
ನವದೆಹಲಿ: ಎರಡು ವರ್ಷಗಳ ಇಸ್ರೇಲ್-ಹಮಾಸ್ ಯುದ್ಧ ಇದೀಗ ಅಂತಿಮ ಹಂತ ತಲುಪಿದ್ದು, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ 20 ಅಂಶಗಳ ಗಾಜಾ ಶಾಂತಿ ಒಪ್ಪಂದವನ್ನು ಇಸ್ರೇಲ್ ಒಪ್ಪಿಕೊಂಡ ಬಳಿಕ ಹಮಾಸ್ ಉಗ್ರ ಸಂಘಟನೆ ಕೂಡ ಭಾಗಶಃ ಒಪ್ಪಿಕೊಂಡಿರುವ ಬೆಳವಣಿಗೆಗಳು ಕಂಡು ಬಂದಿದೆ.
ಟ್ರಂಪ್ ಅವರ 20 ಅಂಶಗಳ ಶಾಂತಿ ಒಪ್ಪಂದದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಮಾಸ್, ತಮ್ಮ ಹಿಡಿತದಲ್ಲಿರುವ ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಒಪ್ಪಿಗೆ ನೀಡಿದೆ. ಹಾಗೆಯೇ ಅಧಿಕಾರವನ್ನು ಪ್ಯಾಲೆಸ್ಟೈನ್ಗೆ ಹಸ್ತಾಂತರಿಸಲು ಸಿದ್ಧವಾಗಿದೆ. ಆದರೆ, ಮಾತುಕತೆಯ ಷರತ್ತನ್ನು ವಿಧಿಸಿದೆ.
ಈ ನಡುವೆ ಹಮಾಸ್ ಹೇಳಿಕೆಯನ್ನು ಸ್ವಾಗತಿಸಿರುವ ಡೊನಾಲ್ಟ್ ಟ್ರಂಪ್ ಅವರು, ಅವರು ಶಾಶ್ವತ ಶಾಂತಿಗೆ ಸಿದ್ದರಾಗಿದ್ದಾರೆಂದು ನಾನು ನಂಬುತ್ತೇನೆ. ಇಸ್ರೇಲ್ ಗಾಜಾದ ಮೇಲೆ ನಡೆಸುತ್ತಿರುವ ಬಾಂಬ್ ದಾಳಿಯನ್ನು ತಕ್ಷಣವೇ ನಿಲ್ಲಿಸಬೇಕು. ಇದರಿಂದ ನಾವು ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಮತ್ತು ತ್ವರಿತವಾಗಿ ಹೊರತರಬಹುದು. ಇದೀಗ, ಹಾಗೆ ಮಾಡುವುದು ತುಂಬಾ ಅಪಾಯಕಾರಿ. ನಾವು ಈಗಾಗಲೇ ವಿವರಗಳ ಕುರಿತು ಚರ್ಚೆಯಲ್ಲಿದ್ದೇವೆ. ಇದು ಗಾಜಾ ಬಗ್ಗೆ ಮಾತ್ರವಲ್ಲ, ಮಧ್ಯಪ್ರಾಚ್ಯದಲ್ಲಿ ಬಹುಕಾಲದಿಂದ ಬಯಸುತ್ತಿರುವ ಶಾಂತಿಯ ಬಗ್ಗೆ ಎಂದು ಹೇಳಿದ್ದಾರೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕಚೇರಿ ಕೂಡ ಪ್ರತಿಕ್ರಿಯಿಸಿ, ಟ್ರಂಪ್ ಅವರ ಯೋಜನೆಯ ಮೊದಲ ಹಂತದ ಅನುಷ್ಠಾನಕ್ಕೆ ಸಿದ್ದವಾಗಿದೆ. ಇಸ್ರೇಲ್ ಈ ಹಿಂದೆ ನಿಗದಿಪಡಿಸಿದ ತತ್ವಗಳ ಆಧಾರದ ಮೇಲೆ ಯುದ್ಧ ಕೊನೆಗಾಣಿಸಲು ಇಸ್ರೇಲ್ ಬದ್ಧವಾಗಿದೆ ಎಂದು ಹೇಳಿದೆ.
ಏತನ್ಮಧ್ಯೆ ಇಸ್ರೇಲ್-ಹಮಾಸ್ ಯುದ್ಧ ಕೊನೆಗೊಳಿಸುವಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಡೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸ್ವಾಗತಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಗಾಜಾದಲ್ಲಿ ಶಾಂತಿ ಪ್ರಯತ್ನಗಳು ನಿರ್ಣಾಯಕ ಪ್ರಗತಿ ಸಾಧಿಸುತ್ತಿದ್ದು, ಈ ನಿಟ್ಟಿನಲ್ಲಿ ಅಮೆರಿಕಾ ಅಧ್ಯಕ್ಷ ಟ್ರಂಪ್ ಅವರ ಮುಂದಾಳತ್ವವನ್ನು ನಾವು ಸ್ವಾಗತಿಸುತ್ತೇವೆ. ಒತ್ತೆಯಾಳುಗಳ ಬಿಡುಗಡೆಯ ಹಮಾಸ್ ಒಪ್ಪಿಗೆ ನೀಡುವುದು ಒಂದು ಮಹತ್ವದ ಹೆಜ್ಜೆಯಾಗಿದೆ.
ಶಾಶ್ವತ ಮತ್ತು ನ್ಯಾಯಯುತ ಶಾಂತಿಗಾಗಿ ನಡೆಸುವ ಎಲ್ಲಾ ಪ್ರಯತ್ನಗಳನ್ನು ಭಾರತವು ಬಲವಾಗಿ ಬೆಂಬಲಿಸುತ್ತದೆ ಮತ್ತು ಈ ಬೆಂಬಲವನ್ನು ಮುಂದುವರಿಸುತ್ತದೆ ಎಂದು ಹೇಳಿದ್ದಾರೆ.
ನಿನ್ನೆಯಷ್ಟೇ ಡೊನಾಲ್ಡ್ ಟ್ಕಂರ್ ಅವರು ಹಮಾಸ್‌ಗೆ ಅಂತಿಮ ಎಚ್ಚರಿಕೆ ನೀಡಿದ್ದರು. ಭಾನುವಾರದೊಳಗೆ ಗಾಜಾ ಒಪ್ಪಂದವನ್ನು ಒಪ್ಪಿಕೊಳ್ಳಿ.. ಇಲ್ಲದಿದ್ದರೆ ನೀವಿರುವ ಸ್ಥಳದಲ್ಲೇ ನರಕ ದರ್ಶನ ಮಾಡಿಸುತ್ತೇವೆಂದು ಕೆಂಡಕಾರಿದ್ದರು.
ಈ ಕೊನೆಯ ಅವಕಾಶದ ಒಪ್ಪಂದವನ್ನು ತಲುಪದಿದ್ದರೆ, ಯಾರೂ ಹಿಂದೆಂದೂ ನೋಡಿರದಷ್ಟು ನರಕವು ಹಮಾಸ್ ವಿರುದ್ಧ ಸಿಡಿಯುತ್ತದೆ. ಅವರು ನಾಗರಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು. ಎಲ್ಲಾ ಮುಗ್ಧ ಪ್ಯಾಲೆಸ್ಟೀನಿಯನ್ನರು ಗಾಜಾದ ಸುರಕ್ಷಿತ ಭಾಗಗಳಿಗೆ ತಕ್ಷಣವೇ ಈ ಸಂಭಾವ್ಯ ದೊಡ್ಡ ಭವಿಷ್ಯದ ಸಾವಿನ ಪ್ರದೇಶವನ್ನು ತೊರೆಯಬೇಕೆಂದು ನಾನು ಕೇಳುತ್ತಿದ್ದೇನೆ. ಸಹಾಯಕ್ಕಾಗಿ ಕಾಯುತ್ತಿರುವವರು ಎಲ್ಲರಿಗೂ ಚೆನ್ನಾಗಿ ಕಾಳಜಿವಹಿಸುತ್ತಾರೆ. ಆದಾಗ್ಯೂ, ಹಮಾಸ್‌ಗೆ ಒಂದು ಕೊನೆಯ ಅವಕಾಶವನ್ನು ನೀಡಲಾಗುವುದು ಎಂದು ಹೇಳಿದ್ದರು.
ಹಮಾಸ್‌ನ ಹೆಚ್ಚಿನ ಹೋರಾಟಗಾರರು ಸುತ್ತುವರೆದಿದ್ದಾರೆ ಮತ್ತು ಮಿಲಿಟರಿ ಬಲೆಗೆ ಬಿದ್ದಿದ್ದಾರೆ, ಅವರ ಜೀವಗಳು ಬೇಗನೆ ನಾಶವಾಗಲು ನನ್ನ ಅಂತಿಮ ಆದೇಶಕ್ಕೆ ಕಾಯುತ್ತಿದ್ದಾರೆ. ಉಳಿದವರ ವಿಷಯದಲ್ಲಿ, ನೀವು ಎಲ್ಲಿದ್ದೀರಿ ಮತ್ತು ಯಾರೆಂದು ನಮಗೆ ತಿಳಿದಿದೆ ಮತ್ತು ನಿಮ್ಮನ್ನು ಬೇಟೆಯಾಡಲಾಗುತ್ತದೆ ಮತ್ತು ಕೊಲ್ಲಲಾಗುತ್ತದೆ ಎಂದು ಎಚ್ಚರಿಸಿದ್ದರು.
ಅಕ್ಟೋಬರ್ 7, 2023 ರಂದು ಹಮಾಸ್ ಇಸ್ರೇಲ್ ಮೇಲೆ ನಡೆಸಿದ ದಾಳಿಯೊಂದಿಗೆ ಈ ಸಂಘರ್ಷ ಪ್ರಾರಂಭವಾಯಿತು. ಅಂದು ಹಮಾಸ್ ನಡೆಸಿದ ನರಮೇಧದಲ್ಲಿ 1,219 ಜನರು ಸಾವನ್ನಪ್ಪಿದ್ದರು, ಅವರಲ್ಲಿ ಹೆಚ್ಚಿನವರು ಇಸ್ರೇಲಿ ನಾಗರಿಕರು ಎಂದು ಎಎಫ್‌ಪಿ ಇಸ್ರೇಲಿ ಅಧಿಕೃತ ಅಂಕಿಅಂಶಗಳು ತಿಳಿಸಿವೆ. ಈ ದಾಳಿ ಬಳಿಕ ಇಸ್ರೇಲ್ ಸೇನೆ ನಡೆಸಿದ ದಾಳಿಯಲ್ಲಿ ಕನಿಷ್ಠ 66,225 ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿದ್ದಾರೆ. ಈ ಪೈಕಿ ಹೆಚ್ಚಾಗಿ ಮಹಿಳೆಯರು ಮತ್ತು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆ ಮತ್ತು ಹಕ್ಕುಗಳ ಗುಂಪುಗಳು ವಿಶ್ವಾಸಾರ್ಹವೆಂದು ಪರಿಗಣಿಸುವ ಗಾಜಾ ಆರೋಗ್ಯ ಸಚಿವಾಲಯ ತಿಳಿಸಿದೆ.
Advertisement