಂಡಂತೆ ಹಲವಾರು ವಿಮಾನಗಳನ್ನು ರದ್ದುಗೊಳಿಸಿರುವುದಾಗಿ ತಿಳಿಸಿದೆ.
ಜ್ವಾಲಾಮುಖಿ ಪರಿಣಾಮ ದೆಹಲಿ ವಿಮಾನ ನಿಲ್ದಾಣದಲ್ಲಿ ಕನಿಷ್ಠ 7 ಅಂತರರಾಷ್ಟ್ರೀಯ ವಿಮಾನಗಳು, ಆಗಮನ ಮತ್ತು ನಿರ್ಗಮನಗಳು ಸೇರಿದಂತೆ ಒಟ್ಟು 12 ವಿಮಾನಗಳು ವಿಳಂಬವಾಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರತ ಹವಾಮಾನ ಇಲಾಖೆ (IMD) ಮಾಹಿತಿ ನೀಡಿ, ಬೂದಿಯುಕ್ತ ಹೊಗೆ ಇದೀಗ ಪೂರ್ವಕ್ಕೆ ಚಲಿಸುತ್ತಿದ್ದು, ಮಂಗಳವಾರ ಸಂಜೆ 7:30 ರ ಸುಮಾರಿಗೆ ಭಾರತದ ವಾಯುಪ್ರದೇಶದಿಂದ ಹೊರಬಂದು ಚೀನಾ ಕಡೆಗೆ ಚಲಿಸುವ ನಿರೀಕ್ಷೆಯಿದೆ ಎಂದು ತಿಳಿಸಿದೆ.
ಗುಜರಾತ್, ದೆಹಲಿ-ಎನ್‌ಸಿಆರ್, ರಾಜಸ್ಥಾನ, ಪಂಜಾಬ್ ಮತ್ತು ಹರಿಯಾಣದ ಮೇಲೆ ಬೂದಿ ಹೊಗೆ ಪರಿಣಾಮ ಬೀರಲಿದ್ದು, ಈ ಪ್ರದೇಶಗಳಲ್ಲಿ ಮಾಲಿನ್ಯ ಮಟ್ಟವನ್ನು ತಾತ್ಕಾಲಿಕವಾಗಿ ಹದಗೆಡಿಸುವ ಸಾಧ್ಯತೆಯಿದೆ ಮುನ್ಸೂಚನೆ ನೀಡಿದೆ.
Advertisement