
ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 156ನೇ ಜನ್ಮದಿನದ ನಿಮಿತ್ತ ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ರಾಜ್‌ಘಾಟ್‌ನಲ್ಲಿರುವ ಅವರ ಸಮಾಧಿಗೆ ಪುಷ್ಪನಮನ ಸಲ್ಲಿಸಿದ್ದಾರೆ.
ನವದೆಹಲಿಯ ರಾಜ್‌ಘಾಟ್‌ನಲ್ಲಿರುವ ಮಹತ್ಮಾ ಗಾಂಧಿ ಸಮಾಧಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗಣ್ಯರು ಪುಷ್ಪ ನಮನ ಸಲ್ಲಿಸಿದರು.
ಇದಕ್ಕೂ ಮುನ್ನ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದ ಮೋದಿಯವರು, ಗಾಂಧಿ ಜಯಂತಿಯು ಬಾಪು ಅವರ ಅಸಾಧಾರಣ ಜೀವನಕ್ಕೆ ಗೌರವ ಸಲ್ಲಿಸುವುದಾಗಿದೆ, ಅವರ ಆದರ್ಶಗಳು ಮಾನವ ಇತಿಹಾಸದ ಹಾದಿಯನ್ನು ಪರಿವರ್ತಿಸಿದವು. ಧೈರ್ಯ ಮತ್ತು ಸರಳತೆ ಹೇಗೆ ದೊಡ್ಡ ಬದಲಾವಣೆಯ ಸಾಧನಗಳಾಗಬಹುದು ಎಂಬುದನ್ನು ಅವರು ತೋರಿಸಿಕೊಟ್ಟರು. ಸೇವೆ ಮತ್ತು ಕರುಣೆ ಜನರನ್ನು ಸಬಲೀಕರಣಗೊಳಿಸುವ ಅಗತ್ಯ ಸಾಧನ ಎಂದು ನಂಬಿದ್ದರು. ವಿಕಸಿತ ಭಾರತವನ್ನು ನಿರ್ಮಿಸುವ ನಮ್ಮ ಅನ್ವೇಷಣೆಯಲ್ಲಿ ನಾವು ಅವರ ಮಾರ್ಗವನ್ನು ಅನುಸರಿಸುತ್ತೇವೆಂದು ಹೇಳಿದ್ದರು.
ಮತ್ತೊಂದು ಪೋಸ್ಟ್ ನಲ್ಲಿ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ನೆನೆದು, ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳನ್ನು ತಿಳಿಸಿದ್ದಾರೆ.
ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಅಸಾಧಾರಣ ರಾಜಕಾರಣಿಯಾಗಿದ್ದು, ಅವರ ಸಮಗ್ರತೆ, ನಮ್ರತೆ ಮತ್ತು ದೃಢಸಂಕಲ್ಪವು ಸವಾಲಿನ ಸಮಯದಲ್ಲೂ ಭಾರತವನ್ನು ಬಲಪಡಿಸಿತು. ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಪ್ರಭಾವಿ ನಾಯಕತ್ವ, ಶಕ್ತಿ ಮತ್ತು ನಿರ್ಣಾಯಕ ವ್ಯಕ್ತಿತ್ವವನ್ನು ಹೊಂದಿದ್ದರು. 'ಜೈ ಜವಾನ್ ಜೈ ಕಿಸಾನ್' ಎಂಬ ಅವರ ಸ್ಪಷ್ಟ ಕರೆ ನಮ್ಮ ಜನರಲ್ಲಿ ದೇಶಭಕ್ತಿಯ ಮನೋಭಾವವನ್ನು ಹುಟ್ಟುಹಾಕಿತು. ಬಲಿಷ್ಠ ಮತ್ತು ಸ್ವಾವಲಂಬಿ ಭಾರತವನ್ನು ನಿರ್ಮಿಸುವ ಪ್ರಯತ್ನದಲ್ಲಿ ಅವರು ನಮ್ಮನ್ನು ಪ್ರೇರೇಪಿಸುತ್ತಲೇ ಇದ್ದಾರೆಂದು ಹೇಳಿದ್ದಾರೆ.
Advertisement