
ನವದೆಹಲಿ: ವೈದ್ಯನ ಕೊಲೆ, ಹಲವು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ನೇಪಾಳ ಪ್ರಜೆ ಪೊಲೀಸರ ಎನ್ಕೌಂಟರ್ ನಲ್ಲಿ ಸಾವನ್ನಪ್ಪಿದ್ದಾರೆ.
ದೆಹಲಿ ಮತ್ತು ಗುರುಗ್ರಾಮ್ ಪೊಲೀಸರ ಜಂಟಿ ಕಾರ್ಯಾಚರಣೆಯ ಸಂದರ್ಭದಲ್ಲಿ ಆಗ್ನೇಯ ದೆಹಲಿಯ ಅಸ್ತಾ ಕುಂಜ್ ಪಾರ್ಕ್ ಬಳಿ ಎನ್ಕೌಂಟರ್ ನಡೆದಿದೆ.\
ಎನ್ಕೌಂಟರ್ ನಲ್ಲಿ ಸಾವನ್ನಪ್ಪಿದ ವ್ಯಕ್ತಿಯನ್ನು ನೇಪಾಳದ ಲಾಲ್‌ಪುರ ಮೂಲದ ಭೀಮ್ ಮಹಾಬಹಾದ್ದೂರ್ ಜೋರಾ (39) ಎಂದು ಗುರ್ತಿಸಲಾಗಿದೆ. ಈತ ದೆಹಲಿ, ಗುರುಗ್ರಾಮ್, ಗುಜರಾತ್ ಮತ್ತು ಬೆಂಗಳೂರಿನಾದ್ಯಂತ ಹಲವಾರು ಕೊಲೆ, ದರೋಡೆ ಮತ್ತು ಕಳ್ಳತನ ಪ್ರಕರಣಗಳಲ್ಲಿ ಬೇಕಾಗಿದ್ದ.
ಮೇ 2024 ರಲ್ಲಿ ಜಂಗ್‌ಪುರ ಮೂಲದ ವೈದ್ಯ ಡಾ. ಯೋಗೇಶ್ ಚಂದರ್ ಪಾಲ್ ಅವರ ಕೊಲೆಗೆ ಸಂಬಂಧಿಸಿದಂತೆ ಈತ ಬೇಕಾಗಿದ್ದ. ಈತನ ಕುರಿತು ಸುಳಿವು ನೀಡಿದವರಿಗೆ ಅಧಿಕಾರಿಗಳು 1 ಲಕ್ಷ ರೂ. ಬಹುಮಾನವನ್ನೂ ಘೋಷಿಸಿದ್ದರು.
ಈ ನಡುವೆ ಸುಳಿವು ದೊರೆತ ಹಿನ್ನೆಲೆಯಲ್ಲಿ, ಗುರುಗ್ರಾಮ ಅಪರಾಧ ನಿಗ್ರಹ ದಳ ಮತ್ತು ದೆಹಲಿ ಪೊಲೀಸರ ವಿಶೇಷ ಪಡೆ ಬೆಳಗಿನ ಜಾವ 12:20 ರ ಸುಮಾರಿಗೆ ಆಸ್ತಾ ಕುಂಜ್ ಪಾರ್ಕ್ ಬಳಿ ಆರೋಪಿಯನ್ನು ತಡೆದಿದ್ದಾರೆ. ಆದರೆ, ಆರೋಪಿ ಪೊಲೀಸರ ಮೇಲೆ 6 ಸುತ್ತು ಗುಂಡುಗಳನ್ನು ಹಾರಿಸಿದ್ದು, ಅಧಿಕಾರಿಗಳು ಪ್ರತಿ ದಾಳಿ ನಡೆಸಿದ್ದಾರೆ. ಈ ವೇಳೆ ಗಾಯಗೊಂಡ ಆರೋಪಿ, ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
Advertisement