

ಹೈದರಾಬಾದ್: ದುಬೈನಿಂದ ಹೈದರಾಬಾದ್‌ಗೆ ತೆರಳುವ ವಿಮಾನದಲ್ಲಿ ಗಗನಸಖಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಸಾಫ್ಟ್‌ವೇರ್ ಉದ್ಯೋಗಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಕ್ಯಾಬಿನ್ ಸಿಬ್ಬಂದಿ ನೀಡಿದ ದೂರಿನ ಪ್ರಕಾರ, ಕೇರಳ ಮೂಲದ ಪ್ರಯಾಣಿಕನು ಶುಕ್ರವಾರ ಪ್ರಯಾಣಿಸುತ್ತಿದ್ದ ವೇಳೆಯಲ್ಲಿ, ಸೇವೆಗಳನ್ನು ಒದಗಿಸುತ್ತಿದ್ದಾಗ ಗಗನಸಖಿಯನ್ನು ಮುಟ್ಟಿದ್ದಾನೆ ಎಂದು ರಾಜೀವ್ ಗಾಂಧಿ ಅಂತರರಾಷ್ಟ್ರೀಯ (ಆರ್‌ಜಿಐ) ವಿಮಾನ ನಿಲ್ದಾಣ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಕಂಕಯ್ಯ ಸಮಪತಿ ತಿಳಿಸಿದ್ದಾರೆ.
ಆತನ ವಿರುದ್ಧ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ದಾಖಲಿಸಲಾಗಿದೆ.
30 ವರ್ಷದ ಆತ ಮದ್ಯದ ಅಮಲಿನಲ್ಲಿರುವಂತೆ ಕಾಣುತ್ತಿರುವುದನ್ನು ಕ್ಯಾಬಿನ್ ಸಿಬ್ಬಂದಿ ಗಮನಿಸಿದ್ದಾರೆ. ವಿಮಾನ ಲ್ಯಾಂಡ್ ಆದ ಕೂಡಲೇ ಈ ವಿಚಾರವನ್ನು ಕ್ಯಾಪ್ಟನ್ ಮತ್ತು ವಿಮಾನ ನಿಲ್ದಾಣದ ಸಿಬ್ಬಂದಿಗೆ ತಿಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನು ತನ್ನ ಪಾಸ್‌ಪೋರ್ಟ್ ಕಳೆದುಹೋಗಿರುವುದಾಗಿ ತಿಳಿಸಿದ್ದಾನೆ. ಅದನ್ನು ಹುಡುಕಲು ತೆರಳಿದಾಗ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು 'ಅಶ್ಲೀಲ ಮತ್ತು ನಿಂದನೀಯ' ಹೇಳಿಕೆಗಳನ್ನು ಹೊಂದಿರುವ ಕಾಗದ ಕಂಡುಬಂದಿದೆ.
ದೂರಿನ ಆಧಾರದ ಮೇಲೆ, ಆರೋಪಿ ವಿರುದ್ಧ ಸೆಕ್ಷನ್ 74 (ಮಹಿಳೆಯ ಮೇಲೆ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ), ಸೆಕ್ಷನ್ 75 (ಲೈಂಗಿಕ ಕಿರುಕುಳ) ಮತ್ತು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ನ ಇತರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ಆತನನ್ನು ಬಂಧಿಸಲಾಗಿದೆ ಎಂದು ಇನ್ಸ್‌ಪೆಕ್ಟರ್ ಹೇಳಿದರು.
ಆತನನ್ನು ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement